ಕಾಗೋಡು ಹೇಳಿದರೆ ರಾಜಿನಾಮೆ ನೀಡುವೆ
ಶಿವಮೊಗ್ಗ: ಕಾಗೋಡು ತಿಮ್ಮಪ್ಪ ಅವರ ಮಾರ್ಗದರ್ಶನದಲ್ಲಿಯೇ ನಾನು ಕೆಲಸ ಮಾಡುತ್ತಿದ್ದು, ಮಂತ್ರಿ ಪದವಿಗೆ ರಾಜೀನಾಮೆ ಕೊಡಿ ಎಂದು ಅವರು ಹೇಳಿದರೆ ಆ ಕ್ಷಣವೇ ರಾಜೀನಾಮೆ ನೀಡುತ್ತೇನೆ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಾನೆಂದು ಅಧಿಕಾರಕ್ಕೆ ಆಸೆಪಟ್ಟವನಲ್ಲ. ಹಣ, ಅಧಿಕಾರದ ವ್ಯಾಮೋಹ ಕೂಡ ನನಗಿಲ್ಲ. ವ್ಯವಸ್ಥೆ ಸರಿ ಮಾಡಬೇಕೆಂಬುದುದಷ್ಟೇ ನನ್ನ ಗುರಿ. ತಮ್ಮನ್ನು ಮಂತ್ರಿ ಮಾಡಿ ಎಂದು ಯಾರನ್ನೂ ಕೇಳಿಲ್ಲ. ಪಕ್ಷ ನಾಳೆಯೇ ನನ್ನ ರಾಜೀನಾಮೆ ಕೇಳಿದರೆ ನೀಡಲು ಸಿದ್ಧ.
ಕುರ್ಚಿ ವ್ಯಾಮೋಹ ಬೇಡ: ನಾನು ಪಕ್ಷ ಹಾಗೂ ಕಾರ್ಯಕರ್ತರ ಮೇಲೆ ಅವಲಂಭಿತನಾಗಿದ್ದೇನೆ. ಕಾರ್ಯಕರ್ತರು ಕುರ್ಚಿ ಮೇಲಿನ ವ್ಯಾಮೋಹ ಬಿಡಬೇಕು. ಪಕ್ಷವನ್ನು ಕಟ್ಟಲು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ತಿಳಿಸಿದರು.
ನನಗೆ ಮಾಡಿದ ಸನ್ಮಾನ ಪಕ್ಷಕ್ಕೆ ಸೇರಿದ್ದು. ಕಾಂಗ್ರೆಸ್ ಇಲ್ಲದಿದ್ದರೆ ನಾನು ಶಾಸಕ, ಮಂತ್ರಿ ಆಗುತ್ತಿರಲಿಲ್ಲ. ನನಗೆ ಕಾರ್ಯಕರ್ತರ ಅಳಲು, ದುಮ್ಮಾನ ತಿಳಿದಿದೆ. ನಾನು ಯಾವಾಗಲೂ ಸಾಮಾನ್ಯನಂತೆಯೇ ಇರಲು ಬಯಸುತ್ತೇನೆ. ಈಗ ಗೂಟದ ಕಾರಿನಲ್ಲಿ ಸಂಚರಿಸುತ್ತಿರುವುದು ನನ್ನನ್ನು ಕಟ್ಟಿ ಹಾಕಿದಂತಾಗಿದೆ. ಜನರಿಂದ ದೂರಾಗುತ್ತಿದ್ದೇನೋ ಎಂಬ ಭಾವನ ಮೂಡುತ್ತಿದೆ. ನನ್ನನ್ನು ಯಾರು ಬೇಕಾದರೂ ಎಲ್ಲಿಯಾದರೂ ಮಾತನಾಡಿಸಬಹುದು. ಮಂತ್ರಿಯೆಂಬ ಮನೋಭಾವನೆ ಬಿಟ್ಟುಬಿಡಿ ಎಂದು ಅವರು ಹೇಳಿದರು.