ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಎಂಪಿಎಂ ಅಕ್ರಮ: 13 ಮಂದಿ ವಿರುದ್ಧ ದೂರು

Lingaraj Badiger
Updated On : 25 May 2013, 11:10 am

ಶಿವಮೊಗ್ಗ: ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ(ಎಂಪಿಎಂ)ಯ ನಷ್ಟಕ್ಕೆ ಹಾಗೂ ಈ ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು 13 ಮಂದಿ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.
ಈ 13 ಜನರ ಪಟ್ಟಿಯಲ್ಲಿ ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಮುಖಂಡ, ಮಾಜಿ ಶಾಸಕ ಮತ್ತು ಎಂಪಿಎಂ ಮಾಜಿ ಅಧ್ಯಕ್ಷ ಆರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಎಂಪಿಎಂನ ನಾಲ್ವರು ಐಎಎಸ್ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿ ಸೇರಿದ್ದಾರೆ.
ಕಾರ್ಖಾನೆ ಸಿಬ್ಬಂದಿ ಶಿವಮೂರ್ತಿ ಎಂಬುವರು ಎಂಪಿಎಂ ಕಾರ್ಖಾನೆಯಲ್ಲಿ ಉಂಟಾದ ನಷ್ಟ ಹಾಗೂ ಅಕ್ರಮದ ತನಿಖೆ ನಡೆಸುವಂತೆ ಆರಗ ಜ್ಞಾನೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಅಧಿಕಾರಿಗಳ ವಿರುದ್ಧ ಜಿಲ್ಲಾ ವಿಶೇಷ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ದಾಖಲಿಸಿದ್ದರು.
30 ಕೋಟಿ ಹಣ ಏನಾಯ್ತು? ಆರಗ ಜ್ಞಾನೇಂದ್ರ ಅವರು ಅಧ್ಯಕ್ಷರಾದಾಗ ಕಾರ್ಖಾನೆ 32 ಕೋಟಿ ನಷ್ಟದಲ್ಲಿತ್ತು. ಆದರೆ ವಿಧಾನಸಭೆ ಚುನಾವಣೆಗೆ ಸ್ವಲ್ಪ ಮುಂಚೆ ರಾಜಿನಾಮೆ ನೀಡುವಾಗ ಸುಮಾರು 300 ಕೋಟಿವರೆಗೆ ನಷ್ಟ ಹೆಚ್ಚಾಗಿತ್ತು. ರಾಜ್ಯ ಸರ್ಕಾರವು ಕಾರ್ಖಾನೆ ಅಭಿವೃದ್ಧಿಗೆ 100 ಕೋಟಿ ಯಂತ್ರೋಪಕರಣಗಳ ಖರೀದಿಗೆ 30 ಕೋಟಿ ಹಣ ನೀಡಿತ್ತು. ಈ ಹಣ ದುರುಪಯೋಗವಾಗಿದೆ ಎಂದು ದೂರು ಸಲ್ಲಿಸಲಾಗಿತ್ತು.
ಅಲ್ಲದೇ, ಶಿಕ್ಷಣ ಇಲಾಖೆಯು ಎಂಪಿಎಂನಿಂದಲೇ ನೋಟ್ ಬುಕ್ ಖರೀದಿಸಬೇಕಿತ್ತು. 2010ರಲ್ಲಿ 9 ಕೋಟಿ ಮೌಲ್ಯದ ನೋಟ್‌ಬುಕ್ ಖರೀದಿಸಿದ್ದ ಶಿಕ್ಷಣ ಇಲಾಖೆಯು ನಂತರ ಪುಣೆ ಮೂಲದ ಖಾಸಗಿ ಕಂಪನಿಗೆ ಹೆಚ್ಚು ಹಣ ನೀಡಿ ಖರೀದಿಸಿದೆ. ಆದ್ದರಿಂದ ಹಿಂದಿನ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿರುದ್ಧವೂ ತನಿಖೆ ನಡೆಸುವಂತೆ ಈ ದೂರಿನಲ್ಲಿ ಕೋರಲಾಗಿತ್ತು.
ಹಿಂದಿನ ನಿರ್ದೇಶಕರ ವಿರುದ್ಧ: ಎಂಪಿಎಂ ಆಡಳಿತ ನಿರ್ದೇಶಕರು, ಹಿಂದಿನ ನಿರ್ದೇಶಕರಾದ ಅನಿಲ್ ಕುಮಾರ್, ಯೋಗೇಂದ್ರ ಕುಮಾರ್, ಸುಧೀರ್ ಕಾಮತ್ ಸೇರಿದಂತೆ 10 ಮಂದಿ ಅಧಿಕಾರಿಗಳ ವಿರುದ್ಧವೂ ತನಿಖೆಗೆ ಶಿವಮೂರ್ತಿ ಕೋರಿದ್ದರು.
ಪ್ರಕರಣದ ವಿಚಾರಣೆಗೆ ಅಂಗೀಕರಿಸಿದ ವಿಶೇಷ ಲೋಕಾಯುಕ್ತ ನ್ಯಾಯಾಲಯ ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. ಅದರಂತೆ ಲೋಕಾಯುಕ್ತ ಪೊಲೀಸರು 13 ಜನರ ವಿರುದ್ಧ ಮೇ 22ರಂದು ಎಫ್‌ಐಆರ್ ದಾಖಲಿಸಿ ವಿಚಾರಣೆ ಆರಂಭಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement