ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಾಲಕನ ಜೀವ ತೆಗೆದ ಲಾರಿ: 6 ಲಾರಿಗೆ ಬೆಂಕಿ

Vishwanath S
Updated On : 24 May 2013, 1:16 am

ಕ.ಪ್ರ. ವಾರ್ತೆ ,   ಶಿವಮೊಗ್ಗ ,   ಮೇ 23
ತೀರ್ಥಹಳ್ಳಿ ರಸ್ತೆಯಲ್ಲಿ ಮರಳು ಲಾರಿಗಳ ಓಡಾಟದ ಅಬ್ಬರಕ್ಕೆ ಮತ್ತೊಂದು ಜೀವ ಬಲಿಯಾಗಿದೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಆರು ಲಾರಿಗಳಿಗೆ ಬೆಂಕಿ ಇಟ್ಟು, 15ಕ್ಕೂ ಹೆಚ್ಚು ಲಾರಿಗಳಿಗೆ ಹಾನಿ ಮಾಡಿರುವ ಪ್ರಸಂಗ ಗುರುವಾರ ರಾತ್ರಿ ಗಾಜನೂರು ಬಳಿ ನಡೆದಿದೆ.
ತೀರ್ಥಹಳ್ಳಿ ರಸ್ತೆಯಲ್ಲಿ ಅತಿ ವೇಗದಲ್ಲಿ ಚಲಿಸುತ್ತಿದ್ದ ಮರಳು ಲಾರಿಯೊಂದು, ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿ ಸಾಗುತ್ತಿದ್ದ ಓರ್ವ  ಮೃತಪಟ್ಟಿದ್ದಾನೆ, ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು ಅಪಾಯದಿಂದ  ಪಾರಾಗಿದ್ದಾರೆ. ರಿಜ್ವಾನ್ (13) ಮೃತಪಟ್ಟವರಾಗಿದ್ದು, ಇವರ ತಂದೆ ಹಮೀದ್ ಹಾಗೂ ತಾಯಿಗೆ ಗಂಭೀರ ಗಾಯಗಳಾಗಿದೆ.
ಈ ನಡುವೆ ಅಪಘಾತ ಮಾಡಿದ ಲಾರಿಚಾಲಕ ಲಾರಿಯೊಂದಿಗೆ ಪರಾರಿಯಾಗಿದ್ದಾನೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದರು. ಜೊತೆಗೆ 15ಕ್ಕೂ ಹೆಚ್ಚು ಲಾರಿಗಳನ್ನು ತಡೆದು ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.
ಲಾರಿಗಳು ಧ್ವಂಸ: ಈ ಸಂದರ್ಭದಲ್ಲಿ ಪರಿಸ್ಥಿತಿ ಕೈಮೀರಿ, ಆರಕ್ಕೂ ಅಧಿಕ ಲಾರಿಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೆ ಕೆಲ ಲಾರಿಗಳನ್ನ ಧ್ವಂಸಗೊಳಿಸಿದ್ದಾರೆ. ಒಟ್ಟಾರೆ ಮಂಡಗದ್ದೆಯಿಂದ ಶಿವಮೊಗ್ಗ ಕಡೆ ಸಾಗುತ್ತಿದ್ದ ಹದಿನೆಂಟು ಲಾರಿಗಳು ಗ್ರಾಮಸ್ಥರ ಆಕ್ರೋಶಕ್ಕೆ ಬಲಿಯಾದವು.
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸ್ ಹಿರಿಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ, ಆಕ್ರೋಶ ಭರಿತ ಗ್ರಾಮಸ್ಥರ ಮನವೊಲಿಸುವಲ್ಲಿ ಸಫಲರಾದರು. ಹಾಗೆಯೇ ಎರಡು ತಾಸಿನಿಂದ ಅಸ್ತವ್ಯಸ್ತವಾಗಿದ್ದ ತೀರ್ಥಹಳ್ಳಿ- ಶಿವಮೊಗ್ಗ ರಸ್ತೆ ಸಂಚಾರವನ್ನು  ಸರಿಪಡಿಸಿದರು.
ಪರಿಸ್ಥಿತಿ ಗಂಭೀರ: ಗಾಜನೂರಿನಲ್ಲಿ ವಾರಕ್ಕೆ ಇಂತಹದೊಂದು ಅಪಘಾತ ಆಗುತ್ತಲೆ ಇರುತ್ತದೆ, ಸಾಲದಕ್ಕೆ ಇದುವರೆಗೂ ನಡೆದ ಬಹುತೇಕ ಅಪಘಾತಗಳು ಮರಳು ಲಾರಿಯಿಂದಲೆ ಆಗಿವೆ. ಮೇಲಾಗಿ ಅಪಘಾತದಂತಹ ಘಟನೆಗಳಲ್ಲಿ ಮೃತಪಟ್ಟ ಕುಟುಂಬಗಳಿಗೂ, ಲಾರಿ ಮಾಲೀಕರ ನಿರ್ಲಕ್ಷ್ಯದಿಂದ ಪರಿಹಾರ ಸಿಗುತ್ತಿಲ್ಲ ಎಂಬುದು ಗ್ರಾಮಸ್ಥರ ಗಂಭೀರ ಆರೋಪ.
ಕನಿಷ್ಟ ಮಾನವೀಯತೆ ತೋರಿಸದ ಲಾರಿ ಚಾಲಕರು ಅಪಘಾತ ಸ್ಥಳದಲ್ಲಿ ನಿಲ್ಲದೆ ಬೇಕಾಬಿಟ್ಟಿಯಾಗಿ ಗಾಡಿಗಳನ್ನ ಓಡಿಸುತ್ತಾರೆ. ಇದರಿಂದ ಮೊದಲೇ ಬೇಸತ್ತಿರುವ ಗ್ರಾಮಸ್ಥರು, ಈ ಘಟನೆಯಿಂದ ಮತ್ತಷ್ಟು ಆಕ್ರೊಶಗೊಂಡರು ಎಂದು ಸ್ಥಳೀಯರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement