ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಲಾಖೆ ಶುದ್ಧಗೊಳಿಸುವುದೇ ನನ್ನ ಗುರಿ

Rashmi Kasaragodu
Updated On : 21 May 2013, 11:36 am

ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 20 ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿಕೊಂಡಿದ್ದು, ಮೊದಲು ಅದನ್ನು ಭ್ರಷ್ಟಾಚಾರ  ರಹಿತ ಇಲಾಖೆಯಾಗಿ ಪರಿವರ್ತಿಸುವುದು ನನ್ನ ಗುರಿ ಎಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
 ಜಿಲ್ಲಾ ಕಾಂಗ್ರೆಸ್ ಸಮಿತಿ ಸೋಮವಾರ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ರಹಿತ ಇಲಾಖೆ ಮಾಡುವುದರೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಹೊಸ  ಕ್ರಾಂತಿ ಮಾಡಲು ಪ್ರಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಉತ್ತಮ ಗುಣಮಟ್ಟ: ಕೂಲಿ ಮಾಡುವವರ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡದಿದ್ದರೆ, ಖಾಸಗಿ ಶಾಲೆಗಳಿಗೆ ಹೋಗುತ್ತಾರೆ. ಮೊದಲು ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನ ಮಾಡುತ್ತೇನೆ. ಇಲ್ಲವಾದರೆ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುವ ಸ್ಥಿತಿ ತಲುಪುತ್ತವೆ ಎಂದರು.
 ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆಯದ್ದೇ ದೊಡ್ಡ ಸಮಸ್ಯೆ. ದೂರಾಗಿರುವ 10,000 ದಂಪತಿಯನ್ನು ಒಂದು ಮಾಡಲು ಯತ್ನಿಸಿದರೆ ಶಾಲೆಗಳಿಗೆ ಬೀಗ ಹಾಕಬೇಕಾಗುತ್ತದೆ ಎಂದು ವಿಷಾದಿಸಿದ ಅವರು, ರಾಜ್ಯದಲ್ಲಿ ಶಿಕ್ಷಕರ ಕೊರತೆ ದೊಡ್ಡ ಪ್ರಮಾಣದಲ್ಲಿದೆ. 16 ಸಾವಿರ ಶಿಕ್ಷಕರ ಹುದ್ದೆ ಖಾಲಿಯಿದೆ. ಸರ್ಕಾರ 16 ಸಾವಿರ ಕೋಟಿ ಹಣವನ್ನು ಶಿಕ್ಷಣಕ್ಕೆಂದು ಬಜೆಟ್‌ನಲ್ಲಿ ಮೀಸಲಿರಿಸಿದರೆ, ಅದರಲ್ಲಿ ರು. 10 ಸಾವಿರ ಕೋಟಿ ವೇತನಕ್ಕೆ ಬಳಕೆಯಾಗುತ್ತಿದೆ. ರು. 100 ಕೋಟಿ ಮಕ್ಕಳ ಊಟಕ್ಕೆ, ರು. 100 ಕೋಟಿ ವಸತಿಗೆ ವ್ಯಯವಾದರೆ ಉಳಿದ ಅಲ್ಪ ಹಣದಲ್ಲಿ ಮಾಡುವುದಾದರೂ ಏನು ಎಂದು ಪ್ರಶ್ನಿಸಿದರು.
 ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿ, ಶಿಕ್ಷಣ ಇಲಾಖೆ ನಿರ್ವಹಿಸಿದ ಮಾಜಿ ಸಚಿವರು, ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ, ರಾಜ್ಯದ ಬೊಕ್ಕಸಕ್ಕೆ ಅನುಗುಣವಾಗಿ ಯೋಜನೆ ರೂಪಿಸುತ್ತೇನೆ ಎಂದರಲ್ಲದೇ, ಇಂದು ಮಾಡಿದ ಕೆಲಸ ಮುಂದಿನ ವರ್ಷವೇ ಪ್ರತಿಫಲ ನೀಡಬೇಕು. ಸರ್ಕಾರಿ ಶಾಲೆಗಳ ಗುಣಮಟ್ಟ ವೃದ್ಧಿಯಾಗದಿದ್ದರೆ ಅವುಗಳನ್ನು ಮುಚ್ಚಬೇಕಾಗುತ್ತದೆ ಎಂದರು.
ಶಿಕ್ಷಣ ಇಲಾಖೆಯಲ್ಲಿನ ಸಮಸ್ಯೆ ಕುರಿತು ಮೇ.25 ರಂದು ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಯಶಸ್ಸು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕೆ.ಬಿ. ಪ್ರಸನ್ನಕುಮಾರ್ ಅವರನ್ನು ಸೋಲಿಸಲು ಕೆಲವು ಅಗೋಚರ ಶಕ್ತಿಗಳು ಬಹಳಷ್ಟು ಪ್ರಯತ್ನ ಮಾಡಿದ್ದವು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಬಿ.ಎನ್.ವಿ. ಸುಬ್ರಹ್ಮಣ್ಯ ಹೇಳಿದರು.
 ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ನೂತನ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದ ಸಂಖ್ಯೆ 45 ಸಾವಿರವಿದ್ದರೂ ಕೆ.ಬಿ. ಪ್ರಸನ್ನಕುಮಾರ್ ಅತ್ಯಲ್ಪ ಮತದಲ್ಲಿ ಗೆದ್ದಿರುವುದು ದುರದೃಷ್ಟಕರ ಎಂದ ಅವರು, ಕಳೆದ 25 ವರ್ಷಗಳಿಂದ ಬ್ರಾಹ್ಮಣ ಸಮುದಾಯ ಒಬ್ಬ ಅಭ್ಯರ್ಥಿಯು ಜಿಲ್ಲೆಯಲ್ಲಿ ಶಾಸಕನಾಗಿಲ್ಲ. ತದನಂತರ ಜಿಲ್ಲೆಯಲ್ಲಿ ಬ್ರಾಹ್ಮಣ ಸಮಾಜಕ್ಕೆ ಸೇರಿದ ವ್ಯಕ್ತಿ ಶಾಸಕನಾಗಿ ಆಯ್ಕೆಯಾಗಿರುವುದು ಸಂತಸದ ಸಂಗತಿ ಎಂದರು.
ಸಂಪತ್ತಿಗೆ ಸವಾಲು: ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಈ ಬಾರಿಯ ಚುನಾವಣೆ ನನಗೆ ಸಂಪತ್ತಿಗೆ ಸವಾಲಿನ ಚುನಾವಣೆಯಾಗಿತ್ತು. ನನ್ನ ಬಗ್ಗೆ ಕೆಲವರು ಚುನಾವಣೆ ವೇಳೆಯಲ್ಲಿ ಅಪಪ್ರಚಾರ ಮಾಡಿದ್ದರು. ಆದರೆ ಅವರ ಪ್ರಯತ್ನ ವಿಫಲವಾಗಿದೆ ಎಂದರು.
 ಕಾರ್ಯಕ್ರಮದಲ್ಲಿ ಶಾಸಕ ಪ್ರಸನ್ನಕುಮಾರ್ ದಂಪತಿಯನ್ನು ಸನ್ಮಾನಿಸಲಾಯಿತು. ಡಾ.ಬಿ. ವೆಂಕಟರಾವ್, ನಂಜುಂಡಸ್ವಾಮಿ, ನಟರಾಜ ಭಾಗವತ್, ಎ.ಜೆ. ರಾಮಚಂದ್ರ, ಅ.ಪ. ರಾಮಭಟ್ಟ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement