ಸುದ್ದಿ ಸಂಕ್ಷೇಪ
ಸಿಎಂ ಸಿದ್ದರಾಮಯ್ಯ ಅವರಿಗೆ ಡಿಎಸ್ಸೆಸ್ ಅಭಿನಂದನೆ
ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಕೂಡಲೇ ಕೈಗೊಂಡ ಅಭೂತಪೂರ್ವ ಚಾರಿತ್ರಿಕ ತೀರ್ಮಾನಗಳು ನೆಮ್ಮದಿಯ ಕರ್ನಾಟಕದ ಕಡೆಗಿನ ಹೆಜ್ಜೆಗುರುತುಗಳಾಗಿವೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಂ. ಗುರುಮೂರ್ತಿ ಹೇಳಿದ್ದಾರೆ.
ನಾಡಿನ ಎಲ್ಲಾ ನೊಂದವರ, ಅಸಹಾಯಕರ, ಶೋಷಿತರ, ಹಿಂದುಳಿದವರ ದನಿಯಾಗಿ ರಾಜಕೀಯ ಅಧಿಕಾರ ಚರಿತ್ರೆಯಲ್ಲಿ ದಾಖಲಾಗಿರುವ ಮೊದಲ ಮುಖ್ಯಮಂತ್ರಿ ಎಂದರೆ ಅದು ದೇವರಾಜ ಆರಸು ಮಾತ್ರ. ಅಂತಹ ದೀಮಂತ ವ್ಯಕ್ತಿತ್ವದ ಸಾಮಾಜಿಕ ಕಳಕಳಿಯ ಮತ್ತೊಬ್ಬ ನಾಯಕ ಎಸ್. ಬಂಗಾರಪ್ಪ. ಇವರ ನಂತರ ಅಂತಹ ಕಾಲ ಮತ್ತೊಮ್ಮೆ ಬಂದಿದೆ. ನೇರ, ಸರಳ, ಪ್ರಾಮಾಣಿಕ ವ್ಯಕ್ತಿತ್ವದ ಸಮಸ್ತ ಶೋಷಿತರ ಪರ ರಾಜಕಾರಣ ಮಾಡುತ್ತಲೇ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರರನ್ನು ದಸಂಸ ಅತ್ಯಂತ ಅಭಿಮಾನದಿಂದ ಅಭಿನಂದಿಸುತ್ತದೆ ಎಂದಿದ್ದಾರೆ.
ಬಡತನ ರೇಖೆಗಿಂತ ಕೆಳಗಿರುವವರಿಗೆ ಪ್ರತಿ ಕೆ.ಜಿ.ಗೆ 1 ರೂಪಾಯಿ ದರದಲ್ಲಿ ತಿಂಗಳಿಗೆ 30 ಕೆಜಿ ಅಕ್ಕಿ, ವಿವಿಧ ವಸತಿ ಯೋಜನೆಗಳ ಸಹಾಯಧನ ಹೆಚ್ಚಳ, ಪರಿಶಿಷ್ಟ ಜಾತಿ- ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳ ಫಲಾನುಭವಿಗಳು ಮಾಡಿದ್ದ ಸಾಲ ಮನ್ನ ಹಾಗೂ ಹಾಲು ಉತ್ಪಾದಕರಿಗೆ ಸಹಾಯಧನ ಮುಂತಾದ ನಿರ್ಣಯಗಳನ್ನು ಕೈಗೊಂಡ ಸಿದ್ದರಾಮಯ್ಯನವರು ಕಳೆದ 40 ವರ್ಷಗಳಿಂದ ಜನರ ನಡುವೆ ಬೆಳೆದು ಬಂದಿದ್ದಾರೆಂಬುದಕ್ಕೆ ಅವರ ಜನಪರವಾದ ಧೋರಣೆಗಳೇ ಸಾಕ್ಷಿಯಾಗಿವೆ ಎಂದಿದ್ದಾರೆ.
ವಿದ್ಯುತ್ ವ್ಯತ್ಯಯ
ಶಿವಮೊಗ್ಗ: ಮೇ 17, 18 ಮತ್ತು 20ರಂದು ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ಘಟಕ-4, ನಗರ ಉಪ ವಿಭಾಗ-2ರ ವ್ಯಾಪ್ತಿಯಲ್ಲಿ ಹೊಸ ಸಂಪರ್ಕ ಅಳವಡಿಸಲು ಮತ್ತು ಹಳೆಯ ವಿದ್ಯುತ್ ಕಂಬಗಳನ್ನು ಬದಲಾಯಿಸುವುದರಿಂದ ಪ್ರತಿದಿನ ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ಕೋಟೆ ರಸ್ತೆ, ಕೋಟೆ ಪೊಲೀಸ್ ಸ್ಟೇಷನ್ ಎದುರು, ಎಲ್‌ಐಸಿ ಆಫೀಸ್, ಎಸ್‌ಪಿಎಂ ರಸ್ತೆ, ಓ.ಪಿ. ರಸ್ತೆ, ಮಾರಿಗದ್ದಿಗೆ ಸುತ್ತಮುತ್ತ, ಲಷ್ಕರ್ ಮೊಹಲ್ಲಾ, ಶಿವಾಜಿ ಪಾರ್ಕ್, ಕೊಲ್ಲೂರಯ್ಯ ರಸ್ತೆ, ತುಳಜಾ ಭವಾನಿ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್ ಹತ್ತಿರ, ತಿರುಪಳಯ್ಯನ ಬೀದಿ, ಅಶೋಕ ರಸ್ತೆ, ನಾಗಪ್ಪನ ಕೇರಿ, ಗಂಗಾ ಪರಮೇಶ್ವರಿ ರಸ್ತೆ, ಆನವೇರಪ್ಪನ ಕೇರಿ, ಧರ್ಮರಾಯನ ಕೇರಿ, ಆಲೇಮಾನ್ ಕೇರಿ, ಕೃಷ್ಣ ಕೆಫೆ ಹಿಂಭಾಗ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.