'ತಿದ್ದುಪಡಿ ತಂದರೂ ಪ್ರಯೋಜನವಾಗಿಲ್ಲ'
ಶಿವಮೊಗ್ಗ,ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಸಂವಿಧಾನದ 97ನೇ ಪರಿಚ್ಛೇದಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದ್ದರೂ, ಅದರ ಪೂರ್ವ ಷರತ್ತುಗಳು ಹಾಗೆಯೇ ಉಳಿದಿವೆ ಎಂದು ಕರ್ನಾಟಕ ಸೌಹಾರ್ದ ಒಕ್ಕೂಟ ಸಹಕಾರಿ ನಿಯಮಿತ ಅಧ್ಯಕ್ಷ ಮನೋಹರ್ ಮಸ್ಕಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೀರ್ಘ ಕಾಲದ ಹೋರಾಟದ ಫಲವಾಗಿ 97ನೇ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅದರಲ್ಲಿನ ಲೋಪದೋಷ ಸರಿಪಡಿಸುವ ನಿಟ್ಟಿನಲ್ಲಿ ಕಾಯ್ದೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಬೇಕಿದೆ ಎಂದು ಒತ್ತಾಯಿಸಿದರು.
ತಾರತಮ್ಯ ನೀತಿ: ಸಹಕಾರ ಹಾಗೂ ಸೌಹಾರ್ದ ಸಹಕಾರಿ ಸಂಸ್ಥೆಗಳ ಬೆಳವಣಿಗೆ ಪೂರಕವಾದ ಸಂವಿಧಾನದ 97ನೇ ತಿದ್ದುಪಡಿಯ ಜಾರಿ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ.
ಸಂವಿಧಾನ ತಿದ್ದುಪಡಿ ಹೊರತಾಗಿಯೂ ಸಹಕಾರ ಹಾಗೂ ಸೌಹಾರ್ದ ಸಂಸ್ಥೆಗಳ ಹುಟ್ಟುವಿಕೆಯ ಹಕ್ಕು ಬದಲಾಗಿಲ್ಲ. ಹಕ್ಕು ನೀಡಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ಕಂಪನಿ, ಟ್ರಸ್ಟ್ ಹಾಗೂ ಸರ್ಕಾರೇತರ ಸಂಸ್ಥೆಗಳ ರಚನೆಗೆ ಇಲ್ಲದ ಷರತ್ತುಗಳನ್ನು ಸಹಕಾರ ಕ್ಷೇತ್ರದ ಮೇಲೆ ಹೇರಲಾಗಿದ್ದು, ಈ ಮೂಲಕ ರಾಜ್ಯ ಸರ್ಕಾರ ಸಂವಿಧಾನವನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದರು.
ಸಾಕಷ್ಟು ಲೋಪ: ಫೆಬ್ರವರಿ ತಿಂಗಳಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಸಹಕಾರ ಕ್ಷೇತ್ರಕ್ಕೆ
ಸಂಬಂಧಿಸಿದಂತೆ ತಿದ್ದುಪಡಿ ಕಾಯ್ದೆ ಯಾವುದೇ ಚರ್ಚೆ ಇಲ್ಲದೆ ಅಂಗೀಕಾರವಾಗಿ ಜಾರಿಗೆ ಬಂದಿದ್ದು, ಇದರಲ್ಲಿ ಸಾಕಷ್ಟು ಲೋಪದೋಷಗಳಿವೆ. ಅಧಿಕಾರಷಾಹಿ ವ್ಯವಸ್ಥೆ ಚುನಾಯಿತ ಜನಪ್ರತಿನಿಧಿಗಳನ್ನು ವ್ಯವಸ್ಥಿತವಾಗಿ ದಾರಿತಪ್ಪಿಸಿದ್ದು, ಒಂದೇ ರಾಜ್ಯದ ಎರಡು ಕಾಯ್ದೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ ಎಂದರು.
ನಾಮಮಾತ್ರ ಸದಸ್ಯತ್ವ ಹಾಗೂ ಸಹ ಸದಸ್ಯತ್ವವನ್ನು ರದ್ದುಪಡಿಸಿ ರೆಗ್ಯುಲರ್ ಸದಸ್ಯತ್ವಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಸಹ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಹಿಂದಿನ ಸಹಕಾರ ಸಚಿವರಾಗಿದ್ದವರು ಸಹಕಾರ ಕ್ಷೇತ್ರದ ವಾಸ್ತವಿಕ ಸಮಸ್ಯೆ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಸಹಕಾರ ಸಂಸ್ಥೆಗಳನ್ನು ಸರ್ಕಾರದ ಧನ ಸಹಾಯದಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳು ಎಂದು ಅವರು ಭಾವಿಸಿದ ಪರಿಣಾಮ ಇಂತಹ ಲೋಪ ಆಗಿದೆ ಎಂದು ತಿಳಿಸಿದರು. ಒಟ್ಟಾರೆ 6,500ಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳಿದ್ದು, ಶೀಘ್ರವೇ ಚುನಾವಣೆ ನಡೆಯಲಿದ್ದು, ಆಗ ಸಾಕಷ್ಟು ಸಮಸ್ಯೆ ಎದುರಾಗಲಿದೆ. ಅಷ್ಟರೊಳಗೆ ನೂತನ ಸಹಕಾರಿ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಮನವರಿಕೆ ಮಾಡಿಕೊಟ್ಟು ತಿದ್ದುಪಡಿಗೆ ಮನವಿ ಮಾಡಲಾಗುತ್ತದೆ ಎಂದರು. ನಿಯಮಿತದ ನಿರ್ದೇಶಕ ಯು.ಎಚ್. ರಾಮಪ್ಪ, ಅಂಬಲೆ ಮಂಜನಾಥ ಮೊದಲಾದರು ಇದ್ದರು.