ನಿಗಮ-ಮಂಡಳಿಗೆ ರಾಜಿನಾಮೆ
ಶಿವಮೊಗ್ಗ: ಜಿಲ್ಲೆಯ ಮೂರು ಪ್ರಮುಖ ನಿಗಮ-ಮಂಡಳಿಗಳ ಅಧ್ಯಕ್ಷರು, ನಾಮ ನಿರ್ದೇಶಿತ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದಾರೆ.
ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ (ಕಾಡಾ) ಗಿರೀಶ್ ಪಟೇಲ್, ಮಲೆನಾಡ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ (ಎಂಎಡಿಬಿ) ಮಂಜುನಾಥ್ ಹಾಗೂ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ(ಸೂಡಾ) ಅಧ್ಯಕ್ಷ ದತ್ತಾತ್ರಿ ಸೇರಿದಂತೆ ಈ ಸಂಸ್ಥೆಗಳಿಗೆ ನೇಮಕವಾಗಿದ್ದ ನಾಮ ನಿರ್ದೇಶಿತ ಸದಸ್ಯರು ತಮ್ಮ ಸ್ಥಾನಗಳಿಗೆ ಗುರುವಾರ ಅಧಿಕೃತವಾಗಿ ರಾಜಿನಾಮೆ ಸಲ್ಲಿಸಿದ್ದಾರೆ.
ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ)ಅಧ್ಯಕ್ಷರಾಗಿದ್ದ ಆರಗ ಜ್ಞಾನೇಂದ್ರ ವಿಧಾನಸಭೆ ಚುನಾವಣೆ ಪೂರ್ವದಲ್ಲಿಯೇ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇದೀಗ ರಾಜಿನಾಮೆಯಿಂದ ಖಾಲಿ ಬಿದ್ದಿರುವ ನಿಗಮ-ಮಂಡಳಿಗಳಿಗೆ ಇಷ್ಟರಲ್ಲಿಯೇ ಸರ್ಕಾರ ನೂತನ ಅಧ್ಯಕ್ಷರು, ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲಿದೆ. ಈಗಾಗಲೇ ಕಾಂಗ್ರೆಸ್ ಮುಖಂಡರಲ್ಲಿ ತೆರವಾಗಿರುವ ಸ್ಥಾನಗಳಿಗೆ ಪೈಪೋಟಿ ಆರಂಭವಾಗಿದೆ.