ಮಕ್ಕಳ ಮೇಲೆ ಒತ್ತಡ ಹೇರಬೇಡಿ: ಸೆಂಥಿಲ್
ಶಿವಮೊಗ್ಗ: ದೇಶಿಯ ವಿದ್ಯಾ ಶಾಲಾ ಸಮಿತಿಯು ಪದವಿಪೂರ್ವ ಸ್ವತಂತ್ರ ಕಾಲೇಜು ಆವರಣದಲ್ಲಿ ಭಾನುವಾರ ಪ್ರಥಮ ಪಿಯು ಕಾಲೇಜುಗಳಿಗೆ ಪ್ರವೇಶ ಪ್ರಕ್ರಿಯೆ ಏರ್ಪಡಿಸಿತ್ತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಶಶಿಕಾಂತ್ ಸೆಂಥಿಲ್ ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿ, ಶಿಕ್ಷಣವು ಮಕ್ಕಳಿಗೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ನೀಡುತ್ತದೆ ಎಂದರು.
ಮಕ್ಕಳ ಮೇಲೆ ಒತ್ತಡ: ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧೆ ಏರ್ಪಟ್ಟಿರುವುದರಿಂದ ಶಿಕ್ಷಕರು ಮತ್ತು ಪೋಷಕರು ಮಕ್ಕಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಸಂಬಂಧ ಕೆಲ ಮಕ್ಕಳು ಸ್ಪರ್ಧೆಯಲ್ಲಿ ಸೋಲುತ್ತಿದ್ದಾರೆ. ಹಾಗೆಯೇ ಗೆದ್ದ ಮಕ್ಕಳು ಜೀವನದಲ್ಲಿ ಸೋಲುವುದನ್ನು ಸಮಾಜದಲ್ಲಿ ಕಾಣಬಹುದು ಎಂದು ವಿಷಾದಿಸಿದರು.
ವೃತ್ತಿ ಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕೆ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸುವುದು ಸಾಮಾನ್ಯ. ಆದರೆ, ಪಿಯುಸಿ ಪ್ರವೇಶಕ್ಕೂ ಮುಕ್ತ ಕೌನ್ಸೆಲಿಂಗ್ ವ್ಯವಸ್ಥೆ ಅಳವಡಿಸಿ, ಪ್ರತಿಭಾಂತ ಮಕ್ಕಳಿಗೆ ಅವಕಾಶ ಒದಗಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು.
ಪ್ರವೇಶಾತಿ: ಸಮಿತಿಯ ನಾಲ್ಕು ಪಿಯು ಕಾಲೇಜುಗಳಿಗೆ ಏಕಕಾಲದಲ್ಲಿ ಪ್ರವೇಶಾತಿ ನಡೆಯುತ್ತಿರುವುದರಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಡಿವಿಎಸ್ ಸಂಸ್ಥೆ ಉಪಾಧ್ಯಕ್ಷ ಎಸ್.ಎಲ್. ಶ್ರೀರಂಗರಾಜು, ಕೆನರಾ ಬ್ಯಾಂಕ್ ಶಾಖೆ ವ್ಯವಸ್ಥಾಪಕ ನಾಗರಾಜ್ ಶೆಟ್ಟಿ, ವಕೀಲ ಬಸಪ್ಪಗೌಡ, ರಾಜ್ಶೇಖರ್, ಸಮಿತಿ ಕಾರ್ಯದರ್ಶಿ ವಿ.ಕೆ. ಸುಬ್ರಹ್ಮಣ್ಯ ಮತ್ತಿತರರು ಇದ್ದರು.