ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಿಜೆಪಿ ನಾಯಕರ ನಿರ್ಲಕ್ಷ್ಯದಿಂದ ಸೋಲು

Vishwanath S
Updated On : 26 May 2013, 2:44 am

ಕ.ಪ್ರ.ವಾರ್ತ್ಣೆ ಶಿವಮೊಗ್ಗ ಮೇ 25
ಬಿಜೆಪಿ ರಾಜ್ಯ ಉಸ್ತುವಾರಿ ವಹಿಸಿದ್ದ ಧಮೇಂದ್ರ ಪ್ರದಾನ್ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರಿಗೆ ಪಕ್ಷ ಬಿಡುವ ಮುನ್ನ ನನ್ನನ್ನು ಪಕ್ಷದ ರಾಜ್ಯಾಧ್ಯಕ್ಷನ್ನಾಗಿ ಮಾಡಿ, ಇಲ್ಲವಾದರೆ ಪಕ್ಷ ನೆಲಕಚ್ಚುತ್ತದೆ ಎಂದು ಸೂಕ್ಷ್ಮವಾಗಿ ತಿಳಿಸಿದ್ದೆ. ಆದರೆ, ಅವರು ನಿರ್ಲಕ್ಷ್ಯ ಮಾಡಿದ್ದರು. ಅದರ ಫಲವೇ ಬಿಜೆಪಿ ಇಂದು ಈ ಸ್ಥಿತಿ ತಲುಪಲು ಕಾರಣ ಎಂದು ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ನಗರದ ಸಂತ ಥಾಮಸ್ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕೆಜೆಪಿ ಬೂತ್‌ಮಟ್ಟದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಅವರು, ನಾನು ರಾಜ್ಯಾಧ್ಯಕ್ಷನಾದರೆ ವಿಧಾನಸಭೆ ಚುನಾವಣೆಗೆ ನಿಲ್ಲುವುದಿಲ್ಲ. ಬದಲಿಗೆ ಒಬ್ಬ ನಿಷ್ಠಾವಂತ ಕಾರ್ಯಕರ್ತರನಾಗಿ ಕೆಲಸ ಮಾಡುತ್ತೇನೆ. ಇಲ್ಲವಾದರೆ ನನ್ನ ಎದುರೇ ನಾನು ಕಟ್ಟಿಬೆಳೆಸಿದ ಪಕ್ಷ ಅವನತಿಯತ್ತ ಹೋಗುತ್ತದೆ. ಅದು ನನಗೆ ಇಷ್ಟವಿಲ್ಲ ಎಂದು ಪಕ್ಷದ ಕೇಂದ್ರ ಮುಖಂಡರಿಗೆ ತಿಳಿಸಿದ್ದೆ. ಆದರೆ, ನನ್ನ ಮಾತು ಕೇಳಲಿಲ್ಲ. ಆದರಿಂದ ಪಕ್ಷ ತೊರೆಯಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ನಿರೀಕ್ಷೆಗೂ ಮೀರಿ ಯಶಸ್ಸು: ಕೆಜೆಪಿ ಕೇವಲ ನಾಲ್ಕು ತಿಂಗಳಲ್ಲಿ ನಿರೀಕ್ಷೆಗೂ ಮೀರಿ ಸಾಧನೆ ಮಾಡಿದೆ. ಈ ಕಡಿಮೆ ಅವಧಿಯಲ್ಲೇ ಶೇ.10ರಷ್ಟು ಮತ ಪಡೆದು ಮಾನ್ಯತೆ ಪಡೆದ ಪಕ್ಷವಾಗಿ ಹೊರಹೊಮ್ಮಿದೆ. ಆದರೂ ಈ ಸಾಧನೆ ನನಗೆ ತೃಪ್ತಿ ತಂದಿಲ್ಲ. ಕೆಜೆಪಿಗೆ ರಾಜ್ಯ, ಜಿಲ್ಲೆಯ ಜನತೆ ತಮ್ಮ ಹೃದಯಲ್ಲಿ ಸ್ಥಾನ ನೀಡಿದ್ದಾರೆ. ಕೆಜೆಪಿ ಸ್ಥಾಪನೆಯಿಂದಾಗಿ 5ವರ್ಷಗಳ ಕಾಲ ಆಡಳಿತ ನಡೆಸಿದ್ದ ಪಕ್ಷವೊಂದು 110 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಳ್ಳುವಂತಾಗಿದೆ ಎಂದು ವಿಶ್ಲೇಷಿಸಿದರು.
ಮಾಜಿ ಪ್ರಧಾನಿ ನೇತೃತ್ವದ ಜೆಡಿಎಸ್ 109 ಸ್ಥಾನಗಲ್ಲಿ ಠೇವಣಿ ಕಳೆದುಕೊಂಡಿದೆ. ಅಲ್ಲದೇ, ಕಾಂಗ್ರೆಸ್‌ಗೆ ಬಹುಮತ ಸಿಕ್ಕಿರುವುದು ಪಕ್ಷದ ಸಾಧನೆಯಿಂದಲ್ಲ. ಬಿಜೆಪಿಯಿಂದ ಹೊರಬಂದ ನಾನು ಕೆಜೆಪಿ ಕಟ್ಟಿದ್ದರಿಂದ ಅವರಿಗೆ ಗೆಲುವು ಸಿಕ್ಕಿ ಅಧಿಕಾರಕ್ಕೆ ಬಂದಿದ್ದಾರಷ್ಟೆ ಎಂದರು.
ಒಳ ಸಂಚು: ಬಿಜೆಪಿಯಲ್ಲಿದ್ದಾಗ 5 ವರ್ಷ ಪೂರ್ಣಾವಾಗಿ ಮುಖ್ಯಮಂತ್ರಿಯಾಗಿದ್ದರೆ, ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡುತ್ತಿದ್ದೆ. ಆದರೆ, ನನ್ನ ಏಳಿಗೆ ಸಹಿಸದ ಕೆಲವರು ಮೂವರು ರೆಡ್ಡಿ ಬ್ರದರ್ಸ್‌ಗಳ ಜೊತೆ ಕೈಜೋಡಿಸಿ, ನನ್ನ ವಿರುದ್ಧ ಸಂಚು ರೂಪಿಸಿದರು ಎಂದರು.
ನಾನು ಮುಖ್ಯಮಂತ್ರಿಯಾದ ಅವಧಿಯಲ್ಲಿ ಮಾಡಿದ ಸಾಧನೆ ಗಮನಿಸಿ ಜನತೆ ಇನ್ನಷ್ಟು ಸ್ಥಾನಗಳನ್ನು ಕೆಜೆಪಿಗೆ ನೀಡಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಪಕ್ಷದ ಚಿಹ್ನೆ ಸಿಗುವುದು ತಡವಾಗಿದ್ದು, ಸಮಯದ ಅಭಾವ ಹಾಗೂ ಪಕ್ಷದ ಚಿಹ್ನೆಯನ್ನು ಮತದಾರನಿಗೆ ಪರಿಚಯಿಸಲು ಪಕ್ಷ ವಿಫಲವಾಗಿದೆ. ಆದರಿಂದ ನಿರೀಕ್ಷೆ ಮಟ್ಟದ ಸ್ಥಾನಗಳನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ವಿಶ್ಲೇಷಿಸಿದರು.
ಸಂಘಟನೆಯಲ್ಲಿ ಹಿನ್ನಡೆ: ಎಲ್ಲಾ ಕ್ಷೇತ್ರಗಳಲ್ಲಿಯೂ ಹೊಸ ಅಭ್ಯರ್ಥಿಗಳಿದ್ದು, ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಂಘಟನೆಯಲ್ಲಿ ಹಿನ್ನಡೆ ಸಾಧಿಸಿದ್ದೆ,  ಕೆಜೆಪಿ ಕಡಿಮೆ ಮತ ಪಡೆಯಲು ಕಾರಣವಾಯಿತು ಎಂದ ಯಡಿಯೂರಪ್ಪ, ಆದರೂ 35 ಕ್ಷೇತ್ರಗಳಲ್ಲಿ ಎರಡನೇ ಸ್ಥಾನ, 29 ಕ್ಷೇತ್ರಗಳಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಇನ್ನೂ ಕೆಲವು ಕ್ಷೇತ್ರಗಳಲ್ಲಿ ಕೇವಲ ಒಂದೆರಡು ಸಾವಿರ ಮತಗಳ ಅಂತರದಿಂದ  ಅಭ್ಯರ್ಥಿಗಳು ಸೋತಿದ್ದಾರೆ ಎಂದರು.
  ಪಕ್ಷದ ಮುಖಂಡ ಎಸ್. ರುದ್ರೇಗೌಡ, ನಾನು ರಾಜಕೀಯಕ್ಕೆ ಹೊಸಬನಾದರೂ ಕ್ಷೇತ್ರದ ಜನತೆ ಯಡಿಯೂರಪ್ಪನವರ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ, ನನಗೆ ಒಳ್ಳೆಯ ಬೆಂಬಲ ವ್ಯಕ್ತಪಡಿಸಿದ್ದಾರೆ.
  ಆದರೆ, ಮತದಾರನ ಸಂಪರ್ಕದ ಕೊರತೆಯಿಂದಾಗಿ ಸೋಲು ಉಂಟಾಗಿದೆ. ಸೋಲಿನ ಬಗ್ಗೆ ಚರ್ಚೆ ಮಾಡದೆ, ಜನಪರ ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ಚರ್ಚೆ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
  ವೇದಿಕೆಯಲ್ಲಿ ಕೆಜೆಪಿ ರಾಜ್ಯ ಕಾರ್ಯದರ್ಶಿ ಕೆ.ಪಿ. ಪುರುಷೋತ್ತಮ್, ಜಿಲ್ಲಾಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗಾಯತ್ರಿದೇವಿ, ತಸ್ವೀರ್ ಅಹಮ್ಮದ್, ಬಿ. ಏಸುದಾಸ್ ಮತ್ತಿತರರು ಈ ಸಂದರ್ಭದಲ್ಲಿ  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement