ಕಾಗೋಡುಗೆ ಸಂಪುಟ ದರ್ಜೆ ಸಚಿವ ಸ್ಥಾನಕ್ಕೆ ಆಗ್ರಹ
ಸಾಗರ: ಕಾಂಗ್ರಸ್ನ ಹಿರಿಯ ಮುತ್ಸದ್ಧಿ ಕಾಗೋಡು ತಿಮ್ಮಪ್ಪನವರಿಗೆ ಕ್ಯಾಬಿನೆಟ್ ದರ್ಜೆ ಸಚಿವಸ್ಥಾನ ನೀಡುವ ಮೂಲಕ ಕಾಂಗ್ರೆಸ್ ಅವರ ಅನುಭವವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಹೊಳೆಯಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅವರು, ಕಾಗೋಡು ತಿಮ್ಮಪ್ಪನವರು ಸಾಗರ ಕ್ಷೇತ್ರದಿಂದ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅನೇಕ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿ, ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಬಾರಿಯೂ ಅವರಿಗೆ ಉತ್ತಮ ಖಾತೆ ನೀಡಬೇಕು ಎಂದರು.
ಹಿಂದಿನ ಶಾಸಕರ ಅವಧಿಯಲ್ಲಿ ಕುಡಿಯುವ ನೀರಿಗಾಗಿ ಟಾಸ್ಕ್ ಫೋರ್ಸ್ ಸಮಿತಿಗೆ 60 ಲಕ್ಷ ರು. ಬಿಡುಗಡೆ ಮಾಡಲಾಗಿತ್ತು. ಆದರೆ ಅಂದಿನ ಶಾಸಕರು ಕುಡಿಯುವ ನೀರು ಪೂರೈಕೆ ಯೋಜನೆಗಾಗಿ ಈ ಹಣವನ್ನು ಸದ್ಭಳಕೆ ಮಾಡಿಕೊಂಡಿಲ್ಲ.
ಕಾಗೋಡು ತಿಮ್ಮಪ್ಪನವರು ಶಾಸಕರಾದ ತಕ್ಷಣ ಜಿಪಂ, ತಾಪಂ ಹಾಗೂ ನಗರಸಭೆ ಸದಸ್ಯರ ಸಭೆ ಕರೆದು ಗ್ರಾಮಾಂತರ ಹಾಗೂ ನಗರ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಂಡಿದ್ದಾರೆ.
ಜೊತೆಗೆ ತುರ್ತು ನೀರು ಪೂರೈಕೆ ಯೋಜನೆಗಾಗಿ ಪೈಪ್ ಲೈನ್ ಅಳವಡಿಕೆ, ಕೊಳವೆಬಾವಿ ನಿರ್ಮಾಣ, ತೆರೆದ ಬಾವಿ ನಿರ್ಮಾಣ ಕಾಮಗಾರಿ ಕೈಗೊಳ್ಳಲು 2 ಕೋಟಿ ರು. ವೆಚ್ಚದ ಯೋಜನೆ ತಯಾರಿಸಿದ್ದಾರೆ ಎಂದು ಹೇಳಿದರು.
ಮಕ್ಬೂಲ್ ಅಹಮದ್, ಐ.ಎನ್. ಸುರೇಶಬಾಬು, ಭೀಮನೇರಿ ಶಿವಪ್ಪ, ಮಲ್ಲಿಕಾರ್ಜುನ ಹಕ್ರೆ, ಸುಂದರಸಿಂಗ್, ಜಿ.ಕೆ. ಬೈರಪ್ಪ, ತೀ.ನ. ಶ್ರೀನಿವಾಸ್, ನಂದಾ ಗೊಜನೂರು, ಲಲಿತಮ್ಮ, ಡಿ. ದಿನೇಶ್, ಮಹಾಬಲ ಕೌತಿ, ತಾರಾಮೂತರ್, ಗಣಾಧೀಶ್, ಉಷಾ ಹಾಜರಿದ್ದರು.