ಕಾಂಗ್ರೆಸ್ ಕೃತಕ ಪ್ರನಾಳ ಶಿಶು: ಆಯನೂರು
ಕ.ಪ್ರ.ವಾರ್ತೆ, ತೀರ್ಥಹಳ್ಳಿ, ಮೇ 21
ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅದು ಕೃತಕ ಪ್ರನಾಳ ಶಿಶು. ಮಂತ್ರಿಮಂಡಲ ರಚನಯಾಗುತ್ತಿದೆ. ಆದರೆ ಅದು ಪೂರ್ಣಪ್ರಮಾಣದಲ್ಲಿ ಟೇಕ್ ಆಫ್ ಆಗೋ ಲಕ್ಷಣವಿಲ್ಲ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಕುಟುಕಿದ್ದಾರೆ.
ತೀರ್ಥಹಳ್ಳಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ಧಾಂತ ಮತ್ತು ಸಾಮಾಜಿಕ ಬದ್ಧತೆ ಇರುವ ಬಿಜೆಪಿ ಈಗ ಮತ್ತಷ್ಟು ಗಟ್ಟಿಯಾಗುವ ಸಮಯ ಬಂದಿದೆ. ಪ್ರಸ್ತುತ ಸೋಲು ಆತ್ಮ ವಿಮರ್ಶೆ ಮಾಡಿಕೊಳ್ಳುವ ಪಾಠ ಕಲಿಸಿದೆ. ಈ ಸೋಲಿನಿಂದ ಕಾರ್ಯಕರ್ತರು ಆತ್ಮಸ್ಥೈರ್ಯ ಕಳೆದುಕೊಳ್ಳುವ ಅಗತ್ಯವಿಲ್ಲ, ಈಗಿನ ಸಮಸ್ಯೆಗಳಿಗೆ ಬಿಜೆಪಿ ಮಾತ್ರ ಪರಿಹಾರ ಹುಡುಕಬಲ್ಲದು ಎಂದು ಹೇಳಿದರು.
ಬಿಎಸ್ಆರ್ ಕಾಂಗ್ರೆಸ್ ಮತ್ತು ಕೆಜೆಪಿ ಪಾರ್ಟಿಗಳದ್ದು ಒನ್ ಟೈಮ್ ಕ್ರಾಪ್. ಒಂದೇ ಬೆಳೆ. ಮುಂದೆ ಫಸಲು ಬರುವುದಿಲ್ಲ. ಈಗ ಪಕ್ಷ ಹೊಸ ಮತದಾರರನ್ನು ತನ್ನತ್ತ ಸೆಳೆದುಕೊಳ್ಳಬೇಕು. ಇದು ಹೋರಾಟಕ್ಕೆ ತಕ್ಕ ಸಮಯ ಎಂದು ಹೇಳಿದರು. ಅಟೆಂಡರ್ ಕೆಲಸಕ್ಕೆ 5 ಲಕ್ಷ, ಗುಮಾಸ್ತರ ಕೆಲಸಕ್ಕೆ 10ಲಕ್ಷ ಹಣ ತೆಗೆದುಕೊಂಡು ಕೆಲಸ ಕೊಡುವ ಡಿಸಿಸಿ ಬ್ಯಾಂಕ್ ಕೆಲಸ ಹುಡುಕಿಕೊಂಡು ಬರುವ ಬಡ ಪ್ರತಿಭಾವಂತರಿಗೆ ಯಾವುದೇ ಅನುಕೂಲ ಮಾಡಿಕೊಟ್ಟಲ್ಲ ಎಂದು ಹೇಳಿದರು.
ಮಾಜಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಮೌಲ್ಯಗಳಿಗೆ ಹೆಸರಾದ ತೀರ್ಥಹಳ್ಳಿ ಕ್ಷೇತ್ರದಿಂದ ಹಿಂದೆ ಗೆದ್ದ ಎಲ್ಲ ಜನಪ್ರತಿನಿಧಿಗಳಿಗೂ ವಿಶೇಷ ಗೌರವ ಇತ್ತು. ಈಗ ತಮ್ಮ ಸೋಲಿಗಿಂತ ಕ್ಷೇತ್ರದ ವಿಶೇಷ ಪರಂಪರೆ ಸೋತಿದೆ ಎಂದೆನ್ನಿಸುತ್ತದೆ. ಅಭ್ಯರ್ತಿಯೊಬ್ಬರು ಸಹಕಾರಿ ರಂಗದ ದುರ್ಬಳಕೆ ಮಾಡಿಕೊಂಡಿದ್ದಾರೆ. ಪ್ರಮಾಣಿಕವಾಗಿ ಚುನಾವಣೆ ನೆಡೆದಿದ್ದರೆ ಫಲಿತಾಂಶ ಬೇರೆಯಾಗುತ್ತಿತ್ತು ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಮುಖಂಡ ಸಿದ್ದರಾಮಣ್ಣ, ಸಂತೋಷ್, ತಾಲೂಕು ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ಲಕ್ಷ್ಮಣ್, ಸಿ.ಬಿ. ಈಶ್ವರ್ ಇದ್ದರು.