ನಾಳೆ ವರ್ತಕರ ಸಂಘದ ಉದ್ಘಾಟನೆ
ಭದ್ರಾವತಿ: ಪಟ್ಟಣದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಭದ್ರಾವತಿ ನಗರ ವರ್ತಕರ ಸಂಘವನ್ನು ಮಂಗಳವಾರ ಸಂಜೆ 5 ಗಂಟೆಗೆ ಜೈನ್ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಶಾಸಕ ಎಂ.ಜೆ. ಅಪ್ಪಾಜಿ ಉದ್ಘಾಟನೆ ಮಾಡಲಿರುವರು. ತಹಸೀಲ್ದಾರ್ ಸಿದ್ದಮಲ್ಲಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಡಿ.ಆರ್. ವಿಶ್ವನಾಥ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಣಾಧಿಕಾರಿ ಎಂ.ಎಸ್. ಹಿಪ್ಪರಗಿ, ಕಾರ್ಮಿಕ ಇಲಾಖೆ ಅಧಿಕಾರಿ ಎಂ.ಪಿ. ವಿಶ್ವನಾಥ್ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಯ ಮಾಜಿ ಅಧ್ಯಕ್ಷ ಕೆ.ವಿ. ವಸಂತಕುಮಾರ್, ಬಿ.ಜೆ. ಮರಿಯಪ್ಪ ಆಗಮಿಸುವರು. ಎಚ್.ಎಸ್. ಗುರುರಾಜಾರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.
ಭದ್ರಾವತಿ ನಗರ ವರ್ತಕರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಎಸ್. ಗುರುರಾಜಾರಾವ್, ಉಪಾಧ್ಯಕ್ಷರಾಗಿ ಕೆ.ವಿ. ಹರೀಶ್ಬಾಬು, ಕಾರ್ಯದರ್ಶಿಯಾಗಿ ಡಿ.ಎನ್. ಅಶೋಕ, ಸಹಕಾರ್ಯದರ್ಶಿಗಳಾಗಿ ಸಿ.ಎನ್. ಗಿರೀಶ್ ಮತ್ತು ಭವರ್ಲಾಲ್, ಖಜಾಂಚಿಯಾಗಿ ವಾದಿರಾಜ್ ಅಡಿಗ ಹಾಗೂ ನಿರ್ದೇಶಕರಾಗಿ ಭರತ್ ಕುಮಾರ್ಪಾಲ್ರೇಚಾ, ಕೆ.ಎಚ್. ಶ್ರೀವತ್ಸ, ಬಿ.ಸಿ. ಲೋಕೇಶ್, ಪಿ. ವಿಶ್ವನಾಥ, ಬಿ.ಆರ್. ವೆಂಕಟೇಶಮೂರ್ತಿ, ಪಿ. ರಾಜ್ಕುಮಾರ್, ಇ. ಪ್ರಕಾಶ್ ಮತ್ತು ಮಹಮದ್ ಸಿರಾಜ್ ಆಯ್ಕೆಯಾಗಿದ್ದಾರೆ.
ಯುವಕ ಕಾಣೆ
ಬೆಂಗಳೂರು: ಭದ್ರಾವತಿಯಿಂದ ಶಿವಮೊಗ್ಗ ಎಕ್ಸ್ಪ್ರೆಸ್ ರೈಲಿನಲ್ಲಿ ಚಿಕ್ಕಪ್ಪನೊಂದಿಗೆ ಚೆನ್ನೈಗೆ ಹೊರಟಿದ್ದ 30 ವರ್ಷದ ಸೇಂಥಿಲ್ ಶುಕ್ರವಾರ ಸಂಜೆ ಯಶವಂತಪುರದ ರೇಲ್ವೆ ನಿಲ್ದಾಣದಿಂದ ನಾಪತ್ತೆಯಾಗಿದ್ದಾರೆ. ಇವರು ತಮಿಳು, ಇಂಗ್ಲಿಷ್ ಮಾತನಾಡುತ್ತಾರೆ. ಕನ್ನಡ ಅರ್ಥವಾಗುತ್ತದೆ. ಇವರ ಸುಳಿವು ಸಿಕ್ಕವರು 9916173101ಗೆ ಮಾಹಿತಿ ನೀಡಬಹುದು.
ವಂತಿಕೆ: 2 ಶಾಲೆಗೆ ನೋಟಿಸ್ ಜಾರಿ
ಚಿಕ್ಕಮಗಳೂರು: ಶಾಲೆಗಳಿಗೆ ಪ್ರವೇಶ ನೀಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪೋಷಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ದೂರಿನನ್ವಯ ನಗರದ ಎರಡು ಖಾಸಗಿ ಶಾಲೆಗಳಿಗೆ ಶನಿವಾರ ನೋಟಿಸ್ ಜಾರಿ ಮಾಡಲಾಗಿದೆ. ಇಲ್ಲಿನ ಸಾಯಿ ಏಂಜೆಲ್ಸ್ ಹಾಗೂ ಸೆಂಟ್ ಮೇರಿಸ್ ಶಾಲೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ಳಿಸಿದ್ದಾರೆ. ನಗರದ ಸಾಯಿ ಏಂಜೆಲ್ಸ್ ಹಾಗೂ ಸೆಂಟ್ ಮೇರಿಸ್ ಶಾಲೆಗಳು ಸೇರಿದಂತೆ ಇತರೆ ಶಾಲೆಗಳಲ್ಲಿ ಹೆಚ್ಚು ಡೊನೇಷನ್ ಪಡೆಯಲಾಗುತ್ತಿತ್ತು.