ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಲಿಂಗನಮಕ್ಕಿ ಜಲಾಶಯದಲ್ಲಿ ನೀರಿಗೆ ಬರ

Rashmi Kasaragodu
Updated On : 21 May 2013, 11:37 am

ಶಿವಮೊಗ್ಗ: ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಬರದ ಮುನ್ಸೂಚನೆ ಕಾಣಿಸಿದೆ.
 ಮೂರುನಾಲ್ಕು ವಾರಗಳ ಮಟ್ಟಿಗೆ ಯಾವುದೇ ತೊಂದರೆ ಇಲ್ಲವಾದರೂ ನಿಗದಿತ ಸಮಯಕ್ಕೆ ಮುಂಗಾರು ಮಳೆ ಆರಂಭವಾಗದಿದ್ದರೆ, ವಿದ್ಯುತ್ ಉತ್ಪಾದನೆಯ ಮೇಲೆ ಗಂಭೀರ ಪರಿಣಾಮ ಬೀರುವುದು ನಿಚ್ಚಳವಾಗಿದೆ.
ಡೆಡ್ ಸ್ಟೋರೇಜ್: ಸೋಮವಾರದ ಮಾಹಿತಿಯಂತೆ ಲಿಂಗನಮಕ್ಕಿ ಜಲಾಶಯದಲ್ಲಿ 1,757 ಅಡಿ ನೀರು ಸಂಗ್ರಹವಿದೆ. ಇಲ್ಲಿ ಗರಿಷ್ಠ ನೀರಿನ ಮಟ್ಟ 1,819 ಅಡಿ ಇದ್ದು, 1,284 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾನಯನ ವ್ಯಾಪ್ತಿಯ ಸುತ್ತಮತ್ತ ಆಗಾಗ್ಗೆ ಬೀಳುತ್ತಿರುವ ಬೇಸಿಗೆ ಮಳೆಯಿಂದ ಸುಮಾರು ಒಂದು ಸಾವಿರ ಕ್ಯುಸೆಕ್‌ನಷ್ಟು ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಒಟ್ಟಾರೆ ಪ್ರಸ್ತುತ ಜಲಾಶಯದಲ್ಲಿ ಶೇ.16-17 ರಷ್ಟು ನೀರು ಸಂಗ್ರಹವಿದೆ.
 ಇಲ್ಲಿನ ತಂತ್ರಜ್ಞರ ಪ್ರಕಾರ 1,742 ಅಡಿ ನೀರಿನ ಸಂಗ್ರಹ ಇರುವವರೆಗೆ ವಿದ್ಯುತ್ ಉತ್ಪಾದನೆ ಮಾಡಬಹುದು. ಡೆಡ್ ಸ್ಟೋರೇಜ್ ನೀರನ್ನು ಬೇರೆ ಕಡೆ ಹಾಯಿಸಿ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದ್ದು, 1,725 ಅಡಿಯವರೆಗಿನ ನೀರನ್ನು ಬಳಸಿಕೊಳ್ಳಬಹುದಾಗಿದೆ. ಆ ನಂತರ ವಿದ್ಯುತ್ ಉತ್ಪಾದನೆಗೆ ನೀರು ಬಳಕೆ ಮಾಡಿಕೊಳ್ಳುವುದು ಅಸಾಧ್ಯ.
ವಿದ್ಯುತ್ ಉತ್ಪಾದನೆ ವ್ಯತ್ಯಯ: ಅಂದಾಜಿನ ಲೆಕ್ಕಾಚಾರದ ಪ್ರಕಾರ ಇನ್ನು 15ರಿಂದ 20 ದಿವಸ ವಿದ್ಯುತ್ ಉತ್ಪಾದಿಸಬಹುದಾಗಿದೆ. ಜೂನ್ ಮೊದಲ ವಾರದಿಂದ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆಯಿದ್ದು, ಒಂದು ವೇಳೆ ನಿರೀಕ್ಷಿತ ಸಮಯಕ್ಕೆ ಮುಂಗಾರು ಮಳೆ ಬೀಳದಿದ್ದರೆ ವಿದ್ಯುತ್ ಉತ್ಪಾದನೆ ವ್ಯತ್ಯಯವಾಗಲಿದೆ.
ಶಿವಮೊಗ್ಗಕ್ಕೆ ಸಮಸ್ಯೆ ಇಲ್ಲ: ತುಂಗಾ ತಟದಲ್ಲಿರುವ ಶಿವಮೊಗ್ಗಕ್ಕೆ ಸದ್ಯಕ್ಕೆ ಕುಡಿವ ನೀರಿನ ಆತಂಕವಿಲ್ಲ. ಗಾಜನೂರಿನ ತುಂಗಾ ಜಲಾಶಯದಲ್ಲಿ ನೀರಿನ ಸಂಗ್ರಹ ಸಾಕಷ್ಟಿದ್ದು, ಒಂದೆರೆಡು ದಿನ ಮಳೆ ಕಡಿಮೆಯಾದರೂ ತೊಂದರೆ ಇಲ್ಲವಾಗಿದೆ.
 ತುಂಗಾ ನದಿಯಿಂದ ಕೃಷಿಗಾಗಿ ಎಡ ನಾಲೆಗೆ ಹರಿಸಲಾಗುತ್ತಿದ್ದು, ನೀರನ್ನು ಮೇ 5ರಿಂದಲೇ ಸ್ಥಗಿತಗೊಳಿಸಲಾಗಿದೆ. ಜಲಾನಯನ ವ್ಯಾಪ್ತಿಯಲ್ಲಿ ಆಗಾಗ್ಗೆ ಬೀಳುತ್ತಿರುವ ಬೇಸಿಗೆ ಮಳೆಯಿಂದ ಜಲಾಶಯಕ್ಕೆ ನೀರು ಹರಿದುಬರುತ್ತಿದೆ. ಇದರಿಂದ ನಿಗದಿತ ಸಮಯಕ್ಕೆ ಮುಂಗಾರು ಮಳೆ ಆರಂಭವಾಗದಿದ್ದರೂ ಶಿವಮೊಗ್ಗ ನಗರದ ಕುಡಿಯುವ ನೀರು ಪೂರೈಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದು ಅಧಿಕಾರಿಗಳ ವಿವರಣೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement