ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶೀಘ್ರದಲ್ಲೇ 3,300 ಶಿಕ್ಷಕರ ನೇಮಕಾತಿ

Rashmi Kasaragodu
Updated On : 23 May 2013, 11:01 am

ಕಪ್ರವಾರ್ತೆ, ತೀರ್ಥಹಳ್ಳಿ, ಮೇ22
ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ 16 ಸಾವಿರ ಶಿಕ್ಷಕರ ಕೊರತೆ ಇದೆ. ಕೊರತೆ ನೀಗಿಸಲು ಸದ್ಯಕ್ಕೆ 3,300 ಶಿಕ್ಷಕರ ನೇಮಕಾತಿ ಮಾಡಲು ತೀರ್ಮಾನಿಸಲಾಗಿದೆ ಎಂದು ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.   
 ಹೈದರಾಬಾದ್ ಕರ್ನಾಟಕದಲ್ಲಿ ಜಾರಿಗೆ ಬಂದಿರುವ 371ನೇ ವಿಧಿಯಿಂದಾಗಿ  ಹಿಂದಿನ ಸರ್ಕಾರ ಮಾಡಿದ್ದ ನೇಮಕಾತಿ ನಿರ್ಧಾರವನ್ನು ತಡೆಹಿಡಿಯಲಾಗಿತ್ತು.    ಸುಮಾರು 4500 ಶಿಕ್ಷಕರ ನೇಮಕಾತಿ ನೆನೆಗುದಿಗೆ ಬಿದ್ದಿತ್ತು. ಈಗ ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ಹೊರತುಪಡಿಸಿ ಸದ್ಯಕ್ಕೆ 3300 ಶಿಕ್ಷಕರ ನೇಮಕಾತಿ ಮಾಡಲು  ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ಗುತ್ತಿಗೆ ಶಿಕ್ಷಕರ ಮುಂದುವರಿಕೆ: ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ  ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಆದಕಾರಣ  ಈಗಾಗಲೇ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿರುವ ಶಿಕ್ಷಕರ ಸೇವೆಯನ್ನು ಮುಂದುವರಿಸುವ ಬಗ್ಗೆ ತೀಮಾನಿಸಬೇಕಾಗಿದೆ. ಮುಂಬರುವ ಶೈಕ್ಷಣಿಕ ಸಾಲಿಗೆ ಪಠ್ಯಪುಸ್ತಕ, ಸಮವಸ್ತ್ರ, ಸೈಕಲ್ ವಿತರಣೆ ಮೊದಲಾದ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿದೆ. ಬೆಳಗಾಂ ವಿಭಾಗವನ್ನು ಇದರಿಂದ ಹೊರತುಪಡಿಸಲಾಗಿದೆ ಎಂದು ಹೇಳಿದರು.  
ಜಿಲ್ಲಾವಾರು ಸಮೀಕ್ಷೆ: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಜಿಲ್ಲಾವಾರು ಸಮೀಕ್ಷೆ ನೆಡೆಸಲಾಗುವುದು. ಕಟ್ಟಡ, ಸಾಮಗ್ರಿ, ನೀರಿನ ವ್ಯವಸ್ಥೆ ವಿವರ ಪಡೆದು  ಸರ್ವ ಶಿಕ್ಷಣ ಅಭಿಯಾನದ ಅಡಿ  ಮುಂದಿನ ಜೂನ್ ಒಳಗೆ ಜಾರಿಗೊಳಿಸಲಾಗುವುದು. ಇದಕ್ಕೆ ಕೇಂದ್ರದ ನೆರವನ್ನೂ ಪಡೆಯಲಾಗುವುದು. ದಾನಿಗಳ ನೆರವನ್ನೂ ಪಡೆಯಲು ಚಿಂತಿಸಲಾಗುತ್ತಿದೆ ಎಂದು ಹೇಳಿದರು.   
ಉ.ಕ.ಶಾಲೆಗಳ ಸ್ಥಿತಿ: ಉತ್ತರ ಕರ್ನಾಟಕದ ಕೆಲವೆಡೆ ಸರ್ಕಾರಿ ಶಾಲೆಗಳ ಸ್ಥಿತಿ ಗಂಭೀರವಾಗಿದೆ. ತಡಿಕೆ ಕಟ್ಟಿ ಶಾಲೆಗಳನ್ನು ನೆಡೆಸುತ್ತಿರುವ ವರದಿ ರಾಯಚೂರು ಜಿಲ್ಲೆಯಲ್ಲಿದೆ. ಅಧಿಕಾರಿಗಳು ಈ ಪ್ರದೇಶಗಳಲ್ಲಿ  ತುರ್ತು ಕ್ರಮ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳ ಜೊತೆ 30 ಜಿಲ್ಲೆಗಳಿಗೂ ಭೇಟಿ ನಡಿ ಅಧ್ಯಯನ ಮಾಡಿ, ಸಮಸ್ಯೆ ಇರುವಲ್ಲಿಯೇ ಸಭೆ ನೆಡೆಸಿ, ಸ್ಥಳದಲ್ಲೇ ತೀರ್ಮಾನ ತೆಗೆದುಕೊಳ್ಳು ತಮ್ಮ ನಿರ್ಧಾರದ ಬಗ್ಗೆ ತಿಳಿಸಿದರು.    
 ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ನ್ಯೂನತೆಗಳು ಇವೆ. ಒಮ್ಮೆಲೇ ಇವುಗಳನ್ನು ಸರಿಪಡಿಸುವುದು ಕಷ್ಟ. ಇವುಗಳಿಗೆ ಗುಣಾತ್ಮಕ ಪರಿಹಾರ ಕಂಡುಕೊಳ್ಳುವ ಸಲುವಾಗಿ ಮಾಜಿ ಶಿಕ್ಷಣ ಸಚಿವರು, ತಜ್ಞರು, ಸಾಹಿತಿಗಳ ಸಲಹೆ ಪಡೆಯಲಾಗುವುದು ಎಂದು ಹೇಳಿದರು.     
 ಆಂಗ್ಲ ಭಾಷಾ ಮಾಧ್ಯಮ: ಆಂಗ್ಲ ಭಾಷಾ ಮಾಧ್ಯಮದ ಬಗ್ಗೆ ಪೋಷಕರಲ್ಲಿ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ.  ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹಿನ್ನಡೆಯಾಗುತ್ತಿದೆ.  ಪ್ರಾಯೋಗಿಕವಾಗಿ  ಗ್ರಾಮ ಪಂಚಾಯ್ತಿ ಕೇಂದ್ರಗಳಲ್ಲಿ  ಖಾಸಗಿ ಶಿಕ್ಷಣ ಸಂಸ್ಥೆಯವರಂತೆ ಎಲ್ಲಾ ಸೌಲಭ್ಯ ಒದಗಿಸಿ  ಶಾಲೆ ನೆಡೆಸುವ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement