ನೋಂದಾಯಿತ ಕಾರ್ಮಿಕರನ್ನು ಮಾತ್ರ ಬಳಸಿ: ಸುತ್ತೋಲೆ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಮೇ 21
ಸರ್ಕಾರಿ ಕಟ್ಟಡ ಕಾಮಗಾರಿಗೆ ಇನ್ನೂ ಮುಂದೆ ಕಾರ್ಮಿಕ ಇಲಾಖೆಯಿಂದ ನೋಂದಾವಣೆಯಾದ ಕಾರ್ಮಿಕರನ್ನು ಮಾತ್ರ ಗುತ್ತಿಗೆದಾರರು ಬಳಸಬೇಕು ಎಂದು ರಾಜ್ಯ ಸರ್ಕಾರ ಸುತ್ತೊಲೆಯೊಂದನ್ನು ಹೊರಡಿಸಿದೆ.
ಶಿವಮೊಗ್ಗ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿದ ಚರ್ಚೆಯ ವೇಳೆ ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಸರ್ಕಾರದ ನೂತನ ಸುತ್ತೋಲೆಯ ಕುರಿತು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ನೋಂದಾಯಿತ ಕಾರ್ಮಿಕರನ್ನು ಮಾತ್ರ ಕೆಲಸಕ್ಕೆ ನಿಯೋಜಿಸಿಕೊಳ್ಳುವಂತೆ ಈಗಾಗಲೇ ನಿರ್ಮಾಣ ಸಂಸ್ಥೆಯವರಿಗೆ ಸೂಚನೆ ನೀಡಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ ಎಂದು ವಿವರಿಸಿದರು.
ಹೊಸ ನಿಯಮ ಖಾಸಗಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅನ್ವಯವಾಗುವುದಿಲ್ಲ. ಖಾಸಗಿ ವಲಯಕ್ಕೂ ಇದು ಅನ್ವಯವಾದರೆ ಕಟ್ಟಡ ಕಾರ್ಮಿಕರ ಹಿತರಕ್ಷಣೆ ಸಾಧ್ಯವಾಗಲಿದೆ. ಈ ವಿಷಯ ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕು ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಸುಮಾರು ಏಳು ಸಾವಿರ ಕಟ್ಟಡ ಕಾರ್ಮಿಕರು ನೋಂದಾವಣೆ ಮಾಡಿಕೊಂಡಿದ್ದಾರೆ. ನೋಂದಾಯಿತ ಕಟ್ಟಡ ಕಾರ್ಮಿಕರು ಕೆಲಸ ಮಾಡುವ ವೇಳೆ ಮೃತಪಟ್ಟರೆ 2 ಲಕ್ಷ ನೀಡಲಾಗುವುದು. ಗಾಯಗೊಂಡರೆ, ಅನಾರೋಗ್ಯಕ್ಕೆ ತುತ್ತಾದರೆ ಆರ್ಥಿಕ ನೆರವು ದೊರಕಲಿದೆ ಎಂದು ತಿಳಿಸಿದರು.
ಜಿ.ಪಂ. ಸಿಇಒ ಶಶಿಕಾಂತ್ ಸಂಥಿಲ್ ಮಾತನಾಡಿ, ಎಲ್ಲ ಕಟ್ಟಡ ನಿರ್ಮಾಣ ಕಾರ್ಮಿಕರು ನೋಂದಾವಣೆ ಮಾಡಲು ಕ್ರಮಕೈಗೊಳ್ಳಿ, ಹಾಗೆಯೇ ನೋಂದಾಯಿತ ಕಟ್ಟಡ ಕಾರ್ಮಿಕರು ಮಾತ್ರ ಸರ್ಕಾರಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ನೇಮಿಸಿಕೊಳ್ಳಬೇಕೆಂಬ ಸರ್ಕಾರದ ಸುತ್ತೊಲೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.