ಹಣ, ಹೆಂಡದ ರಾಜಕೀಯ ಮಾಡಿವವರಿಗೆ ತಕ್ಕ ಪಾಠ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 25
ಹಣ, ಹೆಂಡದ ರಾಜಕೀಯ ಮಾಡುತ್ತಿದ್ದ ವ್ಯಕ್ತಿಗಳಿಗೆ ಮತದಾರ ಪ್ರಭು ಈ ಬಾರಿಯ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಿದ್ದಾನೆ ಎಂದು ಸಾಗರ ಕ್ಷೇತ್ರದ ಶಾಸಕ ಕಾಗೋಡು ತಿಮ್ಮಪ್ಪ ಹೇಳಿದರು.
ನಗರ ಉತ್ತರ ಮತ್ತು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಶನಿವಾರ ಶಾಸಕ ಕೆ.ಬಿ. ಪ್ರಸನ್ನ ಕುಮಾರ್, ಕಾಗೋಡು ತಿಮ್ಮಪ್ಪ ಹಾಗೂ ಕಿಮ್ಮನೆ ರತ್ನಾಕರ್ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಕ್ಕ ಉತ್ತರ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸಾಕಷ್ಟು ಪೈಪೋಟಿ ಇತ್ತು. ಅದರಲ್ಲಿಯೂ ಶಿವಮೊಗ್ಗ ನಗರ ಕ್ಷೇತ್ರ ಚುನಾವಣೆ ಕಾಂಗ್ರೆಸ್ಗೆ ಸವಾಲಗಿತ್ತು. ಆದರೆ, ಆ ಸವಾಲಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ನಮ್ಮನ್ನು ಬಹುಮತದಿಂದ ಗೆಲ್ಲಿಸಿದ್ದಾರೆ. ಮತದಾರರ ಆಶೀರ್ವಾದವನ್ನು ಸದಾ ನೆನಪಿನಲ್ಲಿಟ್ಟುಕೊಂಡು ಜನರ ನಿರೀಕ್ಷೆಗೆ ತಕ್ಕಂತೆ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದರು.
ಕೆಲಸಮಾಡಬೇಕು: ಘಟಾನುಘಟಿಗಳು ಹಾಗೂ ಹಣದ ದೊರೆಗಳನ್ನು ಈ ಕ್ಷೇತ್ರದ ಮತದಾರರು ಉಚ್ಚಾಟಸಿದ್ದಾರೆ. ಇದು ಚುನಾವಣೆಯ ಇತಿಹಾಸದಲ್ಲಿ ಸದಾಕಾಲ ಉಳಿಯುತ್ತದೆ ಎಂದರಲ್ಲದೇ, ನಮ್ಮನ್ನು ಅಂತ್ಯಂತ ಸೂಕ್ಷ್ಮವಾಗಿ ಜನತೆ ಗಮನಿಸುತ್ತಿದ್ದಾರೆ. ಹಾಗಾಗಿ ಜನರು ಕಾಂಗ್ರೆಸ್ನ್ನು ಗೆಲ್ಲಿಸಿದ್ದು ಸಾರ್ಥಕವಾಯಿತು ಎಂಬಂತೆ ಕೆಲಸಮಾಡಬೇಕು ಎಂದರು.
ಸರ್ವಾಂಗೀಣ ಅಭಿವೃದ್ಧಿ: ನಾವು ಕೇವಲ ಅಧಿಕಾರ ಪಡೆಯುವ ಉದ್ದೇಶದಿಂದ ಚುನಾವಣೆಯಲ್ಲಿ ಸ್ಫರ್ಧಿಸಿ, ಗೆದ್ದಿಲ್ಲ. ಬದಲಾಗಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಮಾಡಬೇಕೆಂದು ಬಂದಿದ್ದೇವೆ. ಆದರಿಂದಲೇ ಪಕ್ಷ ಅಧಿಕಾರಕ್ಕೆ ಬಂದ ಮೊದಲ ದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರಿಗಾಗಿ 1 ರುಪಾಯಿಗೆ 1 ಕೆ.ಜೆ ಅಕ್ಕಿ ಎಂದು ಘೋಷಿಸಿದ್ದಾರೆ. ಅಲ್ಲದೆ ರಾಜ್ಯವು ಗುಡಿಸಲು ಮುಕ್ತವಾಗಬೇಕೆಂದು ನಮ್ಮ ಆಸೆ ಎಂದರು.
ಶಾಸಕ ಕೆ.ಬಿ. ಪ್ರಸನ್ನಕುಮಾರ್, ನಾನು ಶಾಸಕನಾಗಿ ಎಲ್ಲಾ ವರ್ಗದವರನ್ನು ಸಮಾನ ದೃಷ್ಟಿಯಿಂದ ನೋಡುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಪಕ್ಷದ ಕಾರ್ಯಕರ್ತರು, ಮುಖಂಡರ ಬೆಂಬಲ ಸದಾ ಸಿಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ರುದ್ರೇಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ
ವಿಜಯಲಕ್ಷ್ಮೀ ಸಿ. ಪಾಟೀಲ್, ಎಐಸಿಸಿ ಸದಸ್ಯೆ ಬಲ್ಕೀಶ್ ಬಾನು ಇದ್ದರು.