ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಟ್ರೆಂಚ್ ಸ್ಥಗಿತಗೊಳಿಸುವಂತೆ ಒತ್ತಾಯ

Rashmi Kasaragodu
Updated On : 23 May 2013, 10:58 am

ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ  ಮೇ 22
ಕೃಷಿ ಜಮೀನಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಅತಿಕ್ರಮ ಪ್ರವೇಶ ಮಾಡಿ ಗಿಡ ನೆಡಲು ಟ್ರಂಚ್ ಹೊಡೆಯುತ್ತಿದ್ದು, ಇದನ್ನು ಕೂಡಲೇ ಸ್ಥಗಿತಗೊಳಿಸುವಂತೆ ನಿರ್ದೇಶನ ನೀಡುವಂತೆ ಭದ್ರಾವತಿ ತಾಲೂಕಿನ ಮಲ್ಲಾಪುರ ಸುತ್ತಮುತ್ತಲಿನ ಬಗರ್‌ಹುಕುಂ ಸಾಗುವಳಿದಾರರು ಬುಧವಾರ ನಗರದ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ ರೈತರು, ನಮ್ಮ ಮನವಿಗೆ ಸ್ಪಂದಿಸುವಂತೆ ಡಿಸಿಯವರನ್ನು ಕೋರಿದರು.
ಸಕ್ರಮ ಮಾಡಿದ್ದಾರೆ: ಮಲ್ಲಾಪುರ ಗ್ರಾಮದ ಸರ್ವೆ ನಂಬರ್ 87ರಲ್ಲಿ ಹಲವು ದಶಕಗಳಿಂದ ರೈತರು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಕಾನೂನುಬದ್ಧವಾಗಿ ಖಾತೆ ಬದಲಾವಣೆ ಮಾಡಿಕೊಳ್ಳಲಾಗಿದೆ. ತಹಸೀಲ್ದಾರ್ ಆದೇಶದಂತೆ 1994ರಲ್ಲಿಯೇ ಬಗರ್‌ಹುಕುಂ ಸಾಗುವಳಿಯನ್ನು ತಹಸೀಲ್ದಾರ್ ಸಕ್ರಮ ಮಾಡಿದ್ದಾರೆ ಎಂದು ಮನವಿಯಲ್ಲಿ ರೈತರು ವಿವರಿಸಿದ್ದಾರೆ.
ಹಾಲಿ ಈ ಭೂಮಿಯಲ್ಲಿ ಅಡಕೆ, ತೆಂಗು, ಮಾವು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಕೃಷಿಯೇ ಇಲ್ಲಿನವರಿಗೆ ಜೀವನೋಪಾಯವಾಗಿದೆ. ಈ ಜಮೀನನಲ್ಲಿಯೇ ಆಶ್ರಯ ಯೋಜನೆಯಡಿ ಮಂಜೂರು ಮಾಡಲ್ಪಟ್ಟ ನಿವೇಶನ ಮತ್ತು ಮನೆಗಳು ಕೂಡ ಇವೆ. ಆದರೆ ಅರಣ್ಯ ಇಲಾಖೆಯವರು ಈ ಜಾಗವೂ ಅರಣ್ಯ ಭೂಮಿಯಾಗಿದ್ದು ತೆರವು ಮಾಡುವಂತೆ ಸೂಚಿಸುತ್ತಿದ್ದಾರೆ.
ಪ್ರಶ್ನಿಸಿದರೆ ದೌರ್ಜನ್ಯ: ಕಳೆದ ಕೆಲವು ದಿನಗಳಿಂದ ಈ ಜಮೀನಿನಲ್ಲಿ ಗಿಡಗಳನ್ನು ನೆಡಲು ಟ್ರಂಚ್ ಹೊಡೆಯುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ತಮ್ಮ ಮೇಲೆಯೇ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ರೈತರು ದೂರಿದರು.
ಅರಣ್ಯ ಇಲಾಖೆಯ ಸಿಬ್ಬಂದಿ ಟ್ರಂಚ್ ಹೊಡೆಯುವ ಮೂಲಕ ಜಮೀನುಗಳಲ್ಲಿ ಕಷ್ಟಪಟ್ಟು ಬೆಳೆದಿರುವ ಬೆಳೆ ನಾಶ ಮಾಡಲು ಮುಂದಾಗುತ್ತಿದ್ದಾರೆ. ಅರಣ್ಯ ಇಲಾಖೆಯವರ ದೌರ್ಜನ್ಯದಿಂದ ಆತಂಕಕ್ಕೀಡಾಗಿದ್ದೇವೆ ಎಂದು ರೈತರು ಮನವಿಯಲ್ಲಿ ಹೇಳಿಕೊಂಡಿದ್ದಾರೆ.
ಈ ಕೂಡಲೇ ಜಿಲ್ಲಾಧಿಕಾರಿಯವರು ಖುದ್ದು ಆಗಮಿಸಿ ಸ್ಥಳ ಪರಿಶೀಲನೆ ನಡೆಸಬೇಕು. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದು, ಅರಣ್ಯ ಇಲಾಖೆಯವರು ಜಮೀನುಗಳಲ್ಲಿ ಟ್ರಂಚ್ ಹೊಡೆಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ತಮ್ಮ ನೆರವಿಗೆ ಧಾವಿಸಬೇಕು ಎಂದು ರೈತರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಒಕ್ಕಲೆಬ್ಬಿಸಬೇಡಿ: ಇದೇ ಸಂದರ್ಭದಲ್ಲಿ ಶಾಸಕಿ ಶಾರದಾ ಪೂರ್‌ಯನಾಯ್ಕ್ ಮಾತನಾಡಿ, ಈ ಸರ್ವೆ ನಂಬರ್‌ನ ಜಮೀನಿಗೆ ಸಂಬಂಧಿಸಿದಂತೆ ಹಿಂದೆ ಪಡೆಯುತ್ತಿದ್ದ ಪಹಣಿಯಲ್ಲಿ ಗೋಮಾಳ ಎಂದು ಬರುತ್ತಿದ್ದು, ಇದೀಗ ಇಂಡೀಕರಣ ಪ್ರಕ್ರಿಯೆ ಆರಂಭವಾದ ನಂತರ ಅರಣ್ಯ ಇಲಾಖೆಯ ಜಾಗ ಎಂದು ಬರುತ್ತಿದೆ. ಈ ಮೂಲಕ ರೈತರಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಇಂಡೀಕರಣದ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸುವುದಾಗಿ ತಿಳಿಸಿದರು.
ಮನವಿ ಅರ್ಪಿಸುವ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಆಯನೂರು ಶಿವಾನಾಯ್ಕ್, ಮಹೇಶ್, ಬಾಳೋಜಿ, ನಾಗರಾಜ್, ಶೇಖರಪ್ಪ, ದುರ್ಗಮ್ಮ, ಶೇಖ್ ಅಹ್ಮದ್ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement