ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಧ್ಯಕ್ಷ ಸ್ಥಾನಕ್ಕೆ ಅರ್ಹರ ಆಯ್ಕೆ: ಮಂಜುನಾಥ್

Rashmi Kasaragodu
Updated On : 23 May 2013, 11:02 am

ಸೊರಬ ತಾ. ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಆಯ್ಕೆ ವಿವಾದ ೤ ಶಿಫಾರಸಿಗಿಂತ ಅರ್ಹತೆಗೆ ಮಾನ್ಯತೆ


ಕಪ್ರ ವಾರ್ತೆ, ಶಿವಮೊಗ್ಗ, ಮೇ22
ಸೊರಬ ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಆಯ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿದ್ದು, ತಾಲೂಕು ಅಧ್ಯಕ್ಷ ಕೃಷ್ಣಾನಂದ ಅವರು ಜಿಲ್ಲಾ ಸಮಿತಿ ಏಕಪಕ್ಷೀಯವಾಗಿ ವರ್ತಿಸುತ್ತಿದೆ ಎಂಬ ಆರೋಪಕ್ಕೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ.
 ಪ್ರತಿ ತಾಲೂಕಿನಲ್ಲೂ ಸಾಹಿತ್ಯ ಸಮ್ಮೇಳನ ನಡೆಸಬೇಕು. ಅದಕ್ಕೆ ಪೂರ್ವತಯಾರಿ ಮಾಡಿಕೊಳ್ಳಿ ಎಂದು ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ ತೀರ್ಮಾನಿಸಿತ್ತು. ಸಮ್ಮೇಳನಾಧ್ಯಕ್ಷರ ಆಯ್ಕೆ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಡೆಸಬೇಕು. ತಾಲೂಕು ಸಮಿತಿಯಲ್ಲಿ ಚರ್ಚಿಸಿ ಆಯಾಯ ತಾಲೂಕುಗಳ ಸಾಹಿತಿಗಳಲ್ಲಿ ಸಮ್ಮೇಳನಾಧ್ಯಕ್ಷರಾಗಲು ಅವಕಾಶವಿರುವ ನಾಲ್ಕರಿಂದ, ಐದು ಹೆಸರು ಶಿಫಾರಸ್ಸು ಮಾಡಬೇಕೆಂದು ಸೂಚಿಸಲಾಗಿತ್ತು.
ಒಮ್ಮತದ ತೀರ್ಮಾನ: ಜಿಲ್ಲಾ ಸಮಿತಿ ಸಭೆಯಲ್ಲಿ ಎಲ್ಲಾ ತಾಲೂಕು ಅಧ್ಯಕ್ಷರು ಇರುತ್ತಾರೆ. ಹಿರಿತನ, ಸಾಹಿತ್ಯ ಸಾಧನೆ, ಕನ್ನಡದ ಕೆಲಸ, ಪರಿಷತ್ತಿನ ಒಡನಾಟ ಎಲ್ಲವನ್ನೂ ಪರಿಗಣಿಸಿ ಕೇಂದ್ರ ಸಮಿತಿಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಮಾದರಿಯಲ್ಲೇ ತಾಲೂಕು, ಜಿಲ್ಲಾ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಮಾಡೋಣ ಎನ್ನುವುದು ಕಾರ್ಯಕಾರಿ ಸಮಿಯ ಒಮ್ಮತ ತೀರ್ಮಾನವಾಗಿತ್ತು. ಈ ತೀರ್ಮಾನವಾಗುವಾಗ ಸೊರಬ ತಾಲ್ಲೂಕು ಅಧ್ಯಕ್ಷರಾಗಿದ್ದ ಎಸ್. ಕೃಷ್ಣಾನಂದ ಕೂಡ ಉಪಸ್ಥಿತರಿದ್ದರು ಎಂದು ಜಿಲ್ಲಾ ಕಸಾಪ ಸಧ್ಯಕ್ಷರಾದ ಡಿ. ಮಂಜುನಾಥ ಹೇಳಿದ್ದಾರೆ.
 ಬೇರೆಲ್ಲಾ ತಾಲೂಕುಗಳ ಅಧ್ಯಕ್ಷರು ಕಾರ್ಯಕಾರಿ ಸಮಿತಿ ಸಭೆಗೆ ಬರುವಾಗ ಐದಾರು ಹೆಸರುಗಳನ್ನು ಮಂಡಿಸಿದ್ದು, ಅವರಲ್ಲಿ ಓರ್ವರನ್ನು ಆಯ್ಕೆಮಾಡಿದ್ದೇವೆ. ಆದರೆ ಸೊರಬದ ಅಧ್ಯಕ್ಷರು ಒಂದೇ ಹೆಸರನ್ನು ಶಿಫಾರಸು ಮಾಡಿದ್ದರು. ಸಭೆಯಲ್ಲಿದ್ದ ಹಲವು ಕಾರ್ಯಕಾರಿ ಸದಸ್ಯರು ಸೊರಬ ತಾಲೂಕಿನ ಗಣ್ಯ ಸಾಹಿತಿಗಳ ಪಟ್ಟಿಯನ್ನು ಹೇಳಿದರು.
ಒಂದೇ ಹೆಸರು: ಸೊರಬ ತಾಲೂಕಿನಲ್ಲಿ ದೊಡ್ಡ ಸಾಧನೆ ಮಾಡಿದವರು ಇದ್ದಾರೆ. ರಾಷ್ಟ್ರಮಟ್ಟದ ಪ್ರತಿಭೆಗಳಿದ್ದಾರೆ. 22ಕ್ಕೂ ಹೆಚ್ಚು ಪುಸ್ತಕ ಬರೆದ ವಿದ್ವಾಂಸರಿದ್ದಾರೆ. ಅವರನ್ನೆಲ್ಲ ಪರಿಗಣಿಸುವ ಚರ್ಚೆ ನಡೆದಿದೆ. ಅವರನ್ನೆಲ್ಲ ಬಿಟ್ಟು ಒಂದೇ ಹೆಸರು ತಂದಿದ್ದೀರಿ ಏಕೆ. ಜಿಲ್ಲಾ ಸಮಿತಿಯ ತೀರ್ಮಾನ ಉಲ್ಲಂಘನೆ ಮಾಡುವ ಅಗತ್ಯವೇನು ಎಂದು ಸಭೆ ಪ್ರಶ್ನಿಸಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷರು ಹೇಳಿದ್ದಾರೆ, ಅವರು ಹೇಳಿದ್ದಾರೆ, ಇವರು ಹೇಳಿದ್ದಾರೆ ಆದ್ದರಿಂದ ಒಂದೇ ಹೆಸರು ಶಿಫಾರಸು ಮಾಡಿದ್ದೇವೆ. ಇದನ್ನೇ ಒಪ್ಪಬೇಕು ಇಲ್ಲವಾದರೆ ರಾಜೀನಾಮೆ ನೀಡುವೆ ಎಂದು ಕೃಷ್ಣಾನಂದ ಅವರು ಕಿರುಚಾಡಿದ್ದಾರೆ. ಅವರನ್ನು ಸಮಾದಾನಪಡಿಸಿದ ಜಿಲ್ಲಾ ಅಧ್ಯಕ್ಷರು ಇದು ಸಾಹಿತ್ಯ ಪರಿಷತ್ತು ಸಭೆ. ಚರ್ಚೆ ಮಾಡೋಣ, ಸಿಟ್ಟು, ಆಕ್ರೋಶಗಳ ಅಗತ್ಯವಿಲ್ಲ ಎಂದು ಹೇಳಿದರು.
ವಿದ್ವಾಂಸರ ಕಡೆಗಣನೆ: 22ಕ್ಕೂ ಹೆಚ್ಚು ಪುಸ್ತಕ ಬರೆದ ವಿದ್ವಾಂಸರ ಸಾಧನೆ ಸಮ್ಮೇಳನಾಧ್ಯಕ್ಷರಾಗಲು ಮಾನದಂಡವಾಗಬೇಕೆ, ಅಥವಾ ಒತ್ತಡ, ಶಿಫಾರಸು ತಂದವರಿಗೆ ಆದ್ಯತೆ ನೀಡಬೇಕೆ ಎನ್ನುವ ಚರ್ಚೆ ನಡೆದಿದೆ. ಹಠಕ್ಕೆ ಬಿದ್ದವರಂತೆ ತಾವು ಹೇಳಿದವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕೆನ್ನುವ ಧೋರಣೆ ಹಿಂದೆ ವಿಕೃತ ಮನಸ್ಥಿತಿ ಕೆಲಸ ಮಾಡುತ್ತಿದೆ ಎನ್ನುವುದು ಸಮಿತಿ ಅಭಿಪ್ರಾಯ ಎಂದು ಮಂಜುನಾಥ್ ಹೇಳಿದ್ದಾರೆ.
 ಬದಲಿ ವ್ಯವಸ್ಥೆ ಮಾಡಿ ಸಮ್ಮೇಳನ ನಡೆಸುವ ಜವಾಬ್ದಾರಿ ನಮ್ಮದು. ಅದಕ್ಕೆ ಸಹಕರಿಸುವ ವ್ಯವದಾನ ಇರಬೇಕು. ಈಗಾಗಲೇ ಜಿಲ್ಲೆ ಮತ್ತು ವಿವಿಧ ತಾಲೂಕು ಸಮ್ಮೇಳನ ನಿಗಧಿ ಆಗಿರುವುದರಿಂದ ಕಾರ್ಯ ಒತ್ತಡವಿದೆ ಎಂದು ನಮ್ಮ ಭಾವನೆ, ಆಕ್ರೋಶ, ಸಿಟ್ಟು, ಕ್ಷುಲ್ಲಕ ಮಾತುಗಳು ಆಯಾಯ ವ್ಯಕ್ತಿಗಳ ವ್ಯಕ್ತಿತ್ವವನ್ನು ಬಿಂಬಿಸುತ್ತವೆ ಎಂದು ಡಿ. ಮಂಜುನಾಥ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement