ಕೃಷಿ ವಿಮಾ ಯೋಜನೆ ಪ್ರಯೋಗ
ಶಿವಮೊಗ್ಗ: ಮೇ 26 ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಹೋಬಳಿ ಹಾಗೂ ಗ್ರಾಪಂ ಮಟ್ಟದಲ್ಲಿ ಪ್ರಾಯೋಗಿಕವಾಗಿ ಮಾರ್ಪಡಿಸಿರುವ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ರಾಜ್ಯದ ಗುಲ್ಬರ್ಗಾ, ಶಿವಮೊಗ್ಗ, ತುಮಕೂರು ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ತಂದಿವೆ.
ಈ ಯೋಜನೆಯಡಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಆಯ್ಕೆಯಾದ ನಾಲ್ಕು ಜಿಲ್ಲೆಗಳಲ್ಲಿ ಸ್ಥಳ ನಿರ್ದಿಷ್ಟಪಡಿಸಿ, ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ನಷ್ಟದ ನಿರ್ಧಾರಕ್ಕಾಗಿ, ಬಿತ್ತನೆ ವಿಫಲಗೊಂಡಲ್ಲಿ ಬೆಳೆ ನಷ್ಟ ಪರಿಹಾರ ನೀಡಲು ಬಿತ್ತನೆಯಿಂದ ಕಟಾವು ಹಂತದವರೆಗಿನ ಮಧ್ಯದ ಅವಧಿಯಲ್ಲಿ ಬೆಳೆ ನಷ್ಟ ಸಂಭವಿಸಿದರೆ ಮುಂಚಿತವಾಗಿ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇ. 25 ಹಣವನ್ನು ಪರಿಹಾರವಾಗಿ ನೀಡಲಾಗುವುದು.
ಶೇ.50: ವಾಣಿಜ್ಯ ವಿಮಾ ಕಂತಿನ ದರ ಹಾಗೂ ರೈತರು ಕಟ್ಟಬೇಕಾಗಿರುವ ವಿಮಾ ಕಂತಿನ ದರದಲ್ಲಿನ
ವ್ಯತ್ಯಾಸದ ಮೊತ್ತದ ಶೇ.50 ಹಣವನ್ನು ರಾಜ್ಯ ಸರ್ಕಾರ ವಿಮಾ ಕಂಪನಿಗಳಿಗೆ ಭರಿಸಲಿದೆ.
2013ರ ಮುಂಗಾರು ಹಂಗಾಮಿನಲ್ಲಿ ಬೆಳೆ ಸಾಲ ಪಡೆದ ರೈತರಿಗೆ ಜೂನ್ 30ರೊಳಗೆ ಸಾಲ ಮಂಜೂರಾಗದಿದ್ದರೆ ಅಂತಹ ರೈತರನ್ನು ಕಡ್ಡಾಯವಾಗಿ ಯೋಜನೆಗೆ ಒಳಪಡಿಸಲಾಗುವುದು. ಬೆಳೆ ಸಾಲ ಪಡೆಯುವ ರೈತರಿಗೆ ವಿಮಾ ಕಂತಿನ ಮೊತ್ತವನ್ನು ಬೆಳೆ ಸಾಲದ ಮೊತ್ತಕ್ಕಿಂತ ಹೆಚ್ಚುವರಿಯಾಗಿ ಮಂಜೂರು ಮಾಡಲು ಅನುಮತಿ ನೀಡಲಾಗಿದೆ. ಪ್ರಸಕ್ತ ಮಾಹೆಯಲ್ಲಿ ವಿಮೆ ಮಾಡಿಸಿದ ರೈತರ ಪ್ರಸ್ತಾವನೆಗಳನ್ನು ಮುಂದಿನ ಮಾಹೆಯ ಅಂತ್ಯದೊಳಗೆ ಬ್ಯಾಂಕುಗಳು ವಿಮಾ ಸಂಸ್ಥೆಗೆ ಸಲ್ಲಿಸಬೇಕು.
ಜು.31 ಕೊನೆದಿನ: ಅಂತಿಮವಾಗಿ ಪ್ರಸ್ತಾವನೆಯನ್ನು ವಿಮಾಸಂಸ್ಥೆಗೆ ನೀಡಲು ಮುಂಗಾರು ಹಂಗಾಮಿಗೆ ಜುಲೈ 31ಕೊನೆಯ ದಿನ. ವಿಮಾ ಸಂಸ್ಥೆಯು ಬೆಳೆಸಾಲ ಪಡೆಯದ ರೈತರನ್ನು ಅಧಿಕೃತ ಏಜೆಂಟರ ಮೂಲಕವೂ ಯೋಜನೆಗೆ ಒಳಪಡಿಸಲು ಅನುಮತಿ ನೀಡಲಾಗಿದೆ.
2013ರ ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಶೇ.25ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ನಷ್ಟ ಪರಿಹಾರವನ್ನು ವಿಮಾಸಂಸ್ಥೆಯು ವಿಮೆ ಮಾಡಿಸಿದ ರೈತರಿಗೆ ಇತ್ಯರ್ಥಪಡಿಸಲಿದೆ.
ಬಿತ್ತನೆ ಪೂರ್ಣವಾಗಿ ವಿಫಲಗೊಂಡಲ್ಲಿ ವಿಮಾ ಮೊತ್ತಕ್ಕೆ ಶೇ.12.50ರಷ್ಟು, ಬಿತ್ತನೆಯಾದ ನಂತರ ಮೊಳಕೆ ಬಾರದಿದ್ದಲ್ಲಿ ವಿಮಾ ಮೊತ್ತಕ್ಕೆ ಶೇ.18.75 ಹಾಗೂ ಮೊಳಕೆ ಬಂದ ನಂತರ ಮುಂಚಿತವಾಗಿ ಬಾಡಿ ಹೋದರೆ ಅಥವಾ ಹಾಳಾದರೆ ವಿಮಾ ಮೊತ್ತಕ್ಕೆ ಶೇ. 25 ಪರಿಹಾರ ಧನವನ್ನು ನೋಡಲ್ ಅಧಿಕಾರಿಗಳ ವರದಿ ಆಧಾರದ ಮೇಲೆ ಒಂದು ತಿಂಗಳೊಳಗಾಗಿ ನೀಡಲಾಗುವುದು.
ಮುಂಚಿತ ಹಣ: ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಬಿತ್ತನೆಯಾದ ನಂತರ ಕಟಾವಿಗೆ ಮೊದಲು ಶೇ.50ಕ್ಕಿಂತ ಹೆಚ್ಚಿನ ಭಾಗದಲ್ಲಿ ಬೆಳೆ ನಷ್ಟ ಸಂಭವಿಸಿದಲ್ಲಿ ವಿಮೆ ಮಾಡಿಸಿದ ರೈತರಿಗೆ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇ. 25ರಷ್ಟು ಹಣವನ್ನು ಮುಂಚಿತವಾಗಿ ವಿಮಾ ಸಂಸ್ಥೆ ನೀಡಲಿದೆ. ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಬೆಳೆ ಇಳುವರಿ ಮಾಹಿತಿ ಬಂದನಂತರ ಅಂತಿಮ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಈ ಹಣವನ್ನು ಹೊಂದಾಣಿಕೆ ಮಾಡಲಾಗುವುದು.
ಬೆಳೆ ಬಿತ್ತನೆಯಾದ ನಂತರ 1ರಿಂದ 2ತಿಂಗಳೊಳಗಾಗಿ ವಿಮಾ ಮೊತ್ತಕ್ಕೆ ಶೇ.50ರಷ್ಟು, 2ರಿಂದ 3ತಿಂಗಳೊಳಗಾಗಿ ವಿಮಾ ಮೊತ್ತಕ್ಕೆ ಶೇ.75ರಷ್ಟು ಹಾಗೂ ಬಿತ್ತನೆಯಾದ 3ತಿಂಗಳ ಮೇಲ್ಪಟ್ಟು ವಿಮಾ ಮೊತ್ತದ ಶೇ.100 ಪರಿಹಾರ ವಿತರಿಸಲಾಗುವುದು.
ಇಳುವರಿ ಮಾಹಿತಿ: ಸಾಮಾನ್ಯ ಬೆಳೆ ಅಂದಾಜು ಸಮೀಕ್ಷೆಯಡಿ ರಾಜ್ಯ ಸರ್ಕಾರ ನಡೆಸುವ ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಕಂಡು ಹಿಡಿಯಲಾದ ಇಳುವರಿ ಮಾಹಿತಿಯನ್ನು ಮಾತ್ರ ಪರಿಗಣಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಲೆಕ್ಕಹಾಕಿ ಇತ್ಯರ್ಥಪಡಿಸಲಾಗುವುದು.
ಇತರೆ ಇಳುವರಿ ಅಂದಾಜು ಮಾಡುವಂತಹ ವಿಧಾನಗಳಾದ ಆಣೆವಾರಿ ಅಥವಾ ರಾಜ್ಯ ಸರ್ಕಾರ ಅಥವಾ ಯಾವುದೇ ಇಲಾಖೆ ಅಥವಾ ಸಂಸ್ಥೆ, ಕ್ಷಾಮ, ಬರ, ಪ್ರವಾಹ ಎಂದು ಘೋಷಿಸಿ ಇಳುವರಿ ನಷ್ಟವನ್ನು ಅಂದಾಜು ಮಾಡುವ ಮಾಹಿತಿಯನ್ನು ಈ ಯೋಜನೆಯಡಿ ಬೆಳೆ ವಿಮಾ ನಷ್ಟಕ್ಕೆ ಪರಿಗಣಿಸಲಾಗುವುದಿಲ್ಲ ಎಂದು ಕೃಷಿ ಇಲಾಖಾ ಅಧಿಕಾರಿಗಳು ತಿಳಿಸಿದೆ.