ಸಚಿವರ ಆದೇಶಕ್ಕೂ ಕಿಮ್ಮತ್ತಿಲ್ಲವೇ?
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 25
ಪಶುವೈದ್ಯ ಇಲಾಖೆ ಸಚಿವರು ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಕಣ್ಣೊರೆಸುವುದಕ್ಕೆ ಇಂತಹದ್ದೊಂದು ಆದೇಶ ನೀಡಿದರೋ ಅಥವಾ ಅಧಿಕಾರಿಗಳು ಬೇಕಂತಲೇ ನಿರ್ಲಕ್ಷಿಸುತ್ತಿದ್ದಾರೋ ಅರ್ಥವಾಗುತ್ತಿಲ್ಲ.
ಒಟ್ಟಿನಲ್ಲಿ ಶಿವಮೊಗ್ಗ ಮತ್ತು ಹಾಸನದ ಪಶುವೈದ್ಯ ಕಾಲೇಜಿನಲ್ಲಿ ಪದವಿ ಪಡೆದು ಹೊರಬಂದಿರುವ 72 ಪದವೀಧರರ ಸಮಸ್ಯೆ ಬಗೆಹರಿಯುತ್ತಿಲ್ಲ.
ಒಂದೆಡೆ ಪಶುವೈದ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಮುಂದಿನ 10 ವರ್ಷಗಳ ಕಾಲ ರಾಜ್ಯದ ಪಶುವೈದ್ಯ ಕಾಲೇಜುಗಳಿಂದ ಹೊರಬರುವ ಎಲ್ಲರನ್ನೂ ನೇಮಕ ಮಾಡಿಕೊಳ್ಳುವ ಪರಿಸ್ಥಿತಿ ಇದೆ.
ಇನ್ನೊಂದೆಡೆ ಸರ್ಕಾರವೇ ತನ್ನದೇ ತಪ್ಪಿನಿಂದಾದ ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿ ಅವರ ನೇಮಕಕ್ಕೆ ಅಡ್ಡಿಯಾಗುತ್ತಿದೆ.
ಹಾಲಿ 391 ಪಶುವೈದ್ಯರ ನೇಮಕಾತಿ ಪ್ರಕ್ರಿಯೆನ್ನು ಸುಪ್ರೀಂಕೋರ್ಟ್ ಕೇಸಿನ ತೀರ್ಮಾನ ಆಗುವವರೆಗೂ ಮುಂದೂಡುವಂತೆ ಪಶುವೈದ್ಯ ಸಚಿವ ಟಿ.ಬಿ. ಜಯಚಂದ್ರ ಅವರು ಆದೇಶಿಸಿದ್ದರೂ ಸಹ ಇಲಾಖೆ ಅಧಿಕಾರಿಗಳು ಕ್ಯಾರೇ ಎನ್ನದೇ ಈ 72 ಪದವೀಧರರ ಅರ್ಜಿ ಹೊರತುಪಡಿಸಿ ಸೋಮವಾರದಿಂದ ಉಳಿದವರ ಅರ್ಜಿ ಪರಿಶೀಲನೆ ನಡೆಸುವುದಾಗಿ ಹೇಳುತ್ತಿದ್ದಾರೆ.
ಆಗಿರುವುದಿಷ್ಟು: ಯಾವುದೇ ಮೂಲ ಸೌಲಭ್ಯಗಳನ್ನು ಒದಗಿಸದೆ ಶಿವಮೊಗ್ಗ ಹಾಗೂ ಹಾಸನದಲ್ಲಿ ಸರ್ಕಾರವು ಪಶುವೈದ್ಯ ಕಾಲೇಜುಗಳನ್ನು ಆರಂಭಿಸಿತು. ಪಶುವೈದ್ಯ ಪರಿಷತ್ತಿನ (ವಿಸಿಐ) ಮಾನ್ಯತೆ ದೊರೆಯದಿದ್ದರೂ ಈಗಾಗಲೇ ಶಿವಮೊಗ್ಗದ ಎರಡು ಬ್ಯಾಚ್ನಿಂದ 49, ಹಾಸನದ ಒಂದು ಬ್ಯಾಚ್ನಿಂದ 23 ವಿದ್ಯಾರ್ಥಿಗಳು ಪದವೀಧರರಾಗಿದ್ದಾರೆ.
ಈ ನಡುವೆ ರಾಜ್ಯ ಸರ್ಕಾರವು ಖಾಲಿ ಇರುವ 391 ಹುದ್ದೆಗಳಿಗೆ ಅರ್ಜಿ ಕರೆಯಿತು. ಇದಕ್ಕೆ ಅರ್ಹರಿಂದ ಬಂದ ಅರ್ಜಿಗಳ ಸಂಖ್ಯೆ 291 ಮಾತ್ರ. ಇದೇ ಸೋಮವಾರದಿಂದ ಇವರ ಅರ್ಜಿಗಳ ಪರಿಶೀಲನೆ ಕಾರ್ಯ ಬೆಂಗಳೂರಲ್ಲಿ ಆರಂಭವಾಗಲಿದೆ. ಆದರೆ, ಈ ಎರಡು ಕಾಲೇಜುಗಳ 72 ಪದವೀಧರರ ಅರ್ಜಿಗಳನ್ನು ಹೊರತುಪಡಿಸಿ.
ಬೆಂಗಳೂರು ಹಾಗೂ ಬೀದರ್ನಲ್ಲಿರುವ ಪಶುವೈದ್ಯ ಕಾಲೇಜಿನ ಪದವೀಧರರ ಅರ್ಜಿಗಳ ಪರಿಶೀಲನೆ ಮಾತ್ರ ಈ ಸಂದರ್ಭದಲ್ಲಿ ನಡೆಯುವುದಂತೆ.
ಸಚಿವರ ಸೂಚನೆ: ವಿದ್ಯಾರ್ಥಿಗಳು ಈ ಸಮಸ್ಯೆಯನ್ನು ನೂತನ ಸರ್ಕಾರದ ಪಶುವೈದ್ಯ ಸಚಿವ ಟಿ.ಬಿ. ಜಯಚಂದ್ರ ಅವರ ಬಳಿಕೊಂಡೊಯ್ದರು.
ಅಹವಾಲು ಆಲಿಸಿದ ಸಚಿವರು ಒಂದು ಟಿಪ್ಪಣಿಯನ್ನು ಸಿದ್ಧಪಡಿಸಿ ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಕಳುಹಿಸಿಕೊಟ್ಟರು.
2013ರ ಮೇ 24 ದಿನಾಂಕ ಹೊಂದಿರುವ ಸಚಿವರ ಆದೇಶದ ಟಿಪ್ಪಣಿ ಹೀಗಿದೆ- ಶಿವಮೊಗ್ಗ ಮತ್ತು ಹಾಸನ ಪಶುವೈದ್ಯ ಕಾಲೇಜಿನ ಪದವೀಧರರು ಹಾಗೂ ಅವರ ತಂದೆತಾಯಿಯರು ಇಂದು ನನ್ನನ್ನು ಭೇಟಿ ಮಾಡಿದ್ದು, ಸರ್ಕಾರದಿಂದ ಪಶುವೈದ್ಯರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಇದಕ್ಕಾಗಿ ಬೆಂಗಳೂರು ಹಾಗೂ ಬೀದರ್ ಪಶುವೈದ್ಯ ಕಾಲೇಜಿನ ಪದವೀಧರರನ್ನು ಮಾತ್ರ ದಾಖಲಾತಿ ಪರಿಶೀಲನೆಗೆ ಕರೆಯಲಾಗಿದ್ದು, ಶಿವಮೊಗ್ಗ ಮತ್ತು ಹಾಸನ ಪಶುವೈದ್ಯ ಕಾಲೇಜಿನ ಪದವೀಧರರನ್ನು ಪರಿಗಣಿಸಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಗೊಂದಲ ಸೃಷ್ಟಿಯಾಗಿರುವುದರಿಂದ ಹಾಗೂ ಪಶುವೈದ್ಯ ಕಾಲೇಜುಗಳ ಮನ್ನಣೆ ಬಗ್ಗೆ ಉಚ್ಛ ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿದ್ದು, ಇದರ ತೀರ್ಪು ಜೂನ್ ತಿಂಗಳ ಮಧ್ಯೆ ಬರುವ ಸಂಭವವಿರುವುದರಿಂದ ಅಲ್ಲಿಯವರೆಗೂ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಲು ಸೂಕ್ತ ಕ್ರಮ ಜರುಗಿಸಲು ಆದೇಶಿಸಿದೆ.
ಆಕಾಂಕ್ಷಿಗಳ ಆತಂಕ: ತಮ್ಮ ಕಾಲೇಜುಗಳಿಗೆ ಪಶುವೈದ್ಯ ಪರಿಷತ್ತಿನ ಮಾನ್ಯತೆ ಸಿಗುವವರೆಗೂ ಏನು ಮಾಡಬೇಕು ಎಂದು ಪದವೀಧರರು ಆತಂಕಗೊಂಡಿದ್ದಾರೆ. ಈ ನಡುವೆ ಪ್ರಸಕ್ತ ಸಾಲಿನಿಂದ ಶಿವಮೊಗ್ಗ ಹಾಗೂ ಹಾಸನ ಕಾಲೇಜುಗಳಿಗೆ ಪ್ರವೇಶ ಪಡೆಯದಂತೆ ವಿಸಿಐ ಸೂಚಿಸಿದ್ದು, ಇನ್ನಷ್ಟು ಗೊಂದಲಕ್ಕೆ ಕಾರಣವಾಗಿದೆ.
ಸರ್ಕಾರ ನಮ್ಮನ್ನು ನಡುನೀರಿನಲ್ಲಿ ಕೈಬಿಡುತ್ತಿದೆ. ಸಚಿವರು ಆದೇಶ ನೀಡಿದ್ದರೂ ಸಹ ನಮಗಿನ್ನೂ ಆ ಪ್ರತಿ ಸಿಕ್ಕಿಲ್ಲ ಎಂದು ಹೇಳುತ್ತಿರುವ ಅಧಿಕಾರಿಗಳು ಸೋಮವಾರದಿಂದ ದಾಖಲಾತಿ ಪರಿಶೀಲನೆ ನಡೆಯುವುದು ಎನ್ನುತ್ತಿದ್ದಾರೆ ಎಂದು ಈ ಎರಡು ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಪದವೀಧರರು ಅಲವತ್ತುಕೊಳ್ಳುತ್ತಿದ್ದಾರೆ.
-ಹೊನ್ನಾಳಿ ಚಂದ್ರಶೇಖರ್