ಜೀತಪದ್ಧತಿ ಇನ್ನೂ ಜೀವಂತ: ಕಮಲ್ ಪ್ರಸಾದ್ ವಿಷಾದ
ಕ.ಪ್ರ.ವಾರ್ತೆ, ಸಾಗರ, ಮೇ 18
ಜೀತಮುಕ್ತ ಕಾಯ್ದೆ ಜಾರಿಯಲ್ಲಿದ್ದರೂ, ರಾಜ್ಯದ ಕರಾವಳಿಯ ಕೆಲವು ತಾಲೂಕುಗಳನ್ನು ಹೊರತುಪಡಿಸಿ ಇತರೆಡೆ ಜೀತಪದ್ಧತಿ ಇನ್ನೂ ಜೀವಂತವಾಗಿರುವುದು ಖೇದದ ಸಂಗತಿ ಎಂದು ಕೇಂದ್ರ ಸರ್ಕಾರದ ಜೀತಮುಕ್ತಿ ಕೋರ್ ಸಮಿತಿ ಸದಸ್ಯ ಕಿರಣ ಕಮಲ್ ಪ್ರಸಾದ್ ಹೇಳಿದರು.
ಇಲ್ಲಿನ ಸಾಮರ್ಥ್ಯ ಸೌಧದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸಾಗರ ಉಪವಿಭಾಗ ಮಟ್ಟದ ಜೀತ ಪದ್ಧತಿ ನಿರ್ಮೂಲನಾ ಜಾಗೃತಿ ಸಮಿತಿ ಮರುಸಮೀಕ್ಷೆ ಕಾರ್ಯಾಗಾರದಲ್ಲಿ, ಯಾವುದೇ ಸಾಮಾಜಿಕ ಪಿಡುಗುಗಳನ್ನು ಕೇವಲ ಕಾನೂನುಗಳಿಂದ ಹೊಡೆದೋಡಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಜನರಲ್ಲಿ ಇಚ್ಚಾಶಕ್ತಿ ಬೇಕು ಎಂದರು.
ದೂರು ನೀಡಲು ಹಿಂದೇಟು: ಶಿವಮೊಗ್ಗ ಜಿಲ್ಲೆಯಲ್ಲಿಯೂ ಜೀತಪದ್ಧತಿ ಜಾರಿಯಲ್ಲಿದ್ದು, ದೂರು ನೀಡಿದವರ ಸುಳಿವನ್ನು ಮಾಲೀಕರಿಗೆ ಕೊಡುವ ಪ್ರವೃತ್ತಿ ಜಾರಿಯಲ್ಲಿದೆ. ಇದರಿಂದ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗೌಪ್ಯತೆ ಕಾಪಾಡುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಮನುಷ್ಯನ ಮೂಲ ಹಕ್ಕಿನ ಉಲ್ಲಂಘನೆಗೆ ಪ್ರಚೋದನಾಕಾರಿಯಾಗಿರುವ ಜೀತ ಪದ್ಧತಿ ನಿರ್ಮೂಲನೆಗೆ ಆಡಳಿತದೊಂದಿಗೆ ಸಾರ್ವಜನಿಕರ, ಸಂಘಸಂಸ್ಥೆಗಳ ಸಹಕಾರ ಸಹ ಅಗತ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಉಪವಿಭಾಗಾಧಿಕಾರಿ ಡಾ. ಉದಯಕುಮಾರ ಶೆಟ್ಟಿ ಮಾತನಾಡಿ, ಮೇಲ್ನೋಟಕ್ಕೆ ಜೀತ ಪದ್ಧತಿ ಕಾಣದಿದ್ದರೂ ಅಂತರ್ಗತವಾಗಿ ಇದೆ. ಗೌರವಯುತ ಜೀವನ ನಡೆಸುವುದು ಪ್ರತಿಯೊಬ್ಬರ ಹಕ್ಕು. ಅದನ್ನು ಅವರಿಗೆ ಒದಗಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲೆ ಇದೆ. ಜೀತಕ್ಕೆ ಒಳಗಾದವರಿಗೆ ಘನತೆ ಗೌರವ ಇರುವುದಿಲ್ಲ. ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಕಲ್ಪಿಸುವ ಸರ್ಕಾರದ ಧ್ಯೇಯೋದ್ದೇಶಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಇಂತಹ ಕಾರ್ಯಾಗಾರ ಅಗತ್ಯ ಎಂದರು.
ಶಿಕಾರಿಪುರ ತಹಸೀಲ್ದಾರ್ ಚಂದ್ರಶೇಖರಪ್ಪ, ಸೊರಬ ತಹಸೀಲ್ದಾರ್ ಎನ್. ತೇಜಸ್ ಕುಮಾರ್, ಹೊಸ ನಗರ ತಹಸೀಲ್ರಾರ್ ಅರ್ಚನ ಎಂ.ಎಸ್, ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.