'ರೈತರ ಸಮಸ್ಯೆಗೆ ಶೀಘ್ರ ಪರಿಹಾರ'
ಕಡೂರು: ಸಾರಿಗೆ ಸಿಬ್ಬಂದಿಗೆ ವಸತಿ ನಿರ್ಮಾಣದಿಂದ ರೈತರ ಜಮೀನಿಗೆ ತೆರಳಲು ತೊಂದರೆ ಆಗುತ್ತಿದ್ದು, ಇದನ್ನು ಸರಿಪಡಿಸಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾರಿಗೆ ಸಚಿವರೊಂದಿಗೆ ಮಾತುಕತೆ ನಡೆಸಿ ರೈತರ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು.
ಪಟ್ಟಣದ ದೊಡ್ಪ ಪಟ್ಟಣಗೆರೆ ರಸ್ತೆಯ ಬಸ್ ಡಿಪೋ ಪಕ್ಕದಲ್ಲಿ ಸಾರಿಗೆ ಸಂಸ್ಥೆಯ ನೌಕರರ ವಸತಿ ಗೃಹಗಳ ನಿರ್ಮಾಣ ಮಾಡುತ್ತಿರುವ ಹಿನ್ನೆಲೆಯಲ್ಲಿ ರೈತರು ಜಮೀನಿಗೆ ಹೋಗಲು ತೊಂದರೆ ಉಂಟಾಗುತ್ತಿದೆ. ಅಲ್ಲದೆ ಬಸ್ ಡಿಪೋ ಜಾಗ ಸೇರಿದಂತೆ ರೈತರು ಓಡಾಡುವ ದಾರಿಯನ್ನು ಸೇರಿಸಿ ಒಟ್ಟು 10.25 ಎಕರೆ ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡಿರುವುದರಿಂದ ತೊಂದರೆಯಾಗುತ್ತಿದೆ ಎಂದು ಶಾಸಕ ದತ್ತರವರ ಬಳಿ ರೈತರು ದೂರು ಹೇಳಿದರು. ಅಹವಾಲು ಕೇಳಿದ ನಂತರ ತಾಲೂಕು ದಂಡಾಧಿಕಾರಿ ಮತ್ತು ಸರ್ವೇಕ್ಷಣಾ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಚರ್ಚಿಸಲಾಯಿತು.