ಕೊನೆಗೂ ಶಿವಮೊಗ್ಗಕ್ಕೆ ಆಗಮಿಸಿದ ಬಿಎಸ್‌ವೈ
ಶಿವಮೊಗ್ಗ: ವಿಧಾನಸಭೆ ಚುನಾವಣೆಯಲ್ಲಿ ತಮ್ಮ ತವರೂರಲ್ಲಿಯೇ ಕೆಜೆಪಿ ಪಕ್ಷಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗದ ಹಿನ್ನೆಲೆಯಲ್ಲಿ ಮುನಿಸಿಕೊಂಡು ಶಿವಮೊಗ್ಗದೆಡೆಗೆ ಮುಖ ಹಾಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಂತೂ ಶುಕ್ರವಾರ ಕೊನೆಗೂ ತವರಿನಲ್ಲಿ ಮುಖ ತೋರಿಸಿದ್ದಾರೆ.
ನಗರದ ಆದಿಚುಂಚನಗಿರಿ ಶಾಖಾ ಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಯಡಿಯೂರಪ್ಪ ಪಾಲ್ಗೊಂಡಿದ್ದರು. ನೂತನ ವಧುವರರಿಗೆ ಶುಭ ಹಾರೈಸಿ ಹಿಂದಿರುಗಿದರು. ಆದಿಚುಂಚನಗಿರಿ ನಿರ್ಮಾಲಾನಂದ ಸ್ವಾಮೀಜಿಗಳ ಜೊತೆಯಲ್ಲಿ ಕೆಲಕಾಲ ಮಾತುಕತೆ ನಡೆಸಿದ ಯಡಿಯೂರಪ್ಪ, ನೂತನ ಜೋಡಿಗಳೊಂದಿಗೆ ಪೋಟೊ ತೆಗೆಸಿಕೊಂಡರು. ಈ ವೇಳೆ ಅವರೊಂದಿಗೆ ಲೋಕಸಭಾ ಸದಸ್ಯ, ಪುತ್ರ ಬಿ.ವೈ. ರಾಘವೇಂದ್ರ ಹಾಗೂ ಕೆಜೆಪಿ ಮುಖಂಡರು ಉಪಸ್ಥಿತರಿದ್ದರು. ಈ ವೇಳೆ ಪತ್ರಕರ್ತತರು ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತನಾಡಿಸಲು ಯತ್ನಿಸಿದರಾದರೂ, ಅವರು ಮಾತ್ರ ಮಾತನಾಡುವ ಮೂಡ್‌ನಲ್ಲಿ ಇರಲಿಲ್ಲ.