ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕುಡಿವ ನೀರಿನ ಸರಬರಾಜಿಗೆ ಗಮನ ಹರಿಸಿ

Rashmi Kasaragodu
Updated On : 22 May 2013, 11:23 am

ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 21
ಜಿಲ್ಲೆಯಲ್ಲಿ ಬೇಸಿಗೆ ಪ್ರಮಾಣ ಹೆಚ್ಚಾಗಿದ್ದು, ಅನೇಕ ಕಡೆ ಕುಡಿವ ನೀರಿನ ಸಮಸ್ಯೆ ಉಂಟಾಗಿದೆ. ಹೀಗಾಗಿ ಕೂಡಲೇ ಕುಡಿಯಲು ಶುದ್ಧ ನೀರನ್ನು ಪೂರೈಸಲು ಸಂಬಂಧಿತ ಇಲಾಖೆಗಳು ಕಾರ್ಯ ಪ್ರವೃತರಾಗಬೇಕು ಎಂದು ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಪಂ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಶುದ್ಧ ಕುಡಿಯುವ ನೀರನ್ನು ಪೂರೈಕೆ ಸಂಬಂಧ ಗುತ್ತಿಗೆದಾರರು ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸುವಂತೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆಗೊಳಗಾಗದಂತೆ ನೋಡಿಕೊಳ್ಳಬೇಕು ಎಂದರು.
ವಿಳಂಬ ನೀತಿ: ಕುಡಿಯುವ ನೀರು ಪೂರೈಕೆಗಾಗಿ ಸರ್ಕಾರದಿಂದ ಸಾಕಷ್ಟು ಹಣ ಬಂದಿದೆ. ಆದರೆ, ಕಾಮಗಾರಿ ಕೈಗೆತ್ತಿಕೊಂಡಿರುವ ಕಂಟ್ರಾಕ್ಟರ್‌ಗಳು ಸರಿಯಾದ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸದೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಸಿಆರ್‌ಏಫ್ ಯೋಜನೆಯಿಂದ ಸಾಕಷ್ಟು ಹಣ ಬಂದಿದ್ದರೂ ಅಧಿಕಾರಿಗಳು ಕುಡಿಯುವ ನೀರಿನ ಯೋಜನೆಗೆ ಹಣವಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಕಳಪೆ ಕಾಮಗಾರಿ ಮಾಡಿದ ಆರೋಪ ಎದುರಿಸುತ್ತಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದರು.
ಯೋಜನೆಗೆ ಬಳಕೆ: ಜಿಪಂ ಕಾರ್ಯನಿರ್ವಾಹಣಾಧಿಕಾರಿ ಶಶಿಕಾಂತ್ ಸೆಂಥಿಲ್ ಮಾತನಾಡಿ, ಸಿಆರ್‌ಎಫ್ ಯೋಜನೆಯಿಂದ ಬಂದ ಹಣವನ್ನು ಸಮರ್ಪಕವಾಗಿ ಯೋಜನೆಗೆ ಬಳಕೆಯಾಗಿದ್ದು, ಶೇ.90ರಷ್ಟು ಪ್ರಮಾಣದಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದರು.
ಕೃಷಿ ಚಟುವಟಿಕೆಗಳಿಗೆ ಅಡಚಣೆ: ಶಿವಮೊಗ್ಗ ತಾಲೂಕಿನ ಹೊಳಲೂರು ಏತ ನೀರಾವರಿ ಕಾಮಗಾರಿ ವಿವಿಧ ಕಾರಣಗಳಿಗಾಗಿ ಅಪೂರ್ಣಗೊಂಡಿರುವುದು ಬೇಸರದ ಸಂಗತಿ. ಇದರಿಂದಾಗಿ ಅನೇಕ ರೈತ ಫಲಾನುಭವಿಗಳಿಗೆ ಕೃಷಿ ಚಟುವಟಿಕೆಗಳಿಗೆ ಅಡಚಣೆ ಉಂಟಾಗುತ್ತಿದೆ. ಇಂತಹ ಕಾಮಗಾರಿಗಳ ಅನುಷ್ಠಾನ ಕಾರ್ಯದಲ್ಲಿ ಸಮಸ್ಯೆಗಳು ಎದುರಾದಲ್ಲಿ ಅಧಿಕಾರಿಗಳು ಸಂಬಂಧಿಸಿದ ಇಲಾಖೆಯ ಮೇಲಾಧಿಕಾರಿಗಳ ಗಮನ ಸೆಳೆದು ಪರ್ಯಾಯ ಕ್ರಮಕೈಗೊಳ್ಳುವ ಬಗ್ಗೆ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳುವುದು ಅವಶ್ಯಕ. ಇಂತಹ ಸಂದರ್ಭದಲ್ಲಿ ಸಂಬಂದಿತ ಇಲಾಖೆಗಳ ಅಧಿಕಾರಿಗಳು ಪರಸ್ಪರರ ನಡುವೆ ಸಮನ್ವಯತೆ ಇಟ್ಟುಕೊಂಡು ನಿಗಧಿತ ಕಾಲಮಿತಿಯೊಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದರು.
ಮೆಸ್ಕಾಂ ತೊಂದರೆ: ಈ ವೇಳೆ ಪ್ರತಿಕ್ರಿಯೆ ನೀಡಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿ, ನಮಗೆ ವಿದ್ಯುತ್ ಸಮಸ್ಯೆ ಇರುವುದರಿಂದ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಮೆಸ್ಕಾಂ ಅಧಿಕಾರಿಗಳು ಸ್ಪಂದಿಸಿದರೆ ಒಂದೆರಡು ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಮೀನು ಕೃಷಿ: ನಂತರ ವಿನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಾತನಾಡಿ, ಕಳೆದ ಸಾಲಿನಲ್ಲಿ ಜಿಲ್ಲೆಯ ಕೆರೆಗಳಲ್ಲಿ ಬಿತ್ತನೆ ಮಾಡಿದ್ದ ಮೀನುಮರಿಗಳನ್ನು ರೈತರಿಂದ ಖರೀದಿಸಲು ಸರ್ಕಾರಕ್ಕೆ ಸಲ್ಲಿಸಲಾಗಿದ್ದ ಪ್ರಸ್ತಾವನೆ ಕಾರಣಾಂತಗಳಿಂದ ರದ್ದುಗೊಂಡಿದೆ. ಇದರಿಂದಾಗಿ ಮೀನು ಕೃಷಿಕರಿಗೆ ಸಂಭವಿಸಿರುವ ನಷ್ಟವನ್ನು ಭರಿಸಲು ಹಾಗೂ ಪ್ರೋತ್ಸಾಹ ನೀಡಲು ನವೀಕೃತ ಪ್ರಸ್ತಾವನೆಯನ್ನು ಸಲ್ಲಿಸಿ ಅನುಮೋದನೆ ಪಡೆದು ನಂತರ ಅರ್ಹ ಮತ್ಸೋದ್ಯಮಿಗಳಿಗೆ ಪರಿಹಾರಧನ ವಿತರಿಸಲಾಗುವುದು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದ ಇಲಾಖೆಯ ಆಯುಕ್ತರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ ಎಂದರು.
ವಿದ್ಯುತ್ ಸಂಪರ್ಕ: ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ ಮಾತನಾಡಿ, ತಾಲೂಕಿನ ಶೆಟ್ಟಿಹಳ್ಳಿ ಮತ್ತು ಚಿತ್ರಶೆಟ್ಟಿ ಹಳ್ಳಿ ಗ್ರಾಮದ ವಾಸಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆಯೇ ಎಂದು ಪ್ರಶ್ನಿಸಿದಾಗ, ಮೆಸ್ಕಾಂ ಅಧಿಕಾರಿಗಳು ಇಲ್ಲ. ಏಕೆಂದರೆ ಆ ಭಾಗದಲ್ಲಿ ಅರಣ್ಯ ಇರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ವಿದ್ಯುತ್ ಲೈನ್ ಹಾಕಲು ಅವಕಾಶ ನೀಡುತ್ತಿಲ್ಲ ಎಂದರು.
ಸೋಲಾರ್ ಸಂಪರ್ಕ: ಜಿಪಂ ಸಿಇಓ ಮಾತನಾಡಿ, ಈ ಭಾಗದಲ್ಲಿ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲು ಮೆಸ್ಕಾಂ 1.94 ಕೋಟಿ ರುಪಾಯಿಗಳ ಪ್ರಸ್ತಾವನೆಯನ್ನು ಸಲ್ಲಿಸಿದೆ. ಆದರೆ ಇಷ್ಟು ದೊಡ್ಡ ಮಟ್ಟದ ಹಣ ಜಿಪಂಗೆ ಸರ್ಕಾರದಿಂದ ಬರುವುದಿಲ್ಲ. ಆದರಿಂದ ವಿದ್ಯುತ್ ಸಂಪರ್ಕ ಕಲ್ಪಿಸಲು ಇರಬಹುದಾದ ಪರ್ಯಾಯ ಮಾರ್ಗಗಳನ್ನು ಅನುಸರಿಸುವುದು ಸೂಕ್ತವಾಗಿದೆ. ಈ ಗ್ರಾಮಗಳಿಗೆ ಸೋಲಾರ್ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಕ್ರೆಡಿಲ್ ಸಂಸ್ಥೆಗೆ ಹೊಸದಾಗಿ ಪ್ರಸ್ತಾವನೆಯನ್ನು ತಯಾರಿಸಿ ಸಲ್ಲಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಭೂರಹಿತ ಫಲಾನುಭವಿಗಳಿಗೆ ಮಂಜೂರಾದ ಭೂಮಿ ವ್ಯವಸ್ಥಿತವಾಗಿ ಸ್ವಾದೀನಕ್ಕೆ ದೊರಕದಿರುವುದು ಗಮನಕ್ಕೆ ಬಂದಿದೆ.
ಫಲಾನುಭವಿಗಳಲ್ಲದವರು ಈ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅರ್ಹ ಫಲಾನುಭವಿಗಳಿಗೆ ಭೂಮಿ ಬಿಟ್ಟುಕೊಡಲು ಅಡಚಣೆ ಉಂಟು ಮಾಡುತ್ತಿದ್ದಾರೆ. ಅಂತಹ ಸಮಸ್ಯೆಗಳಿರುವ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ವ್ಯವಸ್ಥಿತ ರೀತಿಯಲ್ಲಿ ನಿಯಮಾನುಸಾರ ಭೂಮಿ ನಕ್ಷೆ ಆಕಾರ ಮತ್ತಿತರ ಮಾಹಿತಿಯೊಂದಿಗೆ ಭೂಮಿಯನ್ನು ದೊರಕಿಸಿಕೊಡುವಂತೆ ರುದ್ರಪ್ಪ ದಾನೇರ ಅವರು ಅಂಬೇಡ್ಕರ್ ಅಬಿವೃದ್ಧಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಗಾಯಿತ್ರಿ ಷಣ್ಮಖಪ್ಪ, ಯಲ್ಲಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಇದ್ದರು.


ನೆಮ್ಮದಿ ಇಲ್ಲದ ನಿರ್ಮಿತಿ


ನಿರ್ಮಿತಿ ಕೇಂದ್ರದ ಮೂಲಕ ಜಿಲ್ಲೆಯಲ್ಲಿ ನಡೆಯುತ್ತಿರುವ ಆರೋಗ್ಯ ಇಲಾಖೆ ಮತ್ತು ವಿದ್ಯಾರ್ಥಿ ವಸತಿ ನಿಲಯಗಳ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ನಿರ್ಮಿತಿ ಕೇಂದ್ರ ಅಧಿಕಾರಿಗಳಿಗೆ ಸಿಇಓ ಶಶಿಕಾಂತ್ ಸೆಂಥಿಲ್ ಚಾಟಿ ಬೀಸಿದರು. ನೀವು ನಿರ್ಮಾಣ ಮಾಡುತ್ತಿರುವುದು ಆಸ್ಪತ್ರೆ, ಹಾಸ್ಟೆಲ್‌ಗಳನ್ನು ಸಿನಿಮಾ ಮಂದಿರಗಳನ್ನಲ್ಲ. ಕೂಡಲೇ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಆರಂಭಿಸಿ, ಒಂದೆರಡು ವಾರದ ಅವಧಿಯೊಳಗಾಗಿ ಸಂಬಂಧಿಸಿದ ಇಲಾಖೆಗೆ ಹಸ್ತಾಂತರಿಸುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement