ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಖಾಸಗಿ ಪ್ರಾಕ್ಟೀಸ್ ನಿಲ್ಲಿಸಲಿ

Rashmi Kasaragodu
Updated On : 23 May 2013, 11:00 am

ಸರ್ಕಾರಿ ವೈದ್ಯರಿಗೆ ಶಾಸಕ ಕಾಗೋಡು ಸಲಹೆ ೤ ದೇವಾಲಯ ಜೀಣೋಣದ್ಧಾರಕ್ಕೆ ರು. 2 ಕೋಟಿ


ಸಾಗರ: ಇಲ್ಲಿನ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಎರಡು ಕೋಟಿ ರು. ವೆಚ್ಚದ ಅಂದಾಜು ತಯಾರಿಸಿ ಕೂಡಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಶಾಸಕ ಕಾಗೋಡು ತಿಮ್ಮಪ್ಪ ಅಧಿಕಾರಿಗಳಿಗೆ ಆದೇಶ ನೀಡಿದರು.
 ಮಂಗಳವಾರ ದೇವಸ್ಥಾನಕ್ಕೆ ಭೇಟಿ ನೀಡಿ ಗೋಪುರ ಕುಸಿದಿರುವುದು, ಇತರ ಅವ್ಯವಸ್ಥೆ ಪರಿಶೀಲಿಸಿದ ಅವರು, ಈಗಾಗಲೇ 70ಲಕ್ಷ ರು. ಇಲಾಖೆಯಲ್ಲಿದ್ದು ಉಳಿದ ಹಣವನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಬಿಡುಗಡೆ ಮಾಡಿಸುವುದಾಗಿ ಹೇಳಿದರು. ಕುಸಿದಿರುವ ಗೋಪುರ ದುರಸ್ತಿಗೊಳಿಸುವ ಜೊತೆಗೆ ಅತ್ಯಾಧುನಿಕ ಮಾದರಿಯ ಹೊಸ ಕಟ್ಟಡ ನಿರ್ಮಾಣಕ್ಕೆ ತಜ್ಞ ಶಿಲ್ಪಿಗಳಿಂದ ವಿನ್ಯಾಸ ರೂಪಿಸಲು ಸೂಚಿಸಿದರು.
ತಕ್ಷಣ ದುರಸ್ತಿಗೊಳಿಸಿ: ಇತಿಹಾಸ ಪ್ರಸಿದ್ಧ ಗಣಪತಿ ಕೆರೆ ಒತ್ತುವರಿ ಬಗ್ಗೆ ಪ್ರಸ್ತಾಪಿಸಿ, ತಕ್ಷಣ ಕ್ರಮ ಕೈಗೊಂಡು ಒತ್ತುವರಿ ತೆರವುಗೊಳಿಸಲು ಸೂಚಿಸಿದರು. ಹೋಟೆಲ್ ಮಾಲೀಕರೊಬ್ಬರು ಗಣಪತಿಕೆರೆ ದಂಡೆ ಒಡೆದಿರುವುದನ್ನು ಇಲಾಖೆ ಅಧಿಕಾರಿಗಳು ತಕ್ಷಣ ದುರಸ್ತಿಗೊಳಿಸಿ ಅದಕ್ಕೆ ತಗಲಿದ ವೆಚ್ಚವನ್ನು ಅವರಿಂದ ವಸೂಲಿ ಮಾಡಲು ತಿಳಿಸಿದರು.
ಆಸ್ಪತ್ರೆಗೆ ಭೇಟಿ: ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಕಾಗೋಡು ಕುಂದುಕೊರತೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
 ಆರೋಗ್ಯಕ್ಕೆ ಸಂಬಂಧಪಟ್ಟಂತೆ ಈಗಿರುವ ಬಿಪಿಎಲ್ ಕಾರ್ಡ್‌ದಾರರಿಗೆ ಮಾತ್ರ ಉಚಿತ ಚಿಕಿತ್ಸೆ ಎಂಬ ನಿಯಮವನ್ನು ತೆಗೆದುಹಾಕಿ ಎಲ್ಲರಿಗೂ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರ ಶೀಘ್ರದಲ್ಲಿಯೆ ಮಹತ್ವದ ನಿರ್ಣಯ ಕೈಗೊಳ್ಳಲಿದೆ. ಇದರಿಂದಾಗಿ ಹೆಚ್ಚು ಜನರಿಗೆ ಅನುಕೂಲವಾಗಲಿದೆ ಎಂದರು.
 ಆಸ್ಪತ್ರೆಯ ಕೆಲವು ವೈದ್ಯರ ಬಗ್ಗೆ ದೂರುಗಳಿದ್ದು, ಖಾಸಗಿಯಾಗಿ ಪ್ರಾಕ್ಟಿಸ್ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ಇದರ ಜೊತೆಗೆ ಖಾಸಗಿ ನರ್ಸಿಂಗ್ ಹೋಂಗಳಿಗೆ ರೋಗಿಗಳನ್ನು ಕಳಿಸದೆ ಇಲ್ಲಿಯೆ ಉತ್ತಮ ಚಿಕಿತ್ಸೆ ನೀಡುವ ಬಗ್ಗೆ ಗಮನ ಹರಿಸಬೇಕು. ರೋಗಿಗಳಿಗೆ ಹೊರೆಯಾಗುವ ರೀತಿಯಲ್ಲಿ ಮಣಿಪಾಲ್ ಆಸ್ಪತ್ರೆಗೆ ಕಳಿಸದೆ, ಸರ್ಕಾರದ ಆಡಳಿತಕ್ಕೆ ಒಳಪಟ್ಟಿರುವ ಶಿವಮೊಗ್ಗ, ದಾವಣಗೆರೆ ಅಥವಾ ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಗೆ ಕಳಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಸಲಹೆ ಮಾಡಿದರು.
 ರೋಗಿಗಳಿಂದ ಸಂಗ್ರಹವಾಗುವ ಬಳಕೆದಾರರ ಶುಲ್ಕದಲ್ಲಿ ಉಚಿತವಾಗಿ ಔಷಧಿಗಳನ್ನು ತರಿಸಲು, ಹೆಚ್ಚಿನ ಚಿಕಿತ್ಸೆಗೆ ಹೊರಗೆ ಕಳಿಸಲು ಅ್ಯಂಬುಲೆನ್ಸ್ ಇಂಧನ ತುಂಬಿಸಲು ಅವಕಾಶವಿದೆ. ಅದನ್ನು ಬಳಸಿಕೊಳ್ಳುವಂತೆ ಸೂಚನೆ ನೀಡಿದ ಕಾಗೋಡು, ಗಡಿಬಿಡಿಯಲ್ಲಿ ಬಿಪಿಎಲ್ ಕಾರ್ಡ್ ಬಿಟ್ಟು ಬಂದಿದ್ದರೆ ಅವರಿಗೆ ಚಿಕಿತ್ಸೆ ನೀಡಲು ಮೀನಮೇಷ ಎಣಿಸಬೇಡಿ ಎಂದು ತಾಕೀತು ಮಾಡಿದರು. ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಬಿ.ಜಿ. ಸಂಗಂ, ವೈದ್ಯರು, ಮ.ಸ. ನಂಜುಂಡಸ್ವಾಮಿ, ಜನಪ್ರತಿನಿಧಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement