ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿಪ್ರರು ಸಮಾಜದ ಏಳ್ಗೆಗೆ ಜಾಗೃತರಾಗಿ: ಸುಬ್ರಹ್ಮಣ್ಯ ಕರೆ

Rashmi Kasaragodu
Updated On : 20 May 2013, 10:41 am

ಶಿವಮೊಗ್ಗ: ಸಮಾಜದ ಏಳ್ಗೆಗಾಗಿ ವಿಪ್ರರು ಜಾಗೃತರಾಗಬೇಕಾದ ಅವಶ್ಯಕತೆ ಇದೆ. ಬ್ರಾಹ್ಮಣರು ಜಾಗೃತರಾದರೆ ಏನು ಬೇಕಾದರೂ ಸಾಧಿಸಬಹುದು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಡಾ.ಬಿ.ಎನ್.ವಿ. ಸುಬ್ರಹ್ಮಣ್ಯ ಅಭಿಪ್ರಾಯಪಟ್ಟಿದ್ದಾರೆ.
 ಶಾಂತಲಾ ಸ್ಪೆರೋಕ್ಯಾಸ್ಟ್ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಮತ್ತು ವಿಪ್ರ ವಿವಾಹ ಶಿವಮೊಗ್ಗ ಅಂತರ್ಜಾಲ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಬ್ರಾಹ್ಮಣ ಸಮಾಜದವರು ಒಟ್ಟು 22 ಜನ ಸ್ಪರ್ಧಿಸಿದ್ದರು, ಅವರಲ್ಲಿ  ಕೇವಲ 10 ಮಂದಿ ಗೆಲುವು ಸಾಧಿಸಲು ಸಾಧ್ಯವಾಗಿದೆ. ಮುಂದಾದರೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕು ಎಂದರು.
ಪ್ರೀತಿ ವಿಶ್ವಾಸಗಳಿಸಿ ಗೆಲ್ಲಬೇಕು: ಇಂದಿನ ಸ್ಥಿತಿಯಲ್ಲಿ ಬ್ರಾಹ್ಮಣ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಪಡೆಯುವುದು ಸುಲಭದ ಮಾತಲ್ಲ. ಏಕೆಂದರೆ ಕೇವಲ ಬ್ರಾಹ್ಮಣರ ಮತಗಳಿಂದ ಗೆಲುವು ಪಡೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಅವರು, ಇತರ ಸಮಾಜದವರ ಪ್ರೀತಿ ವಿಶ್ವಾಸಗಳಿಸಿ ಗೆಲ್ಲಬೇಕು ಎಂದರು. ಸಂಘಟನೆ ಇದ್ದರೆ ಏನು ಬೇಕಾದರೂ ಸಾಧನೆ ಮಾಡಲು ಸಾಧ್ಯವಿದೆ. ಹೀಗಾಗಿ ಸಮಾಜ ಬಾಂಧವರು ಸಂಘಟನೆಗೆ ಮುಂದಾಗಬೇಕೆಂದು ಕರೆ ನೀಡಿದ ಅವರು, ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಜಯಶೀಲರಾದ ಪ್ರಸನ್ನಕುಮಾರ್ ಉತ್ತಮ ಕೆಲಸಗಳನ್ನು ಮಾಡುತ್ತಾ ಮುಂದಿನ ಚುನಾವಣೆಗಳಲ್ಲೂ ವಿಜಯಪತಾಕೆ ಹಾರಿಸಬೇಕೆಂದು ಹಾರೈಸಿದರು.
 ಅಧಿಕಾರ ಶಾಶ್ವತವಲ್ಲ. ದೊರಕಿದ ಅವಕಾಶವನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿಕೊಳ್ಳಬೇಕು. ಜನಸಾಮಾನ್ಯರ ಕಷ್ಟಕ್ಕೆ ನೆರವಾಗಬೇಕೆಂದು ನೂತನ ಶಾಸಕ ಕೆ.ಬಿ. ಪ್ರಸನ್ನಕುಮಾರ್‌ರವರಿಗೆ ಸಲಹೆ ನೀಡಿದರು.
ಪ್ರಾಮಾಣಿಕತೆ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಕೆ. ದಿವಾಕರ್ ಮಾತನಾಡಿ, ಸಮಾಜ ಮುಖಂಡರು ಪ್ರಾಮಾಣಿಕತೆಯಿಂದ ಚುನಾವಣೆಯಲ್ಲಿ ಕೆಲಸ ಮಾಡಿದ್ದರೆ ಕೆ.ಬಿ.ಪ್ರಸನ್ನಕುಮಾರ್ 12 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಬಹುದಿತ್ತು. ಸಮಾಜದ ಮುಖಂಡರು ಸಹಕರಿಸಲಿಲ್ಲ, ನಮ್ಮ ಅಭ್ಯರ್ಥಿ ಗೆಲುವು ಸಾಧಿಸಿದ್ದರೆ ಅದು ಸಾಮಾನ್ಯ ಬ್ರಾಹ್ಮಣರು ನೀಡಿದ ಸಹಕಾರದಿಂದ ಎಂದು ಹೇಳಿದರು. ಹಿಂದೆ ಪ್ರಮುಖರಾಗಿದ್ದ ಬಿ.ವಿ. ರಾಮಸ್ವಾಮಿಯವರು ಸಮಾಜಕ್ಕೆ ನಾಯಕತ್ವ ತುಂಬುವ ಕೆಲಸ ಮಾಡಿದರು. ಅವರ ನಿಧನದ ನಂತರ ಸಮಾಜದಲ್ಲಿ ನಾಯಕತ್ವದ ಅರಾಜಕತೆ ಸೃಷ್ಟಿಯಾಗಿದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಹಾಗೂ ನಾಯಕತ್ವ ಕೊಡುವ ಹೊಣೆಗಾರಿಕೆ ಶಾಸಕ ಪ್ರಸನ್ನಕುಮಾರ್ ಮೇಲಿದೆ ಎಂದರು.
 ಕಾರ್ಯಕ್ರಮದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿಯ ಕೆ.ವಿ. ವಸಂತಕುಮಾರ್ ಮಾತನಾಡಿ, ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ತಮ್ಮ ವಿರೋಧಿಗಳು ಠೇವಣಿ ಕಳೆದುಕೊಳ್ಳಬೇಕು, ಆ ನಿಟ್ಟಿನಲ್ಲಿ ನೂತನ ಶಾಸಕ ಪ್ರಸನ್ನಕುಮಾರ್ ಪ್ರಾಮಾಣಿಕ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದರು.
ನಾಗರಿಕ ಹಿತರಕ್ಷಣಾ ವೇದಿಕೆ ತಾವು(ಅಧಿಕಾರಸ್ಥರು) ಮಾಡುವ ತಪ್ಪುಗಳನ್ನು ತಿಳಿಸಿ ಹೇಳುತ್ತದೆ. ದುರಾಸೆ-ಸ್ವಾರ್ಥದಿಂದ ಆಸ್ತಿ ಮಾಡುತ್ತೇವೆ ಎಂಬ ಹುಚ್ಚು ಆಸೆಗೆ ಬಿದ್ದು ಹೇಗೆ ಅಧಿಕಾರ ಕಳೆದುಕೊಂಡಿದ್ದಾರೆ ಎಂಬುದಕ್ಕೆ ನಮ್ಮ ಮುಂದೆಯೇ ಉದಾಹರಣೆ ಇದೆ ಎಂದು ಪ್ರಸನ್ನ ಕುಮಾರ್ ಅವರಿಗೆ ಸಲಹೆ ನೀಡಿದರು.
 ಶಾಸಕ ಕೆ.ಬಿ. ಪ್ರಸನ್ನಕುಮಾರ್, ನಗರದ ಅಭಿವೃದ್ಧಿಗೆ ಹಾಗೂ ಶ್ರೇಯಸ್ಸಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಸಮಾಜದ ಗೌರವವನ್ನು ಎತ್ತಿಹಿಡಿಯುವುದಾಗಿ ಭರವಸೆ ನೀಡಿದರು. ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಡಾ. ಬಿ. ವೆಂಕಟರಾವ್ ಮಾತನಾಡಿದರು. ಜಿಲ್ಲಾ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ನೂತನ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹಾಗೂ ನಗರಸಭೆ ಸದಸ್ಯೆ ಸುರೇಖಾ ಮುರುಳೀಧರ್‌ರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
 ವೇದಿಕೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಎಲ್.ಟಿ. ಹೆಗಡೆ, ಜಂಟಿ ಕಾರ್ಯದರ್ಶಿ ಅಬಸೆ ದಿನೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ಮ.ಸ. ನಂಜುಂಡಸ್ವಾಮಿ, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಗುಡ್ಡೆಕೊಪ್ಪ ನಾರಾಯಣ ರಾವ್ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement