ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಧಿಕಾರವಂಚಿತ ಕ್ಷೇತ್ರಕ್ಕೆ ಸಚಿವಗಿರಿಯ ತೀರ್ಥ

Vishwanath S
Updated On : 19 May 2013, 1:07 am

ಶಿವಮೊಗ್ಗ/ತೀರ್ಥಹಳಳ್ಳಿ : ಸಮಾಜವಾದಿ ಚಳವಳಿಯ ಔನ್ನತ್ಯವನ್ನು ಕಂಡಿದ್ದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಯಾವೊಬ್ಬ ಶಾಸಕರೂ ಈವರೆಗೂ ಅಧಿಕಾರದ ಸವಿ ಕಂಡಿರಲಿಲ್ಲ. ಇಂತಹ ಮೊದಲ ಅವಕಾಶ ಈ ಬಾರಿ ಕಾಂಗ್ರೆಸ್ ಶಾಸಕ ಕಿಮ್ಮನೆ ರತ್ನಾಕರ್ ಅವರಿಗೆ ಒಲಿದು ಬಂದಿದೆ.
 ಕಾಂಗ್ರೆಸ್ ಹಿರಿಯ ನಾಯಕ, ಸಾಗರ ಕ್ಷೇತ್ರದ ಶಾಸಕ ಕಾಗೋಡು ತಿಮ್ಮಪ್ಪ ಅವರು ಈ ಬಾರಿ ಸಚಿವರಾಗುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ವಿಧಾನಸಭೆಯ ಸ್ಪೀಕರ್ ಆಗಲಿ ಎಂಬುದು ಪಕ್ಷದ ವರಿಷ್ಠರ ಒತ್ತಾಯ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತೆ ಮೇಲೇಳಲು ಒಬ್ಬರನ್ನು ಸಚಿವರನ್ನಾಗಿ ಮಾಡುವ ಅವಶ್ಯಕತೆ ಇತ್ತು. ಇನ್ನೊಬ್ಬ ಶಾಸಕ ಶಿವಮೊಗ್ಗ ಕ್ಷೇತ್ರದ ಕೆ.ಬಿ. ಪ್ರಸನ್ನಕುಮಾರ್ ಅವರು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರನ್ನು ಸೋಲಿಸಿ ಜೈಂಟ್ ಕಿಲ್ಲರ್ ಎನಿಸಿದ್ದರೂ ಹೊಸಮುಖವಾಗಿರುವ ಕಾರಣ ಸಚಿವ ಸ್ಥಾನ ಸಿಗಲಿಲ್ಲ. ಆದರೆ ವಿಭಿನ್ನ ನಡೆಯಿಂದ, ಶಿಸ್ತಿನ ಆಡಳಿತದಿಂದ ಹೆಸರಾಗಿರುವ ಕಿಮ್ಮನೆ ರತ್ನಾಕರ್ ಅವರಿಗೆ ಈ ಸ್ಥಾನ ಒಲಿದುಬಂದಿದೆ.
ಕ್ಷೇತ್ರದ ಮೊದಲ ಸಚಿವ: ತೀರ್ಥಹಳ್ಳಿ ಕ್ಷೇತ್ರ ಸ್ವತಂತ್ರವಾಗಿ ರೂಪುಗೊಳ್ಳುವುದಕ್ಕೆ ಮುನ್ನ ತೀರ್ಥಹಳ್ಳಿ ಕೊಪ್ಪ ಜಂಟಿ ಕ್ಷೇತ್ರವಾಗಿತ್ತು. 1952ರ ಚುನಾವಣೆಯಲ್ಲಿ ಇಲ್ಲಿಂದ ಗೆದ್ದಿದ್ದ ಕಡಿದಾಳ್ ಮಂಜಪ್ಪ ಅವರು ಎರಡೂವರೆ ತಿಂಗಳು ಮುಖ್ಯಮಂತ್ರಿಯಾಗಿದ್ದರಷ್ಟೇ. ಸ್ವಾತಂತ್ರ್ಯ ಭಾರತದ ಚುನಾವಣಾ ಇತಿಹಾಸದಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ನಡೆದಿರುವ 14 ಚುನಾವಣೆಗಳಲ್ಲಿ 9 ಬಾರಿ ವಿರೋಧ ಪಕ್ಷದ ಶಾಸಕರು ಆರಿಸಿ ಬಂದಿದ್ದಾರೆ. ಬಾಕಿ ಐದು ಚುನಾವಣೆಗಳಲ್ಲಿ ಕಡಿದಾಳ್ ಮಂಜಪ್ಪ ಅವರನ್ನು ಬಿಟ್ಟರೆ 1983ರ ಮೊದಲ ಸಮ್ಮಿಶ್ರ ಸರ್ಕಾರದಲ್ಲಿ ಜನತಾ ಪಕ್ಷದ ಶಾಸಕ ಡಿ.ಬಿ. ಚಂದ್ರೇಗೌಡ ಅವರು ಸ್ಪೀಕರ್ ಆಗಿದ್ದರು.
 ಈಗ ಮೊದಲ ಬಾರಿಗೆ ಸ್ವತಂತ್ರ ತೀರ್ಥಹಳ್ಳಿ ಕ್ಷೇತ್ರದ ಶಾಸಕರೊಬ್ಬರು ಸಚಿವರಾಗಿದ್ದಾರೆ.
ಕಿಮ್ಮನೆ ರತ್ನಾಕರ್ ರಾಜಕೀಯ ಕುಟುಂಬದಿಂದ ಬಂದವರಲ್ಲ. ಆದರೆ ವಿದ್ಯಾರ್ಥಿ ದಸೆಯಿಂದ ಇವರು ಮಾಡಿರುವ ನಾಲ್ಕು ಸಾವಿರಕ್ಕೂ ಹೆಚ್ಚು ಹೋರಾಟಗಳು ಇವರನ್ನು ಸದಾ ಜನರ ಸಂಪರ್ಕದಲ್ಲಿ ಉಳಿಸಿದವು.
ಕೃಷ್ಣ ಭವಿಷ್ಯ: 2013ರ ಚುನಾವಣೆ ವೇಳೆ ತೀರ್ಥಹಳ್ಳಿಗೆ ಪ್ರಚಾರಕ್ಕೆಂದು ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಈ ಬಾರಿ ಕಿಮ್ಮನೆ ಅವರನ್ನು ಗೆಲ್ಲಿಸಿದರೆ ಸಚಿವರಾಗುವುದು ಗ್ಯಾರೆಂಟಿ ಎಂದಿದ್ದರು. ಆ ಮಾತು ನಿಜವಾಗಿದೆ. ಜನತಾ ಪರಿವಾರದಲ್ಲಿದ್ದ ಕಿಮ್ಮನೆ ರತ್ನಾಕರ್ ಅವರನ್ನು 2004ರಲ್ಲಿ ಕಾಂಗ್ರೆಸ್‌ಗೆ ಕರೆದುಕೊಂಡು ಬಂದಿದ್ದೂ ಎಸ್.ಎಂ. ಕೃಷ್ಣ ಅವರೇ.
 ಈಗ ಸಚಿವರಾಗಿರುವ ಕಿಮ್ಮನೆ ರತ್ನಾಕರ್ ಅವರ ಎದುರು ಹಲವು ಸವಾಲುಗಳಿವೆ. ಸದ್ಯವೇ ಬರಲಿರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದರ ಜತೆಗೆ ಬಗರ್ ಹುಕುಂ, ಇಂಡೀಕರಣ, ಅರಣ್ಯ ಹಕ್ಕು ಕಾಯ್ದೆ, ಹುಲಿ ಯೋಜನೆ, ಸರ್ಕಾರಿ ಜಾಗ ಒತ್ತುವರಿ ಸೇರಿದಂತೆ ಜ್ವಲಂತ ಸಮಸ್ಯೆಗಳಿವೆ. ಅಭಿವೃದ್ಧಿಯ ಹೆಸರಿನಲ್ಲಿ ಆಗಿರುವ ಅವಘಡಗಳ ಸರಿಪಡಿಸುವ, ಜಿಲ್ಲೆಯ ಯೋಜನಾಬದ್ಧ ಅಭಿವೃದ್ಧಿ ಕೈಗೊಳ್ಳುವ ಸವಾಲುಗಳಿವೆ.
ರಾಜಕೀಯ ಹನ್ನೆಲೆ: ಕಿಮ್ಮನೆ ರತ್ನಾಕರ್ ಬಿಎಸ್ಸಿ, ಎಲ್‌ಎಲ್‌ಬಿ ಪದವೀಧರರು. ಶಾಲಾ ದಿನಗಳಲ್ಲೆ ಶಾಂತವೇರಿ ಗೋಪಾಲಗೌಡರ ಪ್ರಭಾವಕ್ಕೆ ಒಳಗಾದವರು. ಅವರ ಪ್ರೇರಣೆಯಿಂದಲೇ ರಾಜಕೀಯಕ್ಕೆ ಧುಮುಕಿದವರು. 1978ರಲ್ಲೇ ತಾಲೂಕು ಬೋರ್ಡ್ ಸದಸ್ಯರಾಗಿದ್ದರು. ಅದು ಬಿಟ್ಟರೆ ಯಾವುದೇ ರೀತಿಯ ಸ್ಥಾನಮಾನ ಮುಂದೆ ಶಾಸಕರಾಗುವ ದಿನದವರೆಗೂ ದೊರಕಿರಲಿಲ್ಲ.
 ತಮ್ಮ ವಕೀಲಿ ವೃತ್ತಿ ಜೀವನದಲ್ಲಿ ಕಿಮ್ಮನೆ ರತ್ನಾಕರ್ ಸುಮಾರು 26 ಸಾವಿರಕ್ಕೂ ಹೆಚ್ಚು ರೈತರ ಕೇಸುಗಳನ್ನು ಉಚಿತವಾಗಿ ನೆಡೆಸಿಕೊಟ್ಟ ಹೆಗ್ಗಳಿಕೆ ಹೊಂದಿದ್ದಾರೆ. 1999ರಲ್ಲಿ ಜನತಾದಳದಿಂದ ವಿಧಾನಸಭಾ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದರೂ ಗೆಲ್ಲಲಾಗಲಿಲ್ಲ. ಬದಲಾದ ಸನ್ನಿವೇಶದಲ್ಲಿ 2004ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು ಚುನಾವಣೆಯಲ್ಲಿ ಸ್ಪರ್ಧಿಸಿ, ಸೋತರು. 2008ರಲ್ಲಿ ಕ್ಷೇತ್ರದ ಜನಪ್ರತಿನಿಧಿಯಾಗಿ ಚುನಾಯಿತರಾದರು. ಮತ್ತೆ 2013ರಲ್ಲಿ  ಚುನಾಯಿತರಾಗಿ, ಮಂತ್ರಿಯೂ ಆಗಿದ್ದಾರೆ. ವಿಶೇಷವೆಂದರೆ ಈ ನಾಲ್ಕು ಅವಧಿಯಲ್ಲಿ ನೆಡೆದ ಚುನಾವಣೆಯಲ್ಲೂ  ಪ್ರಬಲ ಎದುರಾಳಿಯಾಗಿದ್ದವರು  ಮಾಜಿ ಶಾಸಕ ಆರಗ ಜ್ಞಾನೇಂದ್ರ.
ಆಡಳಿತ ಪಕ್ಷದ ಶಾಸಕರು
1952.....ಕಡಿದಾಳ್ ಮಂಜಪ್ಪ (ಐಎನ್‌ಸಿ)
1957.....ಎ.ಆರ್. ಬದರಿನಾರಾಯಣ್ (ಐಎನ್‌ಸಿ)
1978....ಕಡಿದಾಳ್ ದಿವಾಕರ್ (ಐಎನ್‌ಸಿ)
1983....ಡಿ.ಬಿ. ಚಂದ್ರೇಗೌಡ (ಜೆಎನ್‌ಪಿ)
2013....ಕಿಮ್ಮನೆ ರತ್ನಾಕರ್(ಕಾಂಗ್ರೆಸ್)
ವಿರೋಧ ಪಕ್ಷದ ಶಾಸಕರು
1962..ಶಾಂತವೇರಿ ಗೋಪಾಲಗೌಡ (ಸೋಷಿಯಲಿಸ್ಟ್)
1967.....ಶಾಂತವೇರಿ ಗೋಪಾಲಗೌಡ (ಸೋಷಿಯಲಿಸ್ಟ್)
1972....ಕೋಣಂದೂರು ಲಿಂಗಪ್ಪ (ಸೋಷಿಯಲಿಸ್ಟ್ ಪಾರ್ಟಿ)
1985....ಪಟಮಕ್ಕಿ ರತ್ನಾಕರ್ (ಐಎನ್‌ಸಿ)
1989.....ಡಿ.ಬಿ. ಚಂದ್ರೇಗೌಡ (ಜೆಡಿ)
1994....ಆರಗ ಜ್ಞಾನೇಂದ್ರ (ಬಿಜೆಪಿ)
1999.....ಆರಗ ಜ್ಞಾನೇಂದ್ರ (ಬಿಜೆಪಿ)
2004....ಆರಗ ಜ್ಞಾನೇಂದ್ರ (ಬಿಜೆಪಿ)
2008....ಕಿಮ್ಮನೆ ರತ್ನಾಕರ್(ಕಾಂಗ್ರೆಸ್)

-ಹೊನ್ನಾಳಿ ಚಂದ್ರಶೇಖರ್
   ಸತ್ಯನಾರಾಯಣ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement