ಕ.ಸಾ.ಪ. ಜಿಲ್ಲಾಧ್ಯಕ್ಷರ ವರ್ತನೆಗೆ ಖಂಡನೆ
ಕ.ಪ್ರ.ವಾರ್ತೆ, ಸೊರಬ, ಮೇ 20 ಈ ಹಿಂದೆ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಯಲ್ಲಿ ತಮಗೆ ಬೆಂಬಲ ನೀಡಿಲ್ಲ ಎಂಬ ಕಾರಣಕ್ಕೆ ತಾಲೂಕು ಹಿರಿಯ ಸಾಹಿತಿಯೊಬ್ಬರನ್ನು ತಾಲೂಕು ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿಸಲು ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ತಗಾದೆ ಎತ್ತಿದ್ದು, ತಾಲೂಕು ಘಟಕಕ್ಕೆ ಸರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತಿಲ್ಲ ಎಂಬ ಬೇಸರಿಕೆ ಮಾತು ತಾಲೂಕು ಕಸಾಪ ಸರ್ವ ಸದಸ್ಯರ ಸಭೆಯಲ್ಲಿ ವ್ಯಕ್ತವಾಯಿತು.
ಪ್ರಸಕ್ತ ತಿಂಗಳಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ ನಡೆಸುವ ಏರ್ಪಾಟು ಮಾಡಲಾಗಿದ್ದು, ತಾಲೂಕು ಸರ್ವ ಸದಸ್ಯರು ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ರಾಜಶೇಖರ್ ಪಾಟೀಲ್ ಅವರನ್ನು ಆಯ್ಕೆ ಮಾಡಿತ್ತು. ಆದರೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಇದಕ್ಕೆ ಒಪ್ಪಿಗೆ ನೀಡದೆ, ತಾವು ತಿಳಿಸಿದವರೇ ಅಧ್ಯಕ್ಷರಾಗಬೇಕು ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸಮ್ಮೇಳನಾಧ್ಯಕ್ಷರ ವಿಚಾರದಲ್ಲಿ ಗೊಂದಲ ಏರ್ಪಟ್ಟ ಕಾರಣ ತಾಲೂಕು ಸರ್ವ ಸದಸ್ಯರ ಸಭೆ ಕರೆದು ಚರ್ಚಿಸಲಾಯಿತು.
ಗಮನಕ್ಕೆ ತರಲಾಗಿತ್ತು: ಈ ಮೊದಲೇ ಸಮ್ಮೇಳನಾಧ್ಯಕ್ಷರ ಆಯ್ಕೆ ಪಟ್ಟಿಯನ್ನು ಜಿಲ್ಲಾ ಅಧ್ಯಕ್ಷರ ಸೂಚನೆ ಮೇರೆಗೆ ಗಮನಕ್ಕೆ ತರಲಾಗಿತ್ತು. ಆದರೆ ಜಿಲ್ಲಾಧ್ಯಕ್ಷರು ಸಮ್ಮೇಳನಾಧ್ಯಕ್ಷರನ್ನು ಬದಲಿಸಲು ಒತ್ತಡ ತರುತ್ತಿದ್ದಾರೆ ಎಂಬ ತಾಲೂಕು ಅಧ್ಯಕ್ಷ ಕೃಷ್ಣಾನಂದ್ ಅವರ ಮಾತಿಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಹಿಂದೆ ತೀರ್ಮಾನ ತೆಗೆದುಕೊಂಡಂತೆ ರಾಜಶೇಖರ್ ಪಾಟೀಲರೆ ಸಮ್ಮೇಳನಾಧ್ಯಕ್ಷರಾಗಬೇಕು. ಜಿಲ್ಲಾಧ್ಯಕ್ಷರು ಸೂಚಿಸುವ ಹೆಸರನ್ನು ಮುಂದಿನ ಬಾರಿ ಸಮ್ಮೇಳನದಲ್ಲಿ ಅಧ್ಯಕ್ಷರನ್ನಾಗಿಸೋಣ, ಸಮ್ಮೇಳನದಲ್ಲಿ ಹೀಗೆ ಏಕಾಏಕಿ ಬದಲಾವಣೆ ತರಕೂಡದು ಎಂದು ಆಗ್ರಹಿಸಿದರು.
ತಾಲೂಕು ಘಟಕದ ಪಾತ್ರವೇನು?: ಈ ಗೊಂದಲದ ವಿಚಾರವನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಯಿತಾದರೂ ಸರಿಯಾದ ಉತ್ತರ ದೊರೆತಿಲ್ಲ. ಹಾಗಾದರೆ ತಾಲೂಕು ಸಮ್ಮೇಳನಾಧ್ಯಕ್ಷರನ್ನು ಯಾರು ಆಯ್ಕೆ ಮಾಡಬೇಕು, ಜಿಲ್ಲೆಯವರಾ, ತಾಲೂಕಿನವರ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದ್ದು, ತಾಲೂಕು ಘಟಕದ ಪಾತ್ರ ಎಂತಾದ್ದು ಎಂಬ ಗೊಂದಲ ಮಡುಗಟ್ಟಿತು.
ಜಿಲ್ಲಾಧ್ಯಕ್ಷರ ಸರ್ವಾಧಿಕಾರಿ ಧೋರಣೆಯ ವರ್ತನೆ ತೀರಾ ದುಂಡಾವರ್ತಿಯಂತೆ ತೋರುತ್ತಿದ್ದು, ತಾಲೂಕಿನ ಸಹಕಾರವಿಲ್ಲದೆ ಸಮ್ಮೇಳನ ನಡೆಸಲು ಸಾಧ್ಯವಿಲ್ಲ ಎಂಬ ವಿಚಾರದ ಅರಿವು ಅವರಿಗಿಲ್ಲವೇ? ಜಿಲ್ಲಾಧ್ಯಕ್ಷರಿಗೆ ಇಷ್ಟೆಲ್ಲ ಸುಪ್ರೀಮ್ ಅಧಿಕಾರ ಕೊಟ್ಟವರಾರು ಎಂದು ಸದಸ್ಯರು ಕಿಡಿಕಾರಿದರು.
ಜಿಲ್ಲಾಧ್ಯಕ್ಷರು ಭಾಷಣದಲ್ಲಿ ಮನಸ್ಸುಗಳನ್ನು ಕಟ್ಟುವ ಕೆಲಸವಾಗಬೇಕು ಎನ್ನುತ್ತ ಒಡೆಯುವ ಕೆಲಸಕ್ಕೆ ಮುಂದಾಗಿರುವುದು ಹೇಯಕರ ಎಂದರು.
ತಾಲೂಕು ಘಟಕದ ಸದಸ್ಯರು ತೀರ್ಮಾನಿಸಿದಂತೆ ರಾಜಶೇಖರ್ ಪಾಟೀಲರೇ ಸಮ್ಮೇಳನಾಧ್ಯಕ್ಷರಾಗಬೇಕು, ಸಮ್ಮೇಳನಕ್ಕೆ ಕಸಾಪ ಅನುದಾನವನ್ನೆ ಬಳಸಿಕೊಳ್ಳಬೇಕು. ಒಂದು ವೇಳೆ ಸಮ್ಮೇಳನ ರದ್ದಾದರೆ ಅದಕ್ಕೆ ಜಿಲ್ಲಾಧ್ಯಕ್ಷರು ಮತ್ತು ಜಿಲ್ಲಾ ಕಾರ್ಯಕಾರಿ ಸಮಿತಿಯವರೇ ಹೊಣೆಗಾರರು ಎಂಬ ತೀರ್ಮಾನಕ್ಕೆ ಬರಲಾಯಿತು.
ತಾಲೂಕು ಘಟಕದ ಅಧ್ಯಕ್ಷ ಕೃಷ್ಣಾನಂದ, ಆನವಟ್ಟಿ ಘಟಕದ ಅಧ್ಯಕ್ಷ ಉಮೇಶ್ ಬಿಚ್ಚುಗತ್ತಿ, ದಿನಕರ ಭಾವೆ, ಆಶಾ ರಂಗನಾಥ್, ಷಣ್ಮುಖಾಚಾರ್ ಸೇರಿದಂತೆ ಹಲವರು ಸದಸ್ಯರು ಇದ್ದರು.