ವರದಿ ಸಲ್ಲಿಸುವ ಮುನ್ನ ರೈತರೊಂದಿಗೆ ಚರ್ಚಿಸಿ: ರೈತಸಂಘ
ಶಿವಮೊಗ್ಗ: ಗುಟ್ಕಾ ನಿಷೇಧದ ಸಂಬಂಧ ಸರ್ವೋಚ್ಛ ನ್ಯಾಯಾಲಯಕ್ಕೆ ಅನುಷ್ಠಾನ ವರದಿ ಸಲ್ಲಿಸುವ ಮೊದಲು ರಾಜ್ಯ ಸರ್ಕಾರವು ರಾಜ್ಯದ ಅಡಕೆ ಬೆಳೆಯುವ ಪ್ರದೇಶಗಳ ಚುನಾಯಿತ ಪ್ರತಿನಿಧಿಗಳು, ಅಡಕೆ ಬೆಳೆಗಾರರ ಸಮಾಲೋಚನಾ ಸಭೆ ಕರೆಯುವಂತೆ ಜಿಲ್ಲಾ ಅಡಕೆ ಬೆಳೆಗಾರರ ಸಂಘ ಒತ್ತಾಯಿಸಿದೆ.
ಈ ಸಭೆಯಲ್ಲಿ ಗುಟ್ಕಾ ನಿಷೇಧದ ಪರಿಣಾಮಗಳನ್ನು ಅವಲೋಕಿಸಬೇಕು ಹಾಗೂ ಅಡಕೆ ಬೆಳೆಗಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಯೋಜನೆಯನ್ನು ಪ್ರಕಟಿಸಿ ನಂತರ ಸರ್ವೋಚ್ಛ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಸಂಘದ ಅಢಿಧ್ಯಕ್ಷ ಬಿ.ಎ. ರಮೇಶ್ ಹೆಗ್ಡೆ ಒತ್ತಾಯಿಸಿದ್ದಾರೆ.
ಸೆಂಟರ್ ಫಾರ್ ಪಬ್ಲಿಕ್ ಇನ್ಟ್ರಸ್ಟ್ ಲಿಟಿಗೇಷನ್ ಎಂಬ ಎನ್ಜಿಓ ಸಂಸ್ಥೆಯು ಗುಟ್ಕಾ ಹಾಗೂ ಪಾನ್ ಮಸಾಲಗಳ ಮಾರಾಟ ಹಾಗೂ ಉತ್ಪಾದನೆ ನಿಷೇಧ ಮಾಡುವ ಕುರಿತು ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲುವಾಗಿ ಅನುಷ್ಠಾನ ವರದಿ ನೀಡುವಂತೆ ದೇಶದ 25 ರಾಜ್ಯ ಸರ್ಕಾರ ಹಾಗೂ 5 ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಕಾರ್ಯದರ್ಶಿಗಳಿಗೆ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯವೂ ಸಹ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಡಕೆ ಬೆಳೆಗಾರರ ಸಭೆ ಕರೆಯುವುದು ಸೂಕ್ತ ಎಂದಿದ್ದಾರೆ.
ಗುಟ್ಕಾ ನಿಷೇಧದಿಂದ ಅಡಕೆ ಧಾರಣೆ ತೀವ್ರ ಕುಸಿಯುವ ಸಂಭವವಿದ್ದು, ನೂರಾರು ವರ್ಷಗಳಿಂದ ಅಡಕೆ ಬೆಳೆದು ಜೀವನ ಸಾಗಿಸುತ್ತಿರುವ ಲಕ್ಷಾಂತರ ಅಡಕೆ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಏಕಪಕ್ಷೀಯ ಅಥವಾ ದಿಢೀರ್ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಅವರು ಒತ್ತಾಯಿಸಿದ್ದಾರೆ.