ತಾಲೂಕಿನ ವಿವಿಧೆಡೆ ನೀರಿಗೆ ಹಾಹಾಕಾರ
ಸೊರಬ: ತಾಲೂಕಿನ ವಿವಿಧ ಕಡೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಕೊಡಪಾನ ನೀರಿಗೆ ಸರದಿ ಹಚ್ಚುವ ಪರಿಸ್ಥಿತಿ ಪಟ್ಟಣದಲ್ಲಿ ಕಂಡು ಬಂದಿದೆ.
ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲೂ ಸಹಾ ನೀರಿನ ಕೊರತೆ ಕಾಣಿಸಿಕೊಂಡಿದ್ದು, ಪ್ರಮುಖ ಕೆರೆಗಳು ಬತ್ತಲಾರಂಭಿಸಿವೆ. ಇತ್ತ ನೀರಿಗಾಗಿ ಹಪಹಪಿಸುವ ನಡುವೆಯೆ ಡೆಂಘೀ ವ್ಯಾಧಿ ಕಾಣಿಸಿಕೊಂಡಿದ್ದು, ಜನತೆ ಕಂಗಾಲಾಗಿದ್ದಾರೆ.
ತಾಲೂಕಿನ ಜಡೆ ಮತ್ತು ಆನವಟ್ಟಿ ಭಾಗದ ಹಳ್ಳಿಗಳಲ್ಲಿ ಡೆಂಘೀ ಜ್ವರ ಕಾಣಿಸಿಕೊಂಡಿದೆ. ತತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾದ ಕೆಲವರಿಗೆ, ಈ ವ್ಯಾಪ್ತಿಯಲ್ಲಿನ ಭಾರಂಗಿ, ಗಂಗವಳ್ಳಿ, ಮೊದಲಾದ ಕಡೆ ಜ್ವರದಿಂದ ಬಳಲುತ್ತಿರುವವರು ಕಂಡು ಬಂದಿದ್ದಾರೆ. ಇವರ ರಕ್ತದ ಮಾದರಿಯಲ್ಲಿ ಡೆಂಘೀ ವೈರಾಣುಗಳು ಪತ್ತೆಯಾಗಿವೆ ಎಂದು ತಾಲೂಕು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಇಲಾಖೆ ವೈದ್ಯರುಗಳು ಗ್ರಾಮಕ್ಕೆ ತೆರಳಿ ಸಮೀಕ್ಷೆ ಹಾಗೂ ಮುನ್ನೆಚ್ಚರಿಕೆ ಕಾರ್ಯಕ್ರಮ ನಡೆಸಿದ್ದಾರೆ.