ಅಧಿಕಾರಿ ದರ್ಪಕ್ಕೆ ಸೊಪ್ಪು ಹಾಕುವುದಿಲ್ಲ
ಭದ್ರಾವತಿ: ಅಧಿಕಾರಿಗಳಿಗೆ ತಾವು ಗೌರವ ಕೊಡುವುದಾಗಿ ತಿಳಿಸಿದ ಶಾಸಕ ಎಂ.ಜೆ. ಅಪ್ಪಾಜಿ ಅವರ ದರ್ಪಕ್ಕೆ ಎಂದಿಗೂ ಸೊಪ್ಪ ಹಾಕುವುದಿಲ್ಲ ಎಂದು ತಿಳಿಸಿದರು.
ಬದನೆಹಾಳ್ ಮತ್ತು ಬೆಳ್ಳಿಗೆರೆ ಗ್ರಾಮದ ಸರ್ವೆ ನಂ.35 ಮತ್ತು 7ರಲ್ಲಿ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸುವುದನ್ನು ತಡೆಯಲು ಗುರುವಾರ ಧರಣಿ ಕುಳಿತ ಅಪ್ಪಾಜಿಯವರು ಶುಕ್ರವಾರ ಭದ್ರಾವತಿ ತಾಲೂಕು ಜೆಡಿಎಸ್ ಮತ್ತು ರೈತಸಂಘ ಹಾಗೂ ಕಾರ್ಮಿಸ ಸಂಘಟನೆಗಳು ಏರ್ಪಡಿಸಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿದ್ದರು.
ಪ್ರತಿಭಟನಾ ಮೆರವಣಿಗೆಯು ತರೀಕೆರೆ ರಸ್ತೆಯ ಗಾಂಧಿ ವೃತ್ತದ ಬಳಿ ಪ್ರಾರಂಭವಾಗಿ ಮಾಧವಾಚಾರ್ ವೃತ್ತ, ಹಾಲಪ್ಪ ವೃತ್ತ, ಅಂಬೇಡ್ಕರ್ ವೃತ್ತಗಳ ಮೂಲಕ ಸಾಗಿ ಡಿ.ಎಫ್.ಒ ಕಚೇರಿ ತಲಪಿತು.
ದೂರವಾಣಿ ಸಂಪರ್ಕ: ಅರಣ್ಯ ಇಲಾಖೆ ಸಿಬ್ಬಂದಿ ಪ್ಲಾಂಟೇಶನ್ ಗಿಡ ನೆಡುವ ಕಾರ್ಯ ಪ್ರಾರಂಭಿಸುವ ವಿಷಯ ನನಗೆ ಗುರುವಾರ ಬೆಳಗ್ಗೆ 7.30 ಗಂಟೆಗೆ ತಿಳಿದ ತಕ್ಷಣ ಡಿ.ಎಫ್.ಒ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದೆ. ಅದು ಸಾಧ್ಯವಾಗದಾಗ ಅವರ ಕಚೇರಿಗೆ ಹೋದೆ. ಅಲ್ಲಿಯೂ ಅವರನ್ನು ಭೇಟಿಮಾಡಲು ಸಾಧ್ಯವಾಗದಾಗ ಅವರು ಬಹುಷಃ ಬದನೇಹಾಳ್ ಗ್ರಾಮಕ್ಕೆ ಹೋಗಿರಬೇಕೆಂದು ನಾನು ಸಹ ಅಲ್ಲಿಗೆ ತೆರಳಿದೆ.
ಅಲ್ಲಿ ಬಂದೂಕು ಹಿಡಿದು ಗ್ರಾಮಸ್ಥರನ್ನು ಬೆದರಿಸಿ ಸಸಿನೆಡುವ ಕಾರ್ಯವನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಾಡುತ್ತಿದ್ದರು. ಅಲ್ಲಿದ್ದ ಎ.ಸಿ.ಎಫ್ ಅವರನ್ನು ಕೇಳಿದಾಗ ತಮಗೆ ಮೇಲಧಿಕಾರಿಗಳ ಆದೇಶವಿದೆ ಎಂದು ತಿಳಿಸಿದರು. ಬೇರೆ ದಾರಿ ಕಾಣದೆ ಪ್ರತಿಭಟನೆಯ ಮಾರ್ಗ ಹಿಡಿಯಬೇಕಾಯಿತೆಂದು ಅಪ್ಪಾಜಿ ಹೇಳಿದರು.
ಸಂಘಟಿತ ಹೋರಾಟ ಅಗತ್ಯ: ರೈತಸಂಘದ ಪ್ರಧಾನ ಕಾರ್ಯದರ್ಶಿ ಕೆ.ಟಿ. ಗಂಗಾಧರ ಮಾತನಾಡಿ, ಇದು ರಾಜ್ಯದ ಸಮಸ್ಯೆಯಷ್ಟೇ ಆಗಿರದೆ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಎಲ್ಲಾ ರಾಜ್ಯ ಸರ್ಕಾರಗಳೂ ಬಗರ್ ಹುಕುಂ ಜಮೀನನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದು, ರೈತ ಸಮುದಾಯ ಸಂಘಟಿತವಾಗಿ ಹೋರಾಡದಿದ್ದರೆ ಇದಕ್ಕೆ ಪರಿಹಾರ ದೊರಕದು ಎಂದು ತಿಳಿಸಿದರು.
ರೈತರ ಸಮಸ್ಯೆಗೆ ಸ್ಪಂದಿಸಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲು ಬಂದಿದ್ದ ಕಾರ್ಮಿಕ ಮುಖಂಡರು ಮತ್ತು ವಕೀಲರ ಸಮುದಾಯದ ಕಳಕಳಿಯನ್ನು ಅವರು ಶ್ಲಾಘಿಸಿದರು.
ಪರಿಹಾರದ ಭರವಸೆ: ನಂತರ ಸ್ಥಳಕ್ಕೆ ಭೇಟಿನೀಡಿದ ಡಿ.ಎಫ್.ಒ ಕೆ.ಎಸ್. ಪಾಟೀಲ್ ಭಾನುವಾರ ತಾವು ಶಾಸಕ ಎಂ.ಜೆ. ಅಪ್ಪಾಜಿ, ಶಾಸಕಿ ಶಾರದಾ ಪೂರ್ಯನಾಯ್ಕ ಮತ್ತು ರೈತ ಮುಖಂಡ ಕೆ.ಟಿ. ಗಂಗಾಧರ ಅವರೊಂದಿಗೆ ಎರಡನೇ ಸುತ್ತಿನ ಮಾತುಕತೆ ನಡೆಸಿ ಅದರ ನಡವಳಿಕೆಯನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಕಳಿಸಿ ಅವರು ನೀಡುವ ನಿರ್ದೇಶನದಂತೆ ನಡೆದುಕೊಳ್ಳುವ ಆಶ್ವಾಸನೆ ನೀಡಿದರು.
ಅಲ್ಲಿಯವರೆಗೆ ಬದನೆಹಾಳ್ ಬಳ್ಳಿಗೆರೆ ಗ್ರಾಮಗಳಲ್ಲಿ ಪ್ಲಾಂಟೇಶನ್ ಕಾಮಗಾರಿಯನ್ನು ನಿಲ್ಲಿಸುವಂತೆ ಹಾಗೂ ತಾವೂ ಸಹ ನಡವಳಿಕೆಯ ನಕಲನ್ನು ಮುಖ್ಯಮಂತ್ರಿಗಳಿಗೆ ತೋರಿಸಿ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಶಾಸಕ ಎಂ.ಜೆ. ಅಪ್ಪಾಜಿ ತಿಳಿಸಿದರು.
ಪ್ರತಿಭಟನಾ ಮೆರವಣಿಗೆಯ ನಂತರ ಡಿ.ಎಫ್.ಒ ಕಚೇರಿ ಬಳಿ ಪ್ರತಿಭಟನಕಾರರು ರಸ್ತೆತಡೆ ಚಳವಳಿ ನಡೆಸಿದರು. ಪ್ರತಿಭಟನಕಾರರ ಬಹಿರಂಗಸಭೆ ಮುಗಿಯುವವರೆಗೆ ಬಿ.ಎಚ್.ರಸ್ತೆಯಲ್ಲಿ ವಾಹಸ ಸಂಚಾರ ಸ್ಥಗಿತಗೊಂಡಿತ್ತು. ಪ್ರತಿಭಟನಾ ಮೆರವಣಿಗೆಯಲ್ಲಿ ಯಶವಂತರಾವ್ ಘೋರ್ಪಡೆ, ಜಿಪಂ ಸದಸ್ಯ ಎಸ್. ಕುಮಾರ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ಅನೇಕ ನಗರಸಭಾ ಸದಸ್ಯರುಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಾಗರಿಕರು ಭಾಗವಹಿಸಿದ್ದರು.