ಕ್ಷೇತ್ರವನ್ನೇ ಮರೆತಿದ್ದ ಶಾಸಕ
ಕ.ಪ್ರ.ವಾರ್ತೆ,ಶಿವಮೊಗ್ಗ,ಮೇ 22
ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿಯವರ ಮಾಡಿರುವ ಟೀಕೆಯನ್ನು ಖಂಡಿಸಿರುವ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ, ವಿಧಾನಸಭೆ ಚುನಾವಣೆಯ ವೇಳೆ ಕೆ.ಜಿ. ಕುಮಾರಸ್ವಾಮಿಯವರು ತಾವು ಶಾಸಕರಾಗಿದ್ದ ವೇಳೆ ಜಾರಿಗೆ ತಂದ ಯೋಜನೆಗಳು, ನಡೆಸಿದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಾಧನೆಯ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದರು. ಈ ಸಾಧನೆಯ ಪಟ್ಟಿಯ ನಿಜ ಬಣ್ಣವನ್ನು ಇಷ್ಟರಲ್ಲಿಯೇ ದಾಖಲೆ ಸಮೇತ ಸಾರ್ವಜನಿಕರ ಗಮನಕ್ಕೆ ತರಲಾಗುವುದು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ನೀಡಿದ ಹೇಳಿಕೆಯನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಮನಸ್ಸಿಗೆ ಬಂದಂತೆ ಕೆ.ಜಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಅರ್ಧಂಬರ್ಧ ತಿಳಿದುಕೊಂಡು ಆರೋಪ ಮಾಡುವವರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿರುವುದೇ ಒಳ್ಳೆಯದು ಎಂದು ಕುಟುಕಿದರು.
ಅನುಮೋದನೆ ನಂತರ ಶಂಕುಸ್ಥಾಪನೆ: ತುಂಗಾ ಏತ ನೀರಾವರಿ ಯೋಜನೆಗೆ ಯಾವುದೇ ಅಡೆತಡೆಯಿಲ್ಲ. ಯೋಜನೆಗೆ ಅನುಮೋದನೆ ಸಿಕ್ಕ ನಂತರವೇ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಲಾಗಿತ್ತು ಎಂಬ ಕುಮಾರಸ್ವಾಮಿ ಹೇಳಿಕೆ ಸತ್ಯಕ್ಕೆ ದೂರವಾದುದಾಗಿದೆ ಎಂದು ಅವರು ಪುನರುಚ್ಚರಿಸಿದರು.
ಇಲ್ಲಿಯವರೆಗೂ ತುಂಗಾ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಅಧ್ಯಕ್ಷರಾಗಿರುವ, ಜಲ ಸಂಪನ್ಮೂಲ ಇಲಾಖೆ ಸಚಿವರಿರುವ ಸಮಿತಿಯೊಂದರ ಅನುಮತಿ ಪಡೆಯಲಾಗಿಲ್ಲ. ಇಷ್ಟರಲ್ಲಿಯೇ ಈ ಕುರಿತಂತೆ ಸಮಗ್ರ ಮಾಹಿತಿಯನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ತಾವು ಇನ್ನೂ ಜಿಪಂ ಸದಸ್ಯರ ಮನಸ್ಥಿತಿಯಲ್ಲಿಯೇ ಇದ್ದೇನೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಿಪಂ ಸದಸ್ಯರು ಗ್ರಾಮಾಂತರ ಜನತೆಯಿಂದ ಆಯ್ಕೆಯಾಗಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಶ್ರಮಿಸುತ್ತಾರೆ. ತಾವು ಗ್ರಾಮಾಂತರ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿ ಬಂದಿದ್ದೇನೆ. ಜಿ.ಪಂ. ಸದಸ್ಯರ ಮನಸ್ಥಿತಿಯಿದ್ದರೆ ಮಾತ್ರ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಸಾಧ್ಯ ಎಂಬುವುದನ್ನು ಅವರು ಮನಗಾಣಬೇಕು ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿಯವರು ಶಾಸಕರಾಗಿದ್ದ ಅವಧಿಯಲ್ಲಿ ಸರಿಯಾಗಿ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಲಿಲ್ಲ. ಹಳ್ಳಿಯ ಕಡೆ ಹೋಗಿದ್ದರೆ ಅವರಿಗೆ ಗ್ರಾಮೀಣ ಪ್ರದೇಶದ ಜನತೆಯ ಸಮಸ್ಯೆ ಗೊತ್ತಾಗುತ್ತಿತ್ತು. ಆದರೆ, ಶಾಸಕರಾಗಿ ಆಯ್ಕೆಯಾದ ನಂತರ ಅವರು ತಮ್ಮ ಕ್ಷೇತ್ರವನ್ನೇ ಮರೆತುಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ತಾವು ಗ್ರಾಮಾಂತರ ಜನತೆಯ ಕಷ್ಟಸುಖಗಳನ್ನು ಹತ್ತಿರದಿಂದ ನೋಡಿದ್ದೇನೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಚುನಾವಣೆಯ ವೇಳೆ ಕ್ಷೇತ್ರದ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸುತ್ತೇನೆ ಎಂದರು.