ಚರಂಡಿಯಾದ ತುಂಗಾ ಚಾನೆಲ್
ಮೋಹನ್ ಕುಮಾರ್
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಮೇ 21
ಅಭಿವೃದ್ಧಿ ಮಂತ್ರ ಪಡಿಸುವ ನಮ್ಮ ಜನಪ್ರತಿನಿಧಿಗಳು ತಮ್ಮ ನಡುವೆ ಇರುವ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು. ಇದಕ್ಕೊಂದು ಸ್ಪಷ್ಟ ಉದಾಹರಣೆಯೆಂದರೆ ನಗರದ ಹೃದಯ ಭಾಗದಲ್ಲಿ ಹರಿಯುವ ತುಂಗಾ ಚಾನೆಲ್ ಇದೀಗ ಕೊಳಚೆ ಚರಂಡಿಯಾಗಿ ಮಾರ್ಪಟ್ಟಿದೆ.
ಚರಂಡಿಯಾದ ನದಿ: ಗಾಜನೂರಿನ ತುಂಗಾ ಜಲಾಶದಿಂದ ನಗರದ ಮಂಡ್ಲಿ, ಗೋಪಾಳ ಮತ್ತು ಲಕ್ಷ್ಮೀ ಟಾಕೀಸ್ ಮಾರ್ಗವಾಗಿ ತುಂಗಾ ಭದ್ರಾ ನದಿಗೆ ಸೇರುವ ಈ ತುಂಗಾ ಚಾನೆಲ್ಗೆ ಸರಿಯಾದ ಕಾಯಕಲ್ಪ ಸಿಗದೇ ಚರಂಡಿಯಾಗಿ ಪರಿವರ್ತನೆಯಾಗಿದ್ದು, ಇದರಿಂದ ಹಲವಾರು ರೋಗಗಳಿಂದ ನರಳುತ್ತಿದ್ದಾರೆ.
ಈ ಚಾನೆಲ್ನ ಎರಡು ಬದಿಯಲ್ಲಿ ಕೆಲ ಅನಧಿಕೃತ ಮನೆ ಮತ್ತು ಕಟ್ಟಡಗಳು ನಿರ್ಮಾಣಗೊಂಡಿದ್ದು, ಈ ಮನೆಗಳ ಒಳಚರಂಡಿ ನೀರನ್ನು ನೇರವಾಗಿ ಈ ಚಾನೆಲ್ಗೆ ಹರಿದು ಬಿಡಲಾಗಿದೆ. ಅಷ್ಟೇ ಅಲ್ಲದೇ, ಕಲ್ಲಹಳ್ಳಿ ಬಳಿ ಇದ್ದಂತಹ ಕೆರೆ ಮುಚ್ಚಿದ್ದರಿಂದ ಕೆರೆಯಲ್ಲಿ ಸಂಗ್ರಹವಾಗುತ್ತಿದ್ದ ಕೊಳಚೆ ನೀರು ಚಾನೆಲ್ಗೆ ಹರಿದು ಬರುತ್ತಿದೆ. ಮುಖ್ಯವಾಗಿ ವಾರದಲ್ಲಿ 2 ದಿನ ಮಾತ್ರ ಜಲಾಶಯದಿಂದ ಈ ಕಾಲುವೆಗೆ ನೀರು ಹರಿಸಲಾಗಿದ್ದು, ಉಳಿದ ದಿನಗಳು ನೀರು ಹರಿಯುವುದಿಲ್ಲ. ಇದರಿಂದ ನೀರು ಮುಂದೆ ಹರಿಯಲು ಸಾಧ್ಯವಾಗದೇ ನೀರು ಕಲುಷಿತಗೊಳ್ಳುತ್ತದೆ ಎಂಬುದು ಸ್ಥಳೀಯರ ಆರೋಪ.
ಕೆಟ್ಟ ವಾಸನೆ: ಒಂದೆಡೆ ಕೊಳೆತ ನೀರಿನ ವಾಸನೆಯಿಂದ ಮುಗುಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾದರೆ, ಮತ್ತೊಂದೆಡೆ ಸೊಳ್ಳೆಗಳ ಕಾಟದಿಂದ ಸಾಕಷ್ಟು ಜನ ಅನಾರೋಗ್ಯದಿಂದ ನರಳುವಂತಾಗಿದೆ.
ಕಳೆದ ಬಾರಿ ನಗರಸಭೆ ಆಡಳಿತ ಚುಕ್ಕಾಣಿ ಹಿಡಿದಿದ್ದ ಬಿಜೆಪಿ, ಈ ವಾರ್ಡ್ಗಳ (19 ಮತ್ತು 7) ಜನಪ್ರತಿ ನಿಧಿಗಳ ಮನವಿಯ ಮೇರೆಗೆ ತುಂಗಾ ಮೇಲ್ದಂಡೆ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿ ಹೂಳೆತ್ತಿದ್ದು ಬಿಟ್ಟರೆ ಮತ್ತೆ ಕಾಲುವೆಯಲ್ಲಿ ಹೂಳೆತ್ತುವ ಗೋಜಿಗೆ ಹೋಗಿಲ್ಲ. ಇದು ಸಹ ಕಾಲುವೆ ಹದಗೆಡಲು ಕಾರಣವಾಗಿದೆ.
ಮುಖ್ಯವಾಗಿ ಕಾಲುವೆಯ ಸ್ವಚ್ಛತಾ ಕಾರ್ಯವನ್ನು ನೀರಾವರಿ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು. ಆದರೆ, ಇದುವರೆಗೂ ಈ ಕಡೆ ಗಮನ ಹರಿಸಿಲ್ಲ. ಇನ್ನೂ ಒಳಚರಂಡಿ ವ್ಯವಸ್ಥೆ ಬಗ್ಗೆ ಕ್ರಮಕೈಗೂಳ್ಳಬೇಕಾದ ನಗರಸಭೆ ಅಧಿಕಾರಿಗಳು ಇದು ನೀರಾವರಿ ಇಲಾಖೆಗೆ ಬರುವುದರಿಂದ ನಾವುಗಳು ಮಾಡಲು ಬರುವುದಿಲ್ಲ ಎಂದು ತಟಸ್ಥವಾಗಿದ್ದಾರೆ. ಆದರೆ, ಇದರಿಂದ ಕಷ್ಟ ಅನುಭವಿಸುತ್ತಿರುವವರು ಮಾತ್ರ ಸ್ಥಳೀಯರು.
ಇವರೇನಂತಾರೇ: ಚಾನೆಲ್ನಲ್ಲಿ ಹೂಳಿರುವುದು, ಸರಿಯಾಗಿ ನೀರು ಹರಿಯದಿರುವುದು ಸಮಸ್ಯೆಯ ಮೂಲ ಕಾರಣ. ಆದರಿಂದ ಮುಂದಿನ ನಗರಸಭೆ ಬಜೆಟ್ನಲ್ಲಿ ತುಂಗಾ ಚಾನೆಲ್ ಬಗ್ಗೆ ಒಂದು ಪ್ಯಾಕೇಜ್ ಮಾಡಿ, ರಾಜ್ಯ ಸರ್ಕಾರ ಅಥವಾ ಸ್ಥಳೀಯ ಜಿಲ್ಲಾಡಳಿತದಿಂದಾಗಲಿ ಸ್ವಚ್ಛತೆಗೆ ಕ್ರಮಕ್ಕೆಗೊಳ್ಳುವಂತೆ ಆಗ್ರಹಿಸಲಾಗುತ್ತದೆ.
ಅಲ್ಲದೇ, ಪ್ರತಿ 15 ದಿನದಲ್ಲಿ 5 ದಿನಗಳು ಜಲಾಶಯದಿಂದ ಚಾನೆಲ್ಗೆ ನೀರು ಹರಿಸುವಂತೆ ಮನವಿ ಮಾಡಲಾಗುವುದು ಎನ್ನುತ್ತಾರೆ 19ನೇ ವಾರ್ಡ್ನ ನಗರಸಭೆ ಸದಸ್ಯ ನಾಗರಾಜ್ ಕಂಕಾರಿ.
ಸ್ವಚ್ಚತೆ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಕೇಳಿದರೆ ನೀರಾವರಿ ಇಲಾಖೆಯವರು ಇದನ್ನು ಮಾಡಬೇಕು ಅಂತಾರೇ. ಆದರೆ, ಇದುವರೆಗೂ ಯಾರು ಬಂದು ಕಾಲುವೆ ಸ್ಚಚ್ಚ ಮಾಡಿಲ್ಲ. ಕೊಳೆತ ಪದಾರ್ಥಗಳಿಂದ ಕೆಟ್ಟ ವಾಸನೆ ಬರುತ್ತೇ, ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಕಾಟ ಹೆಚ್ಚಾಗಿ ಎಷ್ಟೋ ಜನ ಆಸ್ಪತ್ರೆ ಬಾಗಿಲು ಸಹ ತಟ್ಟಿದ್ದಾರೆ ಎನ್ನುತ್ತಾರೆ ಸ್ಥಳೀಯ ಅಂಗಡಿ ಮಾಲೀಕ ಸುರೇಶ್.