ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

28ರಂದು ಗೇಣಿ ರೈತರ ಸಮಾವೇಶ

Vishwanath S
Updated On : 19 May 2013, 1:06 am

ಕ.ಪ್ರ.ವಾರ್ತೆ  ,  ಶಿವಮೊಗ್ಗ  ,   ಮೇ 18
ರಾಜ್ಯದ ವಿವಿಧ ಶಾಲೆಗಳಿಗೆ ನೀಡಿರುವ ಜಮೀನನ್ನು ಕಳೆದ ಐದಾರು ದಶಕಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ರೈತರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಶಾಲಾ ಜಮೀನು ಗೇಣಿ ರೈತರ ರಾಜ್ಯ ಮಟ್ಟದ ಸಮಾವೇಶವು ನಗರದಲ್ಲಿ ಮೇ 28ರಂದು ನಡೆಯಲಿದೆ ಎಂದು ರಾಜ್ಯ ಭೂ ವಿದ್ಯಾದಾನ ಶಾಲಾ ಜಮೀನು ಗೇಣಿ ರೈತರ ಹೋರಾಟ ಸಮಿತಿಯ ಅಧ್ಯಕ್ಷ ಕಲ್ಲೂರು ಮೇಘರಾಜ್ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ಸಮಾವೇಶವು ಮಥುರಾ ಪ್ಯಾರಡೈಸ್ಸ್‌ಭಾಂಗಣದಲ್ಲಿ ನಡೆಯಲಿದ್ದು, ರೈತಮುಖಂಡ ಕಡಿದಾಳು ಶಾಮಣ್ಣ ಅಧ್ಯಕ್ಷತೆ ವಹಿಸುವರು. ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ, ಸಾಹಿತಿ ನಾ. ಡಿಸೋಜ, ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಮಾಜಿ ಶಾಸಕರಾದ ಬಿ. ಸ್ವಾಮಿರಾವ್, ಜಿ. ಮಾದಪ್ಪ, ಸಾಹಿತಿ ಕೋಣಂದೂರು ವೆಂಕಪ್ಪಗೌಡ ಸೇರಿದಂತೆ ಹಲವರು ಪಾಲ್ಗೊಳ್ಳುವರು ಎಂದರು.
ಹಕ್ಕುಪತ್ರ ನೀಡಲಿ: ರಾಜ್ಯದಲ್ಲಿ ಸುಮಾರು 10 ಸಾವಿರ ಎಕರೆ ಶಾಲಾ ಜಮೀನನ್ನು ರೈತರು ಉಳುಮೆ ಮಾಡುತ್ತಿದ್ದಾರೆ. ಅವರಿಗೆ ಹಕ್ಕುಪತ್ರ ನೀಡಲು ಸರ್ಕಾರ ಮುಂದಾಗಿಲ್ಲ. ಸರ್ಕಾರ ಈ ಕೂಡಲೇ ಕಾನೂನು ತಿದ್ದುಪಡಿ ಮಾಡಿ ರೈತರಿಗೆ ಹಕ್ಕುಪತ್ರ ನೀಡಬೇಕು ಎಂದು ಈ ಸಮಾವೇಶದಲ್ಲಿ ಒತ್ತಾಯಿಸಲಾಗುವುದು ಎಂದರು.
ಶಾಲಾ ಜಮೀನನ್ನು ಶಾಲೆಗೇ ಉಳಿಸಬೇಕೆಂದು ವೀರಭದ್ರಪ್ಪ ಎಂಬುವರು ಹೈಕೋರ್ಟ್‌ನಲ್ಲಿ ದಾವೆ ಹಾಕಿದ್ದು, ಪ್ರಕರಣಕ್ಕೆ ಸಂಬಂಧಪಟ್ಟ ಶಾಲೆಗೆ ಮಾತ್ರ ಸಂಬಂಧಿಸಿದಂತೆ ಆದೇಶ ಪಡೆದಿದ್ದಾರೆ. ಈ ಆದೇಶ ಇಡೀ ರಾಜ್ಯಕ್ಕೆ ಅನ್ವಯ ಆಗುವುದಿಲ್ಲ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಮಂಜುಳಾದೇವಿ, ಆರ್.ಎ. ಚಾಬುಸಾಬ್, ಮಾಲತೇಶ, ಹೊನ್ನಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement