ವಿಪ್ರರ ವೈವಾಹಿಕ ಸಮಸ್ಯೆ ಪರಿಹಾರಕ್ಕೆ ಯತ್ನ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 16
ವಿಪ್ರರ ವೈವಾಹಿಕ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದು, ಈ ಸಂಬಂಧ ವೆಬ್ಸೈಟ್ ರೂಪಿಸಲಾಗಿದೆ ಎಂದು ವಿಪ್ರ ನೌಕರರ ಸಂಘ ತಿಳಿಸಿದೆ.
ಯಾವುದೇ ಜನಾಂಗವಿರಲಿ ಈ ದೇಶದ ಆರ್ಥಿಕ ಉದಾರೀಕರಣ, ಜಾಗತೀಕರಣದ ವೇಗಕ್ಕೆ ಸಿಕ್ಕಿ ತನ್ನ ಸಂಸ್ಕೃತಿ ಸಾಮಾಜಿಕ ವ್ಯವಸ್ಥೆಗಳಲ್ಲಿ ಆಗುತ್ತಿರುವ ತೊಂದರೆಗಳಲ್ಲಿ ಸಿಲುಕಿ ಒದ್ದಾಡುತ್ತಿದೆ. ಇಂತಹ ಅನೇಕ ಸಮಸ್ಯೆಗಳು ವಿಪ್ರ ಸಮಾಜವನ್ನು ಸಹ ಬಿಟ್ಟಿಲ್ಲ. ಬದಲಾಗಿ ಯಾವುದೇ ಹೊಸ ವ್ಯವಸ್ಥೆಗಳನ್ನು ವೇಗವಾಗಿ ಅಳವಡಿಸಿಕೊಳ್ಳುವ ವಿಪ್ರ ಸಮಾಜವು ಅಷ್ಟೆ ವೇಗವಾಗಿ ಸಮಸ್ಯೆಗಳನ್ನು ಸಹ ತನ್ನ ಸಮಾಜದೊಳಗೆ ಎಳೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ಸಂಘಟನಾತ್ಮಕವಾಗಿ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವಿಪ್ರ ನೌಕರರ ಸಂಘವು ಸದಾ ಪ್ರಯತ್ನಿಸುತ್ತಿದೆ ಎಂದು ಸಂಘಟನೆಯ ಜಿ.ಎಸ್. ಅನಂತ ತಿಳಿಸಿದ್ದಾರೆ.
ವೈವಾಹಿಕ ಸಮಸ್ಯೆ ಪರಿಹಾರಕ್ಕೆ ಯತ್ನ: ಜಿಲ್ಲಾ ಬ್ರಾಹ್ಮಣ ಮಹಾ ಸಭಾ, ಜಿಲ್ಲಾ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಎಲ್ಲಾ ವಿಪ್ರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಈ ಹಿಂದೆ ನಗರದಲ್ಲಿ ನಡೆದ ವಿಪ್ರ ಜಾಗೃತಿ ಸಮಾವೇಶದಲ್ಲಿ 13 ಮಠಾಧೀಶರರು ಸಮಾಜಕ್ಕೆ ಮಾರ್ಗದರ್ಶನ ಮಾಡಿದ್ದರು. ಈ ಸಂದರ್ಭದಲ್ಲಿ ಅನೇಕ ನಿರ್ಣಯ ಕೈಗೊಳ್ಳಲಾಯಿತು. ಅದರ ಚಾಲನೆಗೆ ಕೆಲವು ವಿಪ್ರ ಸಂಘಟನೆಗೆ ಜವಾಬ್ದಾರಿಯನ್ನು ನೀಡಲಾಯಿತು. ಅದರಂತೆ ಜಿಲ್ಲಾ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘವು ವಿಪ್ರರ ವೈವಾಹಿಕ ಸಮಸ್ಯೆ ಮತ್ತು ಪರಿಹಾರಕ್ಕಾಗಿ ಕಾರ್ಯಪ್ರವೃತ್ತವಾಯಿತು. ಈ ಸಂದರ್ಭದಲ್ಲಿ ಜನಸಾಮಾನ್ಯರ, ಮಾಧ್ಯಮಗಳ ವಿಶ್ಲೇಷಣೆಯಂತೆ ಸತ್ಯಾಸತ್ಯತೆಯನ್ನು ಅರಿಯಲು ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜದ ನೇತೃತ್ವದಲ್ಲಿ 22 ಜನರ ತಂಡವೊಂದು ತಮ್ಮ ಸ್ವಂತ ಖರ್ಚಿನಲ್ಲಿ ದೆಹಲಿ, ಜಮ್ಮು, ನಗರೋಟದ ಕಾಶ್ಮೀರಿ ಪಂಡಿತರ ಕ್ಯಾಂಪ್, ಕಾಶಿ ಮತ್ತು ಗಯಾಗಳಲ್ಲಿ 12 ದಿವಸಗಳ ಪ್ರವಾಸ ಮತ್ತು ಸಭೆಗಳನ್ನು ಮಾಡಿ ಅಲ್ಲಿಯ ವಿಪ್ರರ ಮತ್ತು ಸಂಘಟನೆಗಳ ಜೊತೆ ಸಂಪರ್ಕ ಸಾಧಿಸಿ ಅಲ್ಪಮಟ್ಟಿನ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯವಾಯಿತು.
ಕೈ ಜೋಡಿಸಲು ಮನವಿ: ವೈವಾಹಿಕ ಸಮಸ್ಯೆಗಳಲ್ಲಿ ವಿಪ್ರರನ್ನು ಕಾಡುತ್ತಿರುವ ವಧುವಿನ ಸಮಸ್ಯೆಗೆ ತಕ್ಷಣಕ್ಕೆ ಪರಿಹಾರ ಸಿಗುವುದು ಅಸಾಧ್ಯವೆಂಬುದು ಸಹ ಸಾಮಾನ್ಯ ಸಂಗತಿ. ಈ ದಿಸೆಯಲ್ಲಿ ವಿಪ್ರ ನೌಕರರ ಸಂಘವು ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಸಮಾಜ ಬಾಂಧವರು ಹಾಗೂ ಸಂಘಟನೆಗಳು ನಮ್ಮ ಈ ಪ್ರಯತ್ನಕ್ಕೆ ಕೈ ಜೋಡಿಸಬೇಕೆಂದು ವಿನಂತಿಸಿಕೊಳ್ಳುವುದಾಗಿ ಸಂಘಟನೆ ತಿಳಿಸಿದೆ.
ಇದರ ಮುಂದುವರೆದ ಭಾಗವಾಗಿ ಉತ್ಸಾಹಿ ಬಿಎಸ್ಎನ್ಎಲ್ ವಿಪ್ರ ತಂಡವು ಯಾವುದೇ ವಾಣಿಜ್ಯಿಕ ವ್ಯವಹಾರದ ಅಂತರ್ಜಾಲಕ್ಕೆ ಕಡಿಮೆ ಇಲ್ಲದಂತೆ ಎಂಬ ವೆಬ್ಸೈಟನ್ನು ವಿನ್ಯಾಸಗೊಳಿಸಿ ವಿಪ್ರ ಸಮಾಜದ ಎಲ್ಲಾ ವರ್ಗಗಳಿಗೂ ಉಪಯೋಗವಾಗುವಂತೆ ಸುಲಭವಾಗಿ ಲಭ್ಯವಾಗುವಂತೆ ತಯಾರಿಸಿದೆ.
ಈಗಾಗಲೇ ಈ ವೆಬ್ಸೈಟ್ನಲ್ಲಿ 300ಕ್ಕೂ ಹೆಚ್ಚು ವಧು- ವರರ ಮಾಹಿತಿಗಳು ಲಭ್ಯವಿರುತ್ತದೆ. ಅಪ್ಪಾಜಿ ರಾವ್ ಕಾಂಪೌಂಡ್ನಲ್ಲಿರುವ ಕಚೇರಿಯಲ್ಲಿ ಸಂಜೆ 7ರಿಂದ 8ರವರೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಮೇ 19ರಂದು ಭಾನುವಾರ ಸಂಜೆ 4 ಗಂಟೆಗೆ ಈ ವೆಬ್ಸೈಟ್ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಘಟನೆ ತಿಳಿಸಿದೆ.