ಬಾರ್ ಮಾಲೀಕನ ಮೇಲೆ ದಾಳಿ: ಗಾಯ
ಶಿವಮೊಗ್ಗ: ಮದ್ಯ ವಿತರಿಸದ ಕಾರಣ ರೊಚ್ಚಿಗೆದ್ದ ಐದಾರು ಜನರ ಗುಂಪೊಂದು ಬಾರ್ ಮಾಲೀಕ ಹಾಗೂ ಆತನ ಸಂಬಂಧಿಯ ಮೇಲೆ ಭರ್ಜಿಯಿಂದ ದಾಳಿ ನಡೆಸಿದ ಘಟನೆ ನಗರದ ಎನ್.ಟಿ. ರಸ್ತೆಯ ಸುಂದರಾಶ್ರಯ ಬಾರ್ ಮತ್ತು ರೆಸ್ಟೋರೆಂಟ್ನಲ್ಲಿ ನಡೆದಿದೆ. ಮಾಲೀಕ ಅನಿಲ್ ಶೆಟ್ಟಿ ಹಾಗೂ ಅವರ ಸಂಬಂಧಿ ಪುರುಷೋತ್ತಮ್ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮದ್ಯ ಮಾರಾಟದ ಅವಧಿ ಮುಕ್ತಾಯವಾದ ನಂತರ ರಾತ್ರಿ ಬಾರ್ ಬಾಗಿಲು ಹಾಕಿಕೊಂಡು ಅನಿಲ್ ಶೆಟ್ಟಿ ತಮ್ಮ ಇಬ್ಬರು ಸಂಬಂಧಿಗಳೊಂದಿಗೆ ಮನೆಗೆ ತೆರಳುತ್ತಿದ್ದ ವೇಳೆ ಆಟೋದಲ್ಲಿ ಐದಾರು ಜನರಿದ್ದ ಗುಂಪೊಂದು ಆಗಮಿಸಿದೆ. ವಿಸ್ಕಿ ಬೇಕೆಂದು ಕೇಳಿದ್ದು ಅಂಗಡಿ ಬಾಗಿಲು ಹಾಕಿದ್ದ ಕಾರಣ ಮಾಲೀಕ ವಿಸ್ಕಿ ಇಲ್ಲವೆಂದು ತಿಳಿಸಿದ್ದಾರೆ.
ರೇಜರ್ನಿಂದ ಗಾಯ: ಇದರಿಂದ ರೊಚ್ಚಿಗೆದ್ದ ಯುವಕರು ಬಾರ್ಗೆ ಬೆಂಕಿ ಹಾಕುವ ಬೆದರಿಕೆ ಹಾಕಿದ್ದಾರೆ. ನಂತರ ಮಾತಿಗೆ ಮಾತು ಬೆಳೆದು, ಆರೋಪಿಗಳು ಭರ್ಜಿ, ರೇಜರ್ ಮೂಲಕ ದಾಳಿ ನಡೆಸಿದ್ದು ಅನಿಲ್ ಶೆಟ್ಟಿಯವರ ಕೈ ಗಾಯವಾಗಿದೆ. ಜೊತೆಗೆ ಅವರ ಕೊರಳಿನಲ್ಲಿದ್ದ 1.20 ಲಕ್ಷ ಮೌಲ್ಯದ ಬಂಗಾರದ ಸರವನ್ನು ಕಿತ್ತುಕೊಂಡಿದ್ದಾರೆ. ಇದನ್ನು ಬಿಡಿಸಲು ಬಂದ ಅವರ ಸಂಬಂಧಿ ಪುರುಷೋತ್ತಮ್ ಮೇಲೂ ಆರೋಪಿಗಳು ಹಲ್ಲೆ ನಡೆಸಿ ರೇಜರ್ನಿಂದ ಕಣ್ಣಿನ ಬಳಿ ತಿವಿದು ಗಾಯಗೊಳಿಸಿದ್ದಾರೆ.
ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.