ಅಧಿಕಾರವಿಲ್ಲದೆ ಕಳಾಹೀನವಾಗುತ್ತಾ ಶಿವಮೊಗ್ಗ?
ಕಾಗೋಡು, ಕಿಮ್ಮನೆ, ಪ್ರಸನ್ನ ಕುಮಾರ್ ಪೈಕಿ ಯಾರಿಗೆ ಒಲಿಯುತ್ತೆ ಮಂತ್ರಿ ಸ್ಥಾನ ಏಳು ವರ್ಷ ಬಂಪರ್ ಬೆಳೆ ತೆಗೆದ ಜಿಲ್ಲೆಗೆ ಈಗ ಮಂತ್ರಿ ಸ್ಥಾನ ಬಹುತೇಕ ಅನುಮಾನ
ಕ.ಪ್ರ.ವಾರ್ತ, ಶಿವಮೊಗ್ಗ, ಮೇ17 ಸುಮಾರು ಏಳು ವರ್ಷಗಳ ಕಾಲ ರಾಜಕೀಯ ಶಕ್ತಿ ಹಾಗೂ ಅಧಿಕಾರಯುಕ್ತ ವಿಚಾರದಲ್ಲಿ ಉತ್ತುಂಗದಲ್ಲಿದ್ದ ಶಿವಮೊಗ್ಗ ಜಿಲ್ಲೆ ಈಗ ಅಕ್ಷರಶಃ ಕಳಾಹೀನವಾಗುತ್ತಿದೆ. ಒಂದು ಮಂತ್ರಿ ಸ್ಥಾನಕ್ಕೂ ಪೈಪೋಟಿ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.
ರಾಜಕೀಯ ಮುತ್ಸದ್ದಿ, ಸಾಗರ ಶಾಸಕ ಕಾಗೋಡು ತಿಮ್ಮಪ್ಪನವರು ಮಂತ್ರಿಗಿರಿಗಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಅವರನ್ನು ಸ್ಪೀಕರ್ ಮಾಡುವ ಪ್ರಯತ್ನ ಪಕ್ಷದಲ್ಲಿ ನಡೆದಿದೆ. ಈ ನಡುವೆಯೇ ತೀರ್ಥಹಳ್ಳಿ ಶಾಸಕ ಕಿಮ್ಮನೆ ರತ್ನಾಕರ್ ಅಥವಾ ಶಿವಮೊಗ್ಗ ಶಾಸಕ ಪ್ರಸನ್ನಕುಮಾರ್ ಅವರಿಗೆ ಕೊನೆ ಕ್ಷಣದಲ್ಲಿ ಮಂತ್ರಿ ಸ್ಥಾನ ಸಿಕ್ಕರೆ ಆಶ್ಚರ್ಯವೇನಿಲ್ಲ. ಆದರೆ, ರಾಜಕೀಯ ಪೈಪೋಟಿ ನಡುವೆ ಜಿಲ್ಲೆಗೆ ಮಂತ್ರಿ ಸ್ಥಾನ ತಪ್ಪಿದರೆ ಪೂರ್ಣಪ್ರಮಾಣದಲ್ಲಿ ಶಿವಮೊಗ್ಗ ಜಿಲ್ಲೆ ರಾಜಕೀಯ ಅಧಿಕಾರ ಬಲದಿಂದ ಮುಕ್ತವಾದಂತಾಗಲಿದೆ.
ಹಿಂದೇನಾಗಿತ್ತು..?: ಈ ಹಿಂದಿನ ಏಳು ವರ್ಷಗಳಲ್ಲಿ ರಾಜಕೀಯ ಅಧಿಕಾರ ಬಲ ಶಿವಮೊಗ್ಗದಲ್ಲಿಯೇ ಉಳಿದುಕೊಂಡಿತ್ತು. ಒಂದಿಲ್ಲೊಂದು ರೀತಿ ಅಧಿಕಾರ ಶಿಮೊಮಗ್ಗ ಜಿಲ್ಲೆಯವರಿಗೆ ಒಲಿದು ಬಂದಿತ್ತು. ಒಂದು ಸಿಎಂ, ಎರಡು ಡಿಸಿಎಂ ಸೇರಿದಂತೆ, ಹಣಕಾಸು ಖಾತೆ, ಜಲಸಂಪನ್ಮೂಲ, ಇಂಧನ ಖಾತೆ ಶಿವಮೊಗ್ಗದ ಜನಪ್ರತಿನಿಧಿಗಳ ಕೈಯಲ್ಲೇ ಇತ್ತು.
ಈ ಅವಕಾಶದಿಂದಾಗಿ ಶಿವಮೊಗ್ಗ ಚಿತ್ರಣವೂ ಬದಲಾಯಿತು. ಪ್ರಮುಖವಾಗಿ ಶಿವಮೊಗ್ಗ ನಗರ ಹಾಗೂ ಶಿಕಾರಿಪುರ ಪಟ್ಟಣದ ಚಿತ್ರಣವೇ ಬದಲಾಯಿತು. ಸಾವಿರಾರು ಕೋಟಿ ರೂ. ಅಭಿವೃದ್ಧಿ ಹೆಸರಿನಲ್ಲಿ ಹರಿದು ಬಂತು. ಹತ್ತಾರು ಕಟ್ಟಡಗಳು ಚಿಗಿತು ನಿಂತವು. ಪ್ರಾಚೀನ ನಗರಿಯಂತಿದ್ದ ಶಿವಮೊಗ್ಗ ಕಂಗೊಳಿಸಲಾರಂಭಿಸಿತು.
ಬಿ.ಎಸ್.ಯಡಿಯೂರಪ್ಪ ಡಿಸಿಎಂ ಹಾಗೂ ಸಿಎಂ ಆಗಿ ಮಂಡಿಸಿದ ಬಜೆಟ್‌ನಿಂದ ಜಿಲ್ಲೆಗೆ ಅಪಾರ ಪ್ರಮಾಣದಲ್ಲಿ ಹಣಕಾಸು ನೆರವು ಬಂದವು. ಪ್ರಮುಖ ನಿರ್ಧಾರಗಳೂ ಆದವು. ಇದೇ ಸಂದರ್ಭದಲ್ಲಿ ಕೆ.ಎಸ್. ಈಶ್ವರಪ್ಪ ಕೂಡಾ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ನಿರ್ವಹಿಸಿದ ಜೊತೆಗೆ, ಇಂಧನ, ಜಲಸಂಪನ್ಮೂಲ, ಡಿಸಿಎಂ ಹುದ್ದೆ ಜೊತೆಗೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾಗಿಯೂ ಅಧಿಕಾರ ನಡೆಸಿದರು.
ಹೀಗೆ ಪ್ರಮುಖ ಖಾತೆಗಳು, ಹುದ್ದೆಗಳು ಇಲ್ಲಿನ ನಾಯಕರ ಬಳಿಯಲ್ಲೇ ಇದ್ದಿದ್ದು ಶಿವಮೊಗ್ಗಕ್ಕೆ ಸಾಕಷ್ಟು ಅನುಕೂಲವಾಗಿತ್ತು. ಈ ಅಧಿಕಾರ ಒಂದಷ್ಟು ಸ್ಥಳೀಯ ಜನರಿಗೆ, ಅಧಿಕಾರಿಗಳಿಗೆ ಅನುಕೂಲವೂ ಆಗಿತ್ತು.
ಆದರೀಗ ಪರಿಸ್ಥಿತಿ ಬದಲಾಗುವ ಹಂತ ತಲುಪಿದೆ. ಜಿಲ್ಲೆ ಯಾವೊಂದು ಮಂತ್ರಿ ಸ್ಥಾನ ಗಿಟ್ಟಿಸುವುದೂ ಕಷ್ಟವಾಗಿದೆ.
ಶಿವಮೊಗ್ಗಕ್ಕೆ ಹಿನ್ನಡೆ: ಕಳೆದ 7 ವರ್ಷಗಳಿಂದ ನೂರಾರು ಯೋಜನೆಗಳು ಅನುಷ್ಠಾನಕ್ಕೆ ಬಂದಿವೆ. ಕೆಲವು ಇನ್ನೂ ಅನುಷ್ಠಾನದ ಹಂತದಲ್ಲಿವೆ. ಅಭಿವೃದ್ಧಿಯ ರುಚಿಕಂಡ ಶಿವಮೊಗ್ಗಕ್ಕೆ ಹೊಸ ಸರ್ಕಾರದಲ್ಲಿ ಏಕಾಏಕಿ ಹಿನ್ನಡೆಯಾದಂತಾಗಿದೆ.
ಇಷ್ಟು ವರ್ಷ ಕಾಲ ಹರಿದುಬಂದ ಯೋಜನೆಗಳು ಇನ್ನು ಬರುವುದು ಕಷ್ಟವೇ. ಜೊತೆಗೆ ಅರ್ಧಕ್ಕೆ ನಿಂತ ಯೋಜನೆಗಳು ವೇಗವಾಗಿ ಮುಗಿಯುವುದು ಕಷ್ಟಸಾಧ್ಯವೇ. ಮಂತ್ರಿಗಳ ಮಟ್ಟದಲ್ಲಾದ ಕೆಲಸ ಮಾಡಿಕೊಳ್ಳಲು ಉದ್ಯಮಿಗಳು, ಜನ ಸಾಮಾನ್ಯರು, ಅಧಿಕಾರಿಗಳು ಕಷ್ಟಪಡಬೇಕಾಗಿಬರಹುದು.
ನಿಟ್ಟುಸಿರು ಬಿಟ್ಟರಪ್ಪ: ತಮಗೆ ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಕಾಂಗ್ರೆಸ್‌ನ ಶಾಸಕರೂ, ಶಿವಮೊಗ್ಗಕ್ಕೆ ಒಂದೇ ಒಂದು ಮಂತ್ರಿ ಸ್ಥಾನ ಸಿಗುತ್ತಿಲ್ಲವೆಂದು ರಾಜಕೀಯ ಮುಖಂಡರೂ ಚರ್ಚೆ ನಡೆಸುತ್ತಿರುವಾಗಲೇ ಜಿಲ್ಲೆಯ ಪೊಲೀಸ್ ಸಿಬ್ಬಂದಿ ಹಾಗೂ ಸರ್ಕಾರಿ ಅಧಿಕಾರಿಗಳು ಮಾತ್ರ ಈ ಸುದ್ದಿಯಿಂದ ನಿರಾಳರಾಗಿದ್ದಾರೆ.
ಶಿಷ್ಟಾಚಾರ ಪಾಲನೆಯಿಂದ ಬಳಲಿದ್ದ ಸರ್ಕಾರಿ ಅಧಿಕಾರಿಗಳು ಮತ್ತು ಭದ್ರತೆ ವಿಚಾರದಲ್ಲಿ ದಿನದ 16-18 ಗಂಟೆ ಅವಧಿ ಕೆಲಸ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿ ಪಾಲಿಗೆ ಮಾತ್ರ ಮಂತ್ರಿ ಸ್ಥಾನ ಸಿಗಲಿಲ್ಲ ಎಂಬುದು ಶುಭ ಸುದ್ದಿಯೇ.
ಪ್ರಮುಖ ಮಂತ್ರಿಗಳು, ಸಿಎಂ, ಡಿಸಿಎಂ ಜಿಲ್ಲೆಯಲ್ಲಿದ್ದರೆ ಭದ್ರತೆ, ಸಂಚಾರ ವ್ಯವಸ್ಥೆ ವಿಚಾರವಾಗಿ ಹೆಚ್ಚಿನ ಅವಧಿ ಮೀಸಲಿಡಬೇಕಾಗುತ್ತದೆ. ಹೀಗಾಗಿ ಅವರು ನಿರಾಳ.