ಕಾಗೋಡು ಸಚಿವಸ್ಥಾನಕ್ಕೆ ಆಗ್ರಹಿಸಿ ರಾಜಿನಾಮೆ
ಸಾಗರ: ಶಾಸಕ ಕಾಗೋಡು ತಿಮ್ಮಪ್ಪ ಅವರನ್ನು ಸಂಪುಟ ದರ್ಜೆ ಸಚಿವರನ್ನಾಗಿ ನೇಮಕ ಮಾಡದಿದ್ದಲ್ಲಿ ತಾಲೂಕಿನ ಕಾಂಗ್ರೆಸ್ ಪಕ್ಷದ ಎಲ್ಲಾ ಜನಪ್ರತಿನಿಧಿಗಳೂ ಸಾಮೂಹಿಕ ರಾಜಿನಾಮೆ ನೀಡುವುದಾಗಿ ತಾಪಂ ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ, ಈಗಾಗಲೇ ನಾಲ್ವರು ಜಿಪಂ ಸದಸ್ಯರು, 14 ಜನ ತಾಪಂ ಸದಸ್ಯರು ಹಾಗೂ ನಗರಸಭೆಯ 24 ಸದಸ್ಯರು ತಮ್ಮ ರಾಜಿನಾಮೆ ಪತ್ರವನ್ನು ಪಕ್ಷದ ಅಧ್ಯಕ್ಷರಿಗೆ ನೀಡಿದ್ದಾರೆ ಎಂದು ತಿಳಿಸಿದರು.
ಕಾಗೋಡು ತಿಮ್ಮಪ್ಪನವರನ್ನು ವಿಧಾಸಭಾಧ್ಯಕ್ಷರನ್ನಾಗಿಸುವ ಪಕ್ಷದ ತೀರ್ಮಾನಕ್ಕೆ ತಾಲೂಕು ಕಾಂಗ್ರೆಸ್ ಘಟಕ ಹಾಗೂ ಕಾರ್ಯಕರ್ತರ ತೀವ್ರ ವಿರೋಧ ಇದೆ. ವಿಧಾಸಭಾಧ್ಯಕ್ಷ ಸ್ಥಾನ ವಹಿಸಿಕೊಂಡಲ್ಲಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ತೀವ್ರ ಹಿನ್ನೆಡೆಯಾಗುವುದಲ್ಲದೆ, ಜನಸಂಪರ್ಕದಿಂದ ದೂರ ಇರುವುದರಿಂದ ಮತದಾರರ ಸಮಸ್ಯೆಗೆ ಸ್ಪಂದಿಸಲಾಗದು. ಮಲೆನಾಡಿನ ಇಂಡೀಕರಣ, ಅರಣ್ಯ ಭೂಮಿ ಒತ್ತುವರಿ, ಅಡಕೆ ಬೆಳೆಗಾರರ ಸಮಸ್ಯೆಗಳ ಕುರಿತು ಆಳವಾಗಿ ಮಾಹಿತಿ ಹೊಂದಿರುವ ಕಾಗೋಡು ತಿಮ್ಮಪ್ಪನವರು ವಿಧಾನಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತರೆ ವಿಧಾನಸಭೆಯಲ್ಲಿ ಈ ಕುರಿತು ಸರಿಯಾದ ಮಾಹಿತಿ ನೀಡುವವರೇ ಇರುವುದಿಲ್ಲ. ಹೀಗೆ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ, ಪಕ್ಷದ ಸಂಘಟನೆ, ಜನಸಂಪರ್ಕದ ಕೊರತೆ ನೀಗಿಸಲು ಅವರಿಗೆ ಮಂತ್ರಿ ಹುದ್ದೆಯೇ ಸೂಕ್ತ. ಈ ಹಿನ್ನೆಲೆಯಲ್ಲಿ ತಾವೆಲ್ಲರೂ ಸಾಮೂಹಿಕ ರಾಜಿನಾಮೆಗೆ ತೀರ್ಮಾನಿಸಿದ್ದಾಗಿ ಹೇಳಿದ್ದಾರೆ.
ಜಿಪಂ ಸದಸ್ಯರಾದ ಸುಮಂಗಲಾ ರಾಮಕೃಷ್ಣ, ಲಲಿತಾ ನಾರಾಯಣ, ನಗರಸಭೆ ಸದಸ್ಯರಾದ ಲಲಿತಮ್ಮ, ಎನ್. ಉಷಾ ಹಾಗೂ ತಾಪಂ ಸದಸ್ಯರು ಇದ್ದರು.
ಹೊಸನಗರದಲ್ಲಿ...
ಹೊಸನಗರ: ಹಲವು ಖಾತೆ ನಿರ್ವಹಿಸಿ ಉತ್ತಮ ಆಡಳಿತ ನೀಡಿದ ಅನುಭವ ಹೊಂದಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಸಚಿವ ಸ್ಥಾನ ನೀಡುವಂತೆ ಬೆಂಬಲಿಗರು ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ, ತಿಮ್ಮಪ್ಪ ಅವರನ್ನು ಸ್ಪೀಕರ್ ಮಾಡಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದ್ದು, ಸ್ಪೀಕರ್ ಸ್ಥಾನ ಯಾವುದೇ ಕಾರಣಕ್ಕೂ ಬೇಡ. ಸಚಿವ ಸ್ಥಾನ ನೀಡಬೇಕು. ಸಚಿವ ಸ್ಥಾನ ನೀಡದಿದ್ದರೆ ಜಿಪಂ, ತಾಪಂ, ಪಪಂಗೆ ಆಯ್ಕೆಯಾಗಿರುವ ಎಲ್ಲಾ ಚುನಾಯಿತ ಪ್ರತಿನಿಧಿಗಳು ಸಾಮೂಹಿಕ ರಾಜಿನಾಮೆ ಸಲ್ಲಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಬೇಳೂರಿಗೆ ನೈತಿಕತೆ ಇಲ್ಲ: ಕಾಗೋಡಿಗೆ ಮಂತ್ರಿ ಸ್ಥಾನ ಕೊಡಬಾರದು ಎಂದು ಇಲ್ಲಸಲ್ಲದ ಆರೋಪ ಮಾಡುತ್ತಿರುವ ಬೇಳೂರು ಗೋಪಾಲಕೃಷ್ಣರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾಗೋಡು ಬೆಂಬಲಿಗರು ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬೇಳೂರು ಸ್ಥಿಮಿತ ಕಳೆದುಕೊಂಡಂತೆ ಮಾತನಾಡುತ್ತಿದ್ದಾರೆ. ಇದಕ್ಕೆ ಬೆಲೆಕೊಡುವ ಅಗತ್ಯವಿಲ್ಲ ಎಂದು ಟೀಕಿಸಿದ್ದಾರೆ.
ಜಿಪಂ ಸದಸ್ಯ ಕಲಗೋಡು ರತ್ನಾಕರ್, ಜ್ಯೋತಿ ಚಂದ್ರಮೌಳಿ, ತಾಪಂ ಉಪಾಧ್ಯಕ್ಷೆ ಗೀತಾ ನಿಂಗಪ್ಪ, ಪೂರ್ಣಿಮಾ, ಕುನ್ನೂರು ಮಂಜಪ್ಪ, ಪಪಂ ಸದಸ್ಯರಾದ ಹಾಲಗದ್ದೆ ಉಮೇಶ್, ರತ್ನಾಕರ ಶೆಟ್ಟಿ, ಪ್ರಮುಖರಾದ ಏರಗಿ ಉಮೇಶ್, ಪ್ರಭಾಕರ ರಾವ್, ಬಾಬು ಕಾಮತ್, ಕೋಡೂರು ಚಂದ್ರಮೌಳಿ ಪಾಲ್ಗೊಂಡಿದ್ದರು.