ಬಸದಿ ಪಂಚಕಲ್ಯಾಣ ಮಹೋತ್ಸವ
ಕ.ಪ್ರ.ವಾರ್ತೆ, ಹೊಸನಗರ, ಮೇ 15
ಹೊಂಬುಜ ಜೈನಮಠದ ಗುಡ್ಡದಬಸದಿಯ ಪಂಚಕಲ್ಯಾಣ ಮಹೋತ್ಸವ ಅಂಗವಾಗಿ ಶ್ರೀ ಪಾಶ್ವನಾಥ ಸ್ವಾಮಿ ಮೂರ್ತಿಗೆ ವಿವಿಧ ಧಾರ್ಮಿಕ ವಿಧಿ ವಿಧಾನದೊಂದಿಗೆ ಮಹಾಮಸ್ತಕಾಭಿಷೇಕ ನೆರವೇರಿಸಲಾಯಿತು.
ಹೊಂಬುಜ ಮಠದ ದೇವೇಂದ್ರಕೀರ್ತಿ ಸ್ವಾಮೀಜಿ ಮತ್ತು ಜೈನಪೀಠದ ವಿವಿಧ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಕಲ್ಯಾಣಮಂದಿ ಆರಾಧನೆ 1008 ಕಲಶಗಳಿಂದ ಪಂಚಾಮೃತ ಅಭಿಷೇಕ, ಕಬ್ಬಿನಹಾಲು, ಎಳನೀರು, ಪ್ರಥಮಕಲಶ, ಕಷಾಯ, ಕ್ಷೀರಾ,ಅರಶಿನ, ಚೂರ್ಣ ಸೇರಿದಂತೆ ವಿವಿಧ ಅಭಿಷೇಕಗಳೊಂದಿಗೆ ಶ್ರೀ ಪಾರ್ಶ್ವನಾಥ ಸ್ವಾಮಿಯ ಆರಾಧನೆ ನೆರವೇರಿಸಲಾಯಿತು.
ಸೇವಾಕರ್ತರಾದ ಜಯವರ್ಮರಾಜ ಬಲ್ಲಾಳ್, ಅಪ್ಪಾಸಾಹೇಬ್ ತವನಪ್ಪ, ಭೀಮರಾವ್ ತವನಪ್ಪ, ಸುವರ್ಣಮ್ಮ ಬೆಳ್ಳೂರು, ಡಿ.ಆರ್. ಶಹಾ, ವಿಜಯಲಕ್ಷ್ಮಿ ಪಾಟೀಲ್, ರಾಕೇಶ ಕೊಕ್ಕರ್ಣೆ, ಚಂದ್ರನಾಥ ಪಾಟೀಲ್, ಪ್ರವೀಣಚಂದ್ ವೈನಾಡ್, ಶೀತಲ್ ಗೋಗಿ, ಪುಷ್ಪರಾಜ್ ಮಂಗಳೂರು, ಆಶಾ ಡಿ ಸಂಗಮಿ ಮತ್ತು ವಿವಿಧ ಪ್ರಮುಖರು ವಿವಿಧ ಅಭಿಷೇಕ ಕೈಗೊಂಡರು.
ಧರ್ಮಸಂದೇಶ ಅನುಷ್ಠಾನ: ಅಭಿಷೇಕದ ನಂತರ ಆಶೀರ್ವಚನ ನೀಡಿದ ಮೂಡಬಿದಿರೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಷ್ಟು ಬದುಕು ಪಾವನವಾಗುತ್ತದೆ. ಅಲ್ಲದೆ ಉತ್ತಮ ಸಮಾಜದ ನಿರ್ಮಾಣದಲ್ಲಿ ಧರ್ಮಗ್ರಂಥದ ಸಂದೇಶ ಅನುಷ್ಠಾನ ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪಂಚಕಲ್ಯಾಣ ಮಹೋತ್ಸವ ಸಮಿತಿ ಉಪಾಧ್ಯಕ್ಷ ಕೆ. ಜಯವರ್ಮರಾಜ್ ಬಲ್ಲಾಳರಿಗೆ ಧರ್ಮ ದಿವಾಕರ ಪ್ರಶಸ್ತಿ ನೀಡಿ ಹೊಂಬುಜ ಮಠದ ದೇವೇಂದ್ರಕೀರ್ತಿ ಸ್ವಾಮೀಜಿಗಳು ಗೌರವಿಸಿದರು. ಡಿ.ಆರ್. ಶಹಾ ಮತ್ತು ಸಂಗೀತಗಾರ ವಿದ್ಯಾಸಾಗರ ಬಡಬಡೆಯವರನ್ನು ಸನ್ಮಾನಿಸಲಾಯಿತು.
ಮುನಿಶ್ರೀ ನಿಜಾನಂದ್ ಮಹಾರಾಜ್, ಅಮೃತಸೇನಾ ಮಹಾರಾಜ್, ಮಾತಾಜಿ ವೀರಮತಿ, ಅತ್ಯುಲ್ಯ ಸಾಗರ, ಲಕ್ಕವಳ್ಳಿ ವೃಷಭಸೇನಾ ಭಟ್ಟಾರಕ ಸ್ವಾಮೀಜಿ, ಪಂಚಕಲ್ಯಾಣ ಮಹೋತ್ಸವ ಸಮಿತಿ ಅಧ್ಯಕ್ಷ ಡಿ. ಸುರೇಂದ್ರಕುಮಾರ್, ಕಾರ್ಯಾಧ್ಯಕ್ಷ ಎಸ್. ಜೀತೇಂದ್ರಕುಮಾರ್, ಹಂಪ ನಾಗರಾಜಯ್ಯ, ವಿವಿಧ ಧಾರ್ಮಿಕ ಮುಖಂಡರು, ಜೈನ ಸಮುದಾಯದ ಪ್ರಮುಖರು ಪಾಲ್ಗೊಂಡಿದ್ದರು. ಮಹಮಸ್ತಾಭಿಷೇಕ ದಿನದ ರಾಜ್ಯದ ಮೂಲೆಗಳಿಂದ ಭಕ್ತರು ಆಗಮಿಸಿದ್ದರು.
ಇಂದು ವೀರೇಂದ್ರ ಹೆಗ್ಗಡೆ ಆಗಮನ
ಹೊಂಬುಜದಲ್ಲಿ ನಡೆಯುತ್ತಿರುವ ಗುಡ್ಡದ ಬಸದಿ ಪಂಚಕಲ್ಯಾಣ ಮಹೋತ್ವವದ ಸಮಾರೋಪ ಮೇ 16ರಂದು ನಡೆಯಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಹೊಂಬುಜ ಅನುಸಂಧಾನ ಗ್ರಂಥದ ಲೋಕಾರ್ಪಣೆ ನಡೆಯಲಿದೆ.
--