ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಗರಸಭೆ ಗುತ್ತಿಗೆ ಪೌರ ಕಾರ್ಮಿಕರ ಪ್ರತಿಭಟನೆ

Rashmi Kasaragodu
Updated On : 21 May 2013, 11:28 am

ಶಿವಮೊಗ್ಗ: ಇಲ್ಲಿನ ನಗರಸಭೆ ಗುತ್ತಿಗೆ ಪೌರ ಕಾರ್ಮಿಕರು ಹಾಗೂ ನೀರು ಸರಬರಾಜು ಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಖಾಸಗಿ ಬಸ್ಸು ನಿಲ್ದಾಣ ಮುಂಭಾಗ ಪ್ರತಿಭಟನೆ ನಡೆಸಿದರು.
 ಕಳೆದ 15 ವರ್ಷಗಳಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ, ನಾಗರಿಕರಿಗೆ ಉತ್ತಮ ಸೇವೆ ನೀಡುತ್ತಿದ್ದೇವೆ. ಆದರೆ ಕೆಲಸಕ್ಕೆ ತಕ್ಕ ವೇತನ ನೀಡುವಲ್ಲಿ ಸ್ಥಳಿಯ ಆಡಳಿತ ಸಂಪೂರ್ಣ ವಿಫಲವಾಗಿದ್ದು, ನಿರ್ಲಕ್ಷ್ಯ ಧೋರಣೆ ತಳೆದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
 ಬೆಲೆ ಏರಿಕೆ ದಿನದಲ್ಲಿ ತಮಗೆ ದೊರೆಯುತ್ತಿರುವ ಮಾಸಿಕ ವೇತನ ಅತ್ಯಲ್ಪವಾಗಿದೆ ಎಂದು ಪ್ರತಿಭಟನಾಕಾರರು ತಮ್ಮ ಅಳಲು ತೋಡಿಕೊಂಡರು. ಗುತ್ತಿಗೆ ಪದ್ದತಿಯನ್ನು ಶಾಶ್ವತವಾಗಿ ರದ್ದುಪಡಿಸಬೇಕು, ಖಾಯಂ ಅಥವಾ ದಿನಗೂಲಿ ಕಾರ್ಮಿಕರನ್ನಾಗಿ ನೇಮಕಾತಿ ಮಾಡಿಕೊಳ್ಳಬೇಕು, ಮಾಸಿಕ ವೇತನ 10 ಸಾವಿರ ರುಪಾಯಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
 ರಾಷ್ಟ್ರೀಯ ಹಬ್ಬಗಳಿಗೆ ಮುಂಗಡ ಸೌಲಭ್ಯ ಹಾಗೂ ಡಿಎ ಒದಗಿಸಬೇಕು. ಇತರೆ ಕಾರ್ಮಿಕರಂತೆ ಹಬ್ಬಗಳಂದು ರಜಾ ನೀಡಬೇಕು, ನೀರು ಸರಬರಾಜು ಕಾರ್ಮಿಕರಿಗೆ ಸಮಯ ನಿಗದಿಪಡಿಸಬೇಕು. ಪಿಎಫ್, ಇಎಸ್‌ಐ ಸೇರಿದಂತೆ ಖಾಯಂ ನೌಕರರಿಗೆ ನೀಡುವ ಎಲ್ಲ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
 ಗುತ್ತಿಗೆ ಪೌರ ಕಾರ್ಮಿಕರಿಗೆ ಹಾಗೂ ನೀರು ಸರಬರಾಜು ಕಾರ್ಮಿಕರಿಗೆ ಆಶ್ರಯ ಯೋಜನೆಯಡಿ ನಿವೇಶನ ಮಂಜೂರು ಮಾಡಬೇಕು. ಪ್ರಸ್ತುತವಿರುವ ಹೊಸ ಮೇಸ್ತ್ರಿಗಳಿಂದ ದಬ್ಬಾಳಿಕೆ ಹೆಚ್ಚಾಗಿದ್ದು ಅವರನ್ನು ಈ ಕೂಡಲೇ ವಜಾಗೊಳಿಸಿ ಅನುಭವವಿರುವ ಮೇಸ್ತ್ರಿಗಳನ್ನು ನೇಮಕ ಮಾಡಿಕೊಳ್ಳಬೇಕೆಂದು ನಗರಸಭಾ ಆಯುಕ್ತರನ್ನುಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement