ಸಂಗೀತಕ್ಕಿದೆ ರೋಗ ನಿರೋಧಕ ಶಕ್ತಿ
ದಾವಣಗೆರೆ: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯ ಸಂಗೀತಕ್ಕಿದ್ದು, ಸಂಗೀತ ಆಲಿಸುವುದರಿಂದ, ಸಂಗೀತಾಭ್ಯಾಸದಲ್ಲಿ ತೊಡಗುವುದರಿಂದ ನಮ್ಮ ಆರೋಗ್ಯ ವೃದ್ಧಿಸಬಹುದು ಎಂದು ಲೇಖಕಿ, ಎಸ್ಸೆಸ್ ವೈದ್ಯಕೀಯ ಕಾಲೇಜು ಉಪ ಪ್ರಾಚಾರ್ಯೆ ಡಾ.ಶಶಿಕಲಾ ಪಿ. ಕೃಷ್ಣಮೂರ್ತಿ ಹೇಳಿದರು.
ನಗರದ ರೋಟರಿ ಬಾಲಭವನದಲ್ಲಿ ಶನಿವಾರ ಸುರತಾಲ್ ಸಂಗೀತ ವಿದ್ಯಾಲಯದಿಂದ ಏರ್ಪಡಿಸಿದ್ದ ರಾಗರಂಗ್ ಸಂಗೀತ ಗಾಯನ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಮಲ ಸಂಗೀತ ವಿದ್ಯಾಲಯ ಸಂಚಾಲಕಿ, ವಿದುಷಿ ವಿಜಯ ವೆಂಕಣ್ಣ ಭಟ್ಟ ಜೋಷಿ ಮಾತನಾಡಿ, ಸಂಗೀತ ಮನುಷ್ಯನಿಗೆ ದೈವದತ್ತವಾಗಿ ಬಂದ ಕಲೆಯಾಗಿದೆ. ಸಂಗೀತ ಸರಸ್ವತಿಯನ್ನು ಒಲಿಸಿಕೊಳ್ಳಲು ಪೂರ್ವ ಜನ್ಮದ ಸಂಸ್ಕಾರದ ಜೊತೆಗೆ ಸತತ ಸಾಧನೆಯಿಂದ ಸಾಧ್ಯ. ಸಂಗೀತ ಒಂದು ತಪಸ್ಸು ಇದ್ದಂತೆ. ಇಂತಹ ತಪಸ್ಸನ್ನು ಏಕಾಗ್ರತೆ, ತಾಳ್ಮೆಯಿಂದ ಮಾಡಿದವರಿಗೆ ಸಂಗೀತ ಸರಸ್ವತಿ ಒಲಿಯುತ್ತಾಳೆ ಎಂದರು. ಕನ್ನಡ ಪರ ಹೋರಾಟಗಾರ ಕೆ.ಟಿ. ಗೋಪಾಲಗೌಡ ಅಧ್ಯಕ್ಷತೆ ವಹಿಸಿದ್ದರು. ಸಹನಾ ಮಂಜುನಾಥ, ಸಾಹಿತಿ ಶಿವಯೋಗಿ ಹಿರೇಮಠ, ಪಿ. ಲಲಿತಕುಮಾರ ಜೈನ ಇದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಗಾಯಕ ಜೆ. ಮಹಾಂತೇಶ, ಸಿತಾರ ವಾದಕ ಎಂ.ಎಸ್. ಪ್ರದೀಪಕುಮಾರ, ಹಿಂದುಸ್ಥಾನ ಗಾಯಕ ಮಾರುತಿ ಎಸ್. ಚಿತ್ರಗಾರ್‌ರನ್ನು ಇದೇ ವೇಳೆ ಸನ್ಮಾನಿಸಿ, ಗೌರವಿಸಲಾಯಿತು.