ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಂದು ರಾಯರ ಮೃತ್ತಿಕಾ ಬೃಂದಾವನ ಪ್ರತಿಷ್ಠಾಪನೆ

Rashmi Kasaragodu
Updated On : 20 May 2013, 10:39 am

ಕಪ್ರ ವಾರ್ತೆ,ಶಿವಮೊಗ್ಗ,ಮೇ 19
ಪಲ್ಲಕ್ಕಿ ವೆಂಕಟಕೃಷ್ಣರಾಜ ಪ್ರತಿಷ್ಠಾನದ ವತಿಯಿಂದ ನಗರದ ಬಿಬಿ ರಸ್ತೆಯ ಶ್ರೀ ಲಕ್ಷ್ಮೀನಾರಾಯಣ ದೇವಾಲಯದ ಪಕ್ಕದಲ್ಲಿ ಶ್ರೀ ವೆಂಕಟೇಶ್ವರಸ್ವಾಮಿ, ಶ್ರೀ ಆಂಜನೇಯ ದೇವಸ್ಥಾನ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ವೃಂದಾವನ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಮೇ 20ರಂದು ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 6ರಿಂದ 7 ಗಂಟೆಯ ಶುಭ ಮುಹೂರ್ತದಲ್ಲಿ ದೇವರ ಹಾಗೂ ಗುರು ರಾಯರ ಮೃತ್ತಿಕಾ ಬೃಂದಾವನದ ಪ್ರತಿಷ್ಠಾಪನೆಯನ್ನು ಕೂಡಲಿ ಆರ್ಯ ಅಕ್ಷೋಭ್ಯ ತೀರ್ಥ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ರಘುವಿಜಯ ತೀರ್ಥ ಶ್ರೀಪಾಂದಗಳು ನೆರವೇರಿಸಲಿದ್ದಾರೆ.
 ಮೇ 20ರ ಸೋಮವಾರದಂದು ನೇತ್ರೋನ್ಮಿಲನ, ದರ್ಪಣ ದರ್ಶನ, ಫಲಪುಷ್ಪಾದಿ ದರ್ಶನ, ಕಲಶ ಸ್ಥಾಪನೆ, ಕಲಶಾಭಿಷೇಕ, ಧ್ವಜಾರೋಹಣ, ಕಲ್ಯಾಣೋತ್ಸವ ನಡೆಯಲಿವೆ. ಮೇ 23ರ ಗುರುವಾರದಂದು ಮನ್ಯುಸೂಕ್ತ ಹೋಮ, ಸುದರ್ಶನ ಮಹಾಯಾಗಾದಿಗಳು ಆಯೋಜಿಸಲಾಗಿದೆ.
ದೇವಳ ವಿಶೇಷ: ದೇವಸ್ಥಾನವನ್ನು ಶಾಸ್ತ್ರೋಕ್ತವಾಗಿ ನಿರ್ಮಿಸಲಾಗಿದೆ. ಕೆಂಪು ಶಿಲೆಯಲ್ಲಿ ನಿರ್ಮಾಣವಾದ ಶಿವಮೊಗ್ಗದ ಮೊದಲ ದೇವಾಲಯವಿದು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇಲ್ಲಿ ಪ್ರತಿಷ್ಠಾಪಿಸಲಾಗುವ ಶ್ರೀ ವೆಂಕಟೇಶ್ವರಸ್ವಾಮಿ, ಶ್ರೀ ಆಂಜನೇಯ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ವೃಂದಾವನವನ್ನು ನೇಪಾಳದ ಗಂಡಕೀ ನದಿಯಿಂದ ತರಲಾದ ಸಾಲಿಗ್ರಾಮ ಶಿಲೆಯಲ್ಲಿ ಕೆತ್ತನೆ ಮಾಡಲಾಗಿದೆ. ಜಯಪುರದಲ್ಲಿ ಶಾಸ್ತ್ರೋಕ್ತವಾಗಿಯೇ ಈ ವಿಗ್ರಹಗಳಿಗೆ ರೂಪ ಕೊಡಲಾಗಿದೆ.
ಪ.ರಾ. ಶ್ರೀನಿವಾಸ್ ಕನಸು: ಈ ದೇವಾಲಯಗಳ ನಿರ್ಮಾಣ ನಗರದ ಹಿರಿಯ ಸಮಾಜಸೇವಕ ದಿವಂಗತ ಪ.ರಾ. ಶ್ರೀನಿವಾಸ್ ಅವರ ಕನಸು. ಶಿವಮೊಗ್ಗದ ಜನತೆಗೆ ಒಂದು ಹೊಸತನವನ್ನು ನೀಡಬೇಕೆಂಬ ಮಹದಾಸೆ ಹೊಂದಿ ಅವರು ನಡೆಸಿದ ಪ್ರಯತ್ನದ ಸಾಕಾರ ರೂಪವಿದು.
 ಈ ಮಂಗಳ ಕಾರ್ಯದಲ್ಲಿ ಪ್ರತಿಷ್ಠಾಪನೆಯೊಂದಿಗೆ ಆಸ್ತಿಕ ಮಹಾಶಯರ ಸಹಕಾರವೂ ಅತೀ ಮುಖ್ಯ. ಈ ದಿಸೆಯಲ್ಲಿ ಸಮಾಜದಲ್ಲಿರುವ ಉದಾರಿಗಳು ಚಿಂತನೆ ನಡೆಸಬೇಕು. ಎಲ್ಲ ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಪ್ರತಿಷ್ಠಾನದ ಆಡಳಿತ ಮಂಡಳಿ ಕೋರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement