32 ಎಕರೆಯಲ್ಲಿ ಅರಣ್ಯ ಯೋಜನೆ
ಕಪ್ರ ವಾರ್ತೆ, ಶಿವಮೊಗ್ಗ, ಮೇ 16
ಒಂದು ವರ್ಷ ನಾಲ್ಕು ತಿಂಗಳ ಕಾಲ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದು, ಒಂದಷ್ಟು ಕೆಲಸ ಮಾಡಿದ್ದೇನೆ. ಇನ್ನಷ್ಟು ಕಾರ್ಯ ಮಾಡುವ ಉದ್ದೇಶವಿತ್ತು ಎಂದು ನಿರ್ಗಮಿತ ಸೂಡಾ ಅಧ್ಯಕ್ಷ ಎಸ್. ದತ್ತಾತ್ರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ- ಭದ್ರಾವತಿ ನಗರದ ಸಮಗ್ರ ಅಭಿವೃದ್ಧಿಗಾಗಿ ಮಹಾ ಯೋಜನೆ ರೂಪಿಸಿದ್ದು, ಇದನ್ನು ಸಂಪೂರ್ಣ ಹಂತಕ್ಕೆ ಮುಟ್ಟಿಸಿ, ಸರ್ಕಾರದ ಅಂಕಿತ ಹಾಕಿಸಿದೆ. ಅನೇಕ ತಾಪತ್ರಯಗಳು ಎದುರಾದರೂ ಅವುಗಳನ್ನು ನಿವಾರಿಸಲಾಯಿತು. ನಗರಾಭಿವೃದ್ಧಿ ಸಚಿವರಾಗಿದ್ದ ಸುರೇಶ್ ಕುಮಾರ್ ಅವರೇ ಮಹಾ ಯೋಜನೆ ಚೆನ್ನಾಗಿದೆ ಎಂದು ಶಬ್ಬಾಸ್ ಗಿರಿ ನೀಡಿದ್ದರು ಎಂದು ತಿಳಿಸಿದರು.
2 ನಗರಗಳಲ್ಲಿ ಕೆಲಸ: ಶಿವಮೊಗ್ಗ-ಭದ್ರಾವತಿ ಪಟ್ಟಣಗಳ ವ್ಯವಸ್ಥಿತ ಬೆಳವಣಿಗೆಗೆ ಸಂಬಂಧಿಸಿದಂತೆ ಮಹಾಯೋಜನೆ -2031 ಎಂಬ ಯೋಜನೆ ಅಡಿಯೇ ಎರಡು ನಗರಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದರು.
ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆ ಹಾದು ಹೋಗಿದ್ದರಿಂದ ನಿವೇಶನ ಕಳೆದುಕೊಂಡಿದ್ದ ಸುಮಾರು 120 ನಿವೇಶನದಾರರಿಗೆ ಪ್ರತ್ಯೇಕವಾಗಿ ನಿವೇಶನ ರಚನೆ ಮಾಡಿ ನೀಡಲಾಗಿದೆ. ತುಂಗಾ ಮೇಲ್ದಂಡೆ ಯೋಜನೆಯಿಂದ ಜಮೀನು ಪಡೆದು ನಿವೇಶನ ಹಂಚಲಾಯಿತು ಎಂದ ಅವರು, ಪ್ರಾಧಿಕಾರದ ಸಿಬ್ಬಂದಿಗೆ ಸಿ ಎಂಡ್ ಆರ್ ರೂಲ್ ಸಿದ್ಧಪಡಿಸಿ ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಿದರು.
ಯೋಜನೆ ಅನುಷ್ಠಾನ: ನಗರ ಅರಣ್ಯೀಕರಣ ಯೋಜನೆಯನ್ನು ಜಾರಿಗೆ ತಂದಿದ್ದು, ನಗರದೊಳಗಿನ ವಿವಿಧ ಕಡೆ 32 ಎಕರೆಯಲ್ಲಿ ಪ್ರಾಧಿಕಾರವು ಅರಣ್ಯ ಬೆಳೆಸಲು ಯೋಜನೆ ಅನುಷ್ಠಾನ ಮಾಡುತ್ತಿದೆ ಎಂದರು.
ಅಟಲ್ ಬಿಹಾರಿ ವಾಜಪೇಯಿ ಬಡಾವಣೆ, ಜೆಎಚ್ ಪಟೇಲ್ ಬಡಾವಣೆ, ಕುವೆಂಪು ನಗರದಲ್ಲಿ ಅರಣ್ಯ ಬೆಳೆಸಲಾಗುತ್ತಿದೆ. ಇದಕ್ಕಾಗಿಯೇ ಪ್ರತ್ಯೇಕ ಬೋರ್ವೆಲ್ ತೆಗೆಸಿ ನೀರಾವರಿ ವ್ಯವಸ್ಥೆ ಮಾಡಲಾಗುತ್ತಿದ್ದು, ಗಿಡಗಳು ಚೆನ್ನಾಗಿ ಬೆಳೆದಿವೆ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಪ್ರಾಧಿಕಾರದ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆದಿದ್ದು, ಲಾಭ ರಹಿತ-ನಷ್ಟ ರಹಿತ ಆಧಾರದಲ್ಲಿ ಈ ಸಮುದಾಯ ಭವನವನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುತ್ತದೆ ಎಂದ ಅವರು, ಪ್ರಾಧಿಕಾರದಿಂದ ಊರಗಡೂರಿನಲ್ಲಿ ಎರಡು ಲೇ ಔಟ್ ನಿರ್ಮಾಣ ಹಂತದಲ್ಲಿದೆ. 15 ಕೋಟಿ ವೆಚ್ಚದಲ್ಲಿ ವಾಜಪೇಯಿ ಬಡಾವಣೆಯಲ್ಲಿ ಕಾಮಗಾರಿ ನಡೆಸಲಾಗಿದೆ. ಸಿಎ ಸೈಟ್ಗಳನ್ನು 35 ಸಂಸ್ಥೆಗಳಿಗೆ ಸಾಮಾಜಿಕ ಚಟುವಟಿಕೆ ನಡೆಸಲು ನೀಡಲಾಗಿದೆ. ಈ ಕಾರ್ಯ ತೃಪ್ತಿ ತಂದಿದೆ ಎಂದರು.
ಅಕ್ರಮ ನಡೆದಿಲ್ಲ: ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಸಾರ್ವಜನಿಕ ಉಪಯೋಗಕ್ಕೆ ಮೀಸಲಿಟ್ಟ ಸಿಎ ನಿವೇಶನ ಹಂಚಿಕೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಎಲ್ಲವೂ ಪಾರದರ್ಶಕವಾಗಿ ನಡೆಸಲಾಗಿದೆ ಎಂದು ಪ್ರಾಧಿಕಾರದ ನಿಗರ್ಮಿತ ಅಧ್ಯಕ್ಷ ದತ್ತಾತ್ರಿ ಸ್ಪಷ್ಟಪಡಿಸಿದ್ದಾರೆ.
ಪ್ರಾಧಿಕಾರದ ಸಿ.ಎ. ನಿವೇಶಹ ಹಂಚಿಕೆಯಲ್ಲಿ ಸಂಘಪರಿವಾರಕ್ಕೆ ಸೇರಿದ ಸಂಸ್ಥೆಗಳಿಗೆ ಅಕ್ರಮವಾಗಿ ನೀಡಲಾಗಿದೆ ಎಂಬ ಕಾಂಗ್ರೆಸ್ ಮುಖಂಡ ದಿವಾಕರ್ ಅವರ ಆರೋಪದ ಕುರಿತಂತೆ ಸುದ್ದಿಗಾರರು ಗಮನ ಸೆಳೆದಾಗ, ದತ್ತಾತ್ರಿಯವರು ಈ ಆರೋಪವನ್ನು ಅಲ್ಲಗಳೆದಿದ್ದಾರೆ. ತಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಂಘಪರಿವಾರಕ್ಕೆ ಸೇರಿದ ಸಂಘ- ಸಂಸ್ಥೆಗಳಿಗೆ ಹೆಚ್ಚಿನ ಸಿಎ ನಿವೇಶನ ನೀಡಲಾಗಿದೆ ಎಂಬುವುದೆಲ್ಲ ಸತ್ಯಕ್ಕೆ ದೂರವಾದುದಾಗಿದೆ.
ಕಾಂಗ್ರೆಸ್ ಮುಖಂಡ ದಿವಾಕರ್ರವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದರು. ಈ ಕುರಿತಂತೆ ತಾವು ದಿವಾಕರ್ ಅವರನ್ನು ನೇರವಾಗಿ ಸಂಪರ್ಕಿಸಿ ಚರ್ಚಿಸಿದ್ದೇನೆ. ಸಿಎ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿಲ್ಲ ಎಂಬುವುದನ್ನು ಅವರು ಕೂಡ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ತಿಳಿಸಿದರು.
ಕಾನೂನು ಪ್ರಕಾರವಾಗಿಯೇ ಸಿಎ ನಿವೇಶನ ಹಂಚಿಕೆ ಮಾಡಲಾಗಿದೆ, ಯಾವುದೇ ಲೋಪವಾಗಿಲ್ಲ. ಈ ಕುರಿತಂತೆ ನಾಗರಿಕರಲ್ಲಿ ಏನಾದರೂ ಅನುಮಾಗಳಿದ್ದರೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಸಮಗ್ರ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.
ಸೂಡಾ ನಾಮನಿರ್ದೇಶಿತ ಸದಸ್ಯ ವೆಂಕ್ಯಾನಾಯ್ಕ, ಮಂಜುನಾಥ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.