ಕ್ರೀಡೆಗೂ ಗಮನ ನೀಡಲು ಸೂಚನೆ
ಶಿವಮೊಗ್ಗ: ವಿದ್ಯೆ ಕದಿಯಲಾಗದ ಸಂಪತ್ತು. ವಿದ್ಯೆ ಜೊತೆಗೆ ಕ್ರೀಡೆಯಲ್ಲಿಯೂ ಆಸಕ್ತಿ ತೊರಬೇಕು ಎಂದು ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹೇಳಿದರು.
ನಗರದ ಗೋಪಾಲಗೌಡ ಬಡಾವಣೆಯಲ್ಲಿ ಭಾನುವಾರ ಶಿವಮೊಗ್ಗ ಕ್ರಿಕೆಟ್ ಅಕಾಡೆಮಿ ಕಳೆದ 45 ದಿನಗಳಿಂದ ಏರ್ಪಡಿಸಿದ್ದ ಕ್ರಿಕೆಟ್ ಅಕಾಡೆಮಿ ತರಬೇತಿ ಕಾರ್ಯಾಗಾರದಲ್ಲಿ ಅವರು, ಪ್ರಸ್ತುತ ಕ್ರಿಕೆಟ್ಗೆ ಬಹಳಷ್ಟು ಅವಕಾಶಗಳು ದೊರೆಯುತ್ತಿದ್ದು, ಅಂತಹ ಅವಕಾಶಗಳನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ಉಪಯೋಗಿಸಿಕೊಳ್ಳಬೇಕು ಎಂದರು.
ಪ್ರಸ್ತುತ ಪ್ರತಿ ಕ್ಷೇತ್ರದಲ್ಲಿ ಸ್ಪರ್ಧೆ ಏರ್ಪಟ್ಟಿರುವುದರಿಂದ ಪೋಷಕರು ಎಲ್ಲಾ ವಿಷಯಗಳಲ್ಲಿಯೂ ಹೆಚ್ಟಿನ ಪ್ರೋತ್ಸಾಹ ನೀಡುವುದರೊಂದಿಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಬೇಕು ಎಂದ ಅವರು, ಈ ಹಿನ್ನೆಲೆಯಲ್ಲಿ ನಗರದ ಶಿವಮೊಗ್ಗ
ಕ್ರಿಕೆಟ್ ಅಕಾಡೆಮಿ ಪೋಷಕರ ಸಹಕಾರದೊಂದಿಗೆ ಇಂತಹ ಕಾರ್ಯಾಗಾರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಮುಂದಿನ ದಿನಗಳಲ್ಲಿ ಅಕಾಡೆಮಿಯ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸುವಂತಾಗಲಿ ಎಂದು ಹಾರೈಸಿದ ಪ್ರಸನ್ನಕುಮಾರ್, ಕ್ರಿಕೆಟ್ ಆಟದಲ್ಲಿರುವ ಸಾಕಷ್ಟು ಕೌಶಲ್ಯಗಳ ಬಗ್ಗೆ ಗಮನ ನೀಡಿ ಎಂದು ಸಲಹೆ ನೀಡಿದರು. ಪ್ರೊಬೆಷರಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಮಾತನಾಡಿ, ಒಬ್ಬ ವೃತ್ತಿಪರ ಕ್ರಿಕೆಟ್ ಆಟಗಾರನಾಗಬೇಕಾದರೆ ನಾಲ್ಕು ಪ್ರಮುಖ ಅಂಶಗಳನ್ನು ಗಮನಿಸಬೇಕು. ದೈಹಿಕ ಕ್ಷಮತೆ, ತಂತ್ರಗಾರಿಕೆ, ದೃಢ ಮನಸ್ಥಿತಿ ಮತ್ತು ಕೌಶಲ್ಯಗಳನ್ನು ಹೊಂದಿರಬೇಕು ಎಂದರು.
ಕೆಎಸ್ಸಿಎ ಜಿಲ್ಲಾ ಸಂಯೋಜಕ ಡಿ.ಎಸ್. ಅರುಣ್ ಮಾತನಾಡಿ, ಇಂದು ಕ್ರಿಕೆಟ್ ಆಟದಲ್ಲಿ ಸಾಕಷ್ಟು ಅವಕಾಶಗಳಿವೆ. ಅಲ್ಲದೇ, ಜಿಲ್ಲೆಯಲ್ಲಿ ನಾಲ್ಕು ಟರ್ಫ್ ಕ್ರಿಕೆಟ್ ಪೀಚ್ಗಳಿದ್ದು, ಜಿಲ್ಲೆಯ ಕ್ರಿಕೆಟ್ ಆಟಗಾರರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಇಲ್ಲಿಯೂ ಬೆಂಗಳೂರು ಮಾದರಿಯಲ್ಲಿಯೇ ಕ್ರಿಕೆಟ್ ಕಲಿಯಬಹುದು ಎಂದರು.
ಕಾರ್ಯಾಗಾರದಲ್ಲಿ 7 ರಿಂದ 18 ವರ್ಷದ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ಈ ವೇಳೆ ನಗರಸಭೆ ಸದಸ್ಯ ವಿಶ್ವನಾಥ (ಕಾಶಿ), ಕ್ರಿಕೆಟ್ ತರಬೇತುದಾರ ಪಿ.ವಿ. ನಾಗರಾಜ್, ಜನಾರ್ಧನ ಪೈ, ಉಮೇಶ್, ಬಾಲಕೃಷ್ಣ ಮತ್ತು ಸುರೇಶ್ ಇದ್ದರು.