ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜೂನ್‌ನಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ

Rashmi Kasaragodu
Updated On : 23 May 2013, 10:59 am

ಕ.ಪ್ರ.ವಾರ್ತೆ ಟಿ ದಾವಣಗೆರೆ ಟಿ  ಮೇ 22
ರಂಗಭೂಮಿ ಕಲಾವಿದರ ಜೊತೆಗೆ ರಂಗ ಕರ್ಮಿಗಳಿಗೂ ಮಾಸಾಶನ ನೀಡುವ ಹಿನ್ನೆಲೆಯಲ್ಲಿ ಜಿಲ್ಲೆಯ ರಂಗಕರ್ಮಿ, ರಂಗಭೂಮಿ ಕಲಾವಿದರು ಜೂನ್ ಅಂತ್ಯದ ಒಳಗಾಗಿ ತಮ್ಮ ಅರ್ಜಿಯನ್ನು ಸಲ್ಲಿಸುವಂತೆ ರಾಜ್ಯ ನಾಟಕ ಅಕಾಡೆಮಿ ಜಿಲ್ಲಾ ಸಂಚಾಲಕ ಎ. ಭದ್ರಪ್ಪ ಭದ್ರಣ್ಣನವರ್ ಸೂಚಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇವಲ ರಂಗಭೂಮಿ ಕಲಾವಿದರಿಗಷ್ಟೇ ಮಾಸಾಶನವನ್ನು ನೀಡಲಾಗುತ್ತಿದೆಯೆಂಬ ತಪ್ಪು ಗ್ರಹಿಕೆ ಇದೆ. ಇದನ್ನು ತೊಲಗಿಸಿ, ರಂಗಭೂಮಿ ಕಲಾವಿದರು, ಗೇಟ್ ಕಾಯುವ, ಟಿಕೆಟ್ ನೀಡುವ, ಸೀನರಿ ಕೆಲಸಗಾರರೂ ಸೇರಿದಂತೆ ಇತರೆ ಕೆಲಸ ಮಾಡುವ 58 ವರ್ಷ ಮೇಲ್ಪಟ್ಟ ರಂಗಕರ್ಮಿಗಳೂ ಸಹ ಅರ್ಜಿ ಸಲ್ಲಿಸಬಹುದು ಎಂದರು.
40 ಮಂದಿಗೆ ಮಾಸಾಶನ: ವಾರ್ಷಿಕ ಆದಾಯ 18 ಸಾವಿರ ಮೀರದ ರಂಗಕರ್ಮಿಗಳು, ರಂಗಭೂಮಿ ಕಲಾವಿದರು ಜೂನ್ ಅಂತ್ಯದ ಒಳಗೆ ಅರ್ಜಿ ಸಲ್ಲಿಸಬೇಕು. ಜುಲೈನಲ್ಲಿ ಮಾಸಾಶನಕ್ಕೆ ಶಿಫಾರಸ್ಸು ಮಾಡುವ ಸಮಿತಿ ಸಭೆಯ ಹಿನ್ನೆಲೆಯಲ್ಲಿ ಎಲ್ಲಾ ಅಗತ್ಯ ದಾಖಲೆ ಸಮೇತ ಅರ್ಜಿ ಸಲ್ಲಿಸಬೇಕು. ಜಾನಪದ ನೃತ್ಯ, ನಾಟಕ ಸೇರಿದಂತೆ ವಿವಿಧ ಕ್ಷೇತ್ರದ 40 ಜನಕ್ಕೆ ಪ್ರತಿ ವರ್ಷ ಮಾಸಾಶನವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿ ತಿಂಗಳೂ ತಿಂಗಳ ನಾಟಕ ಸಂಘಟಿಸಲಾಗುತ್ತಿದ್ದು, ಈ ಸಲ ಹೊಸ ಕಥೆ, ಹೊಸ ನಿರ್ದೇಶಕರಿಗೆ ಆದ್ಯತೆಯನ್ನು ನೀಡಲಾಗುವುದು. ಹವ್ಯಾಸಿ ಕಲಾ ತಂಡಗಳೂ ವೃತ್ತಿ ರಂಗಭೂಮಿ ನಾಟಕಗಳನ್ನು ಬಳಸಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಹೊಸಬರಿಗೆ, ಹೊಸ ತಲೆಮಾರಿನವರಿಗೆ ಅವಕಾಶ ನೀಡುವುದು ತಮ್ಮ ಉದ್ದೇಶ. ಜಿಲ್ಲಾ ರಂಗಯಾತ್ರೆಗಾಗಿ ಅಕಾಡೆಮಿ 3 ಲಕ್ಷ ಖರ್ಚು ಮಾಡುತ್ತಿದ್ದು, ಅದನ್ನು ಸಮರ್ಪಕವಾಗಿ ಬಳಸಲಾಗುತ್ತಿದೆ ಎಂದು ಅವರು ಹೇಳಿದರು.
ಮಕ್ಕಳ ನಾಟಕೋತ್ಸವ:  ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಅಥವಾ ಕಲಾಗ್ರಾಮದಲ್ಲಿ ಮಕ್ಕಳ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ. ಪ್ರತಿ ನಾಟಕಕ್ಕೆ 30 ಸಾವಿರ ಪ್ರೋತ್ಸಾಹಧನ ನೀಡುತ್ತಿರುವ ಹಿನ್ನೆಲೆಯಲ್ಲಿ ಕೆಲವರು ನೆಪ ಮಾತ್ರಕ್ಕೆ 3- 4 ಮಕ್ಕಳನ್ನು ಕರೆದೊಯ್ದು ನಾಟಕ ಆಡುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ 8- 10 ಮಕ್ಕಳನ್ನು ಒಳಗೊಂಡ ನಾಟಕ ಕನಿಷ್ಠ ಒಂದೂವರೆ ಗಂಟೆಯ ಕಾಲ ಪ್ರದರ್ಶಿಸಬೇಕು. 10ನೇ ತರಗತಿ ಒಳಗಿನ ಮಕ್ಕಳು ನಾಟಕದಲ್ಲಿ ಅಭಿನಯಿಸಲು ಅವಕಾಶವಿದ್ದು, ಜಿಲ್ಲೆಯ ಪ್ರತಿಭೆಗಳು ಈ ಅವಕಾಶ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ವರನಟ ಡಾ. ರಾಜಕುಮಾರ್ ಸ್ಮರಣಾರ್ಥ ಕೊಳ್ಳೆಗಾಲದಲ್ಲಿ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ನಾಟಕ ಅಕಾಡೆಮಿ ವತಿಯಿಂದ 3 ದಿನಗಳ ನಾಟಕೋತ್ಸವ ನಟ ಸಾರ್ವಭೌಮನೆ ಮತ್ತೆ ಹುಟ್ಟಿ ಬಾ ಸಂಘಟಿಸಲಾಗುವುದು. ಈಗಾಗಲೇ ಸಿದ್ಧತೆ ನಡೆಸಲಾಗಿದೆ. ದಾವಣಗೆರೆಯಲ್ಲಿ ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಜೂನ್ ಅಂತ್ಯದಲ್ಲಿ ನಡೆಸಲಿದ್ದೇವೆ.
3 ಸಾವಿರ ಅರ್ಜಿ ಬಾಕಿ: ಗ್ರಾಮಾಂತರದಲ್ಲಿ ನಾಟಕಗಳಿಗೆ ಸೀನರಿ ಪೂರೈಸುವವರಿಗೆ 25 ಸಾವಿರ ಪ್ರೋತ್ಸಾಹಧನ ಅಕಾಡೆಮಿ ನೀಡಲಿದೆ. ಸರ್ಕಾರದ ಬಳಿ ಮಾಸಾಶನ ಕೋರಿ ಸಲ್ಲಿಸಿರುವ ಸುಮಾರು 3 ಸಾವಿರಕ್ಕೂ ಹೆಚ್ಚು ಅರ್ಜಿ ಬಾಕಿ ಇವೆ.
ಕಳೆದ ನಾಲ್ಕು ವರ್ಷದಿಂದಲೂ ಹೊಸದಾಗಿ ಮಾಸಾಶನ ಮಂಜೂರು ಮಾಡಿಲ್ಲ. ಜಿಲ್ಲೆಯ 85- 86 ಜನರಿಗೆ ಈವರೆಗೆ ಮಾಸಾಶನ ಬಾಕಿ ಇದೆ. ಸಚಿವರ ಮೇಲೆ ಒತ್ತಡ ಹೇರಿ, ಮಾಸಾಶನ ಮಂಜೂರು ಮಾಡಿಸಲು ಶ್ರಮಿಸುತ್ತೇವೆ ಎಂದು ಅವರು ಹೇಳಿದರು.
ಅಕಾಡೆಮಿಗೆ ಹಾಲಿ ಅಧ್ಯಕ್ಷರಾಗಿ ಮಾಲತಿ ಸುಧೀರ್ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಒಂದು ವೇಳೆ ಅಕಾಡೆಮಿ ಅಧ್ಯಕ್ಷ ಸ್ಥಾನ ತೆರವಾದಲ್ಲಿ ನಾನೂ ಒಬ್ಬ ಆಕಾಂಕ್ಷಿಯಾಗಿ ಪ್ರಯತ್ನಿಸುತ್ತೇನೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement