ನಾಳೆ ಸಾಗರ ತಾಲೂಕು ಸಾಹಿತ್ಯ ಸಮ್ಮೇಳನ
ಕ.ಪ್ರ.ವಾರ್ತೆ, ಸಾಗರ, ಮೇ 26 ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮೇ 28 ರ ಮಂಗಳವಾರ 3 ನೇ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಪಟ್ಟಣದ ಶಾರದಾಂಬಾ ಸಭಾಭವನದಲ್ಲಿ ಹಮ್ಮಿಕೊಂಡಿದೆ.
ಜಾನಪದ ವಿದ್ವಾಂಸ ಎನ್. ಹುಚ್ಚಪ್ಪ ಮಾಸ್ತರ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು, ಅಂದು ಬೆಳಗ್ಗೆ 10ಗಂಟೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಕುಂ. ವೀರಭದ್ರಪ್ಪ ಸಮ್ಮೇಳನ ಉದ್ಘಾಟಿಸಲಿದ್ದಾರೆ.
ಶಾಸಕ ಕಾಗೋಡು ತಿಮ್ಮಪ್ಪ, ಉಪವಿಭಾಗಾಧಿಕಾರಿ ಡಾ. ಉದಯ ಕುಮಾರ್ ಶೆಟ್ಟಿ, ಡಾ. ಗುಂಡಾಜೋಯಿಸ್, ಟಿ. ಮಹಾಬಲೇಶ್ವರ ಭಟ್ಟ, ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ವಿಚಾರಗೋಷ್ಠಿ: ಬೆಳಗ್ಗೆ 11-30 ರಿಂದ 12-30ರವರೆಗೆ ಭೂಮಿ ಬವಣೆ ವಿಷಯ ಕುರಿತು, ಮಧ್ಯಾಹ್ನ 12-30 ರಿಂದ 1-30ರವರೆಗೆ ಮಲೆನಾಡು ಬುಡಕಟ್ಟು ಜನಾಂಗದ ಸ್ಥಿತಿಗತಿ ವಿಷಯ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಮಧ್ಯಾಹ್ನ 2-30 ರಿಂದ 3-30ಕ್ಕೆ ಕವಿಗೋಷ್ಠಿ ಹಾಗೂ ಮಧ್ಯಾಹ್ನ 3-30 ರಿಂದ 4-30ಕ್ಕೆ ನಡೆಯುವ ಗೋಷ್ಠಿಯಲ್ಲಿ ವಿವಿಧ ಲೇಖಕರ ಪುಸ್ತಕವನ್ನು ಸಮ್ಮೇಳನಾಧ್ಯಕ್ಷ ಹುಚ್ಚಪ್ಪ ಮಾಸ್ತರ ಬಿಡುಗಡೆ ಮಾಡಲಿದ್ದಾರೆ.
ಸಂಜೆ 4-30 ರಿಂದ 5-30ರವರೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಶಾಸಕ ಕಾಗೋಡು ತಿಮ್ಮಪ್ಪ ಸನ್ಮಾನಿಸಲಿದ್ದಾರೆ. ಸಂಜೆ 5-30 ರಿಂದ 6-30ರವರೆಗೆ ನಡೆಯುವ ಸಮಾರೋಪದಲ್ಲಿ ಸಾಹಿತಿ ಡಾ. ನಾ.ಡಿಸೋಜ ಸಮಾರೋಪ ಭಾಷಣ ಮಾಡಲಿದ್ದು ಸಂಸದ ಬಿ.ವೈ. ರಾಘವೇಂದ್ರ ಮೊದಲಾದರು ಭಾಗವಹಿಸಲಿದ್ದಾರೆ.
ಸಮ್ಮೇಳನಾಧ್ಯಕ್ಷರ ಪರಿಚಯ: ಸಮ್ಮೇಳನದ ಸರ್ವಾಧ್ಯಕ್ಷ ಎನ್. ಹುಚ್ಚಪ್ಪ ಮಾಸ್ತರ ಕುಗ್ವೆಯ ಗೇಣಿದಾರರಾದ ನೆಲ್ಲೂರು ಹುಚ್ಚಪ್ಪ ಮತ್ತು ಪುಟ್ಟಮ್ಮ ಅವರ ಪುತ್ರ. ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಬುಡಕಟ್ಟು ಜನಾಂಗದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಡೆಸಲ್ಪಡುತ್ತಿರುವ ಆಶ್ರಮ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ 1959ರಲ್ಲಿ ವೃತ್ತಿ ಪ್ರಾರಂಭಿಸಿದ ಹುಚ್ಚಪ್ಪ ಮಾಸ್ತರರು ತಾಲೂಕಿನ ಹಿರೇಮನೆ ಮಹಾತ್ಮಾಗಾಂಧಿ ಗಿರಿಜನ ಆಶ್ರಮ ಶಾಲೆಯ ಮುಖ್ಯಶಿಕ್ಷಕರಾಗಿ 25 ವರ್ಷ ಕಾಲ ಸೇವೆ ಸಲ್ಲಿಸಿದ್ದಾರೆ.
ತಮ್ಮ 16ನೇ ವಯಸ್ಸಿನಿಂದಲೇ ಮೂಡಲಪಾಯ, ಬಯಲಾಟಗಳಲ್ಲಿ ಪಾತ್ರ ನಿರ್ವಹಣೆ ಜೊತೆಗೆ ಹಾಡುಗಾರಿಕೆ ನಿರ್ವಹಿಸುತ್ತಾ ಬಂದರು. ಹೆಗ್ಗೋಡಿನ ನೀನಾಸಂ ತಂಡ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಪ್ರದರ್ಶಿಸಿದ ಸಂಗ್ಯಾಬಾಳ್ಯಾ ನಾಟಕದಲ್ಲಿ ಮುಖ್ಯ ಗಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಸಂಗೀತ ಸಂಯೋಜನೆ: ಜೊತೆಗೆ ನೀನಾಸಂನ ಅನೇಕ ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಾಗರದಲ್ಲಿ ಕಾಗೋಡು ರಂಗಮಂಚ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, 1987ರಲ್ಲಿ ಜಾನಪದ ರಂಗಸಂಕುಲ ಸ್ಥಾಪನೆ ಮಾಡಿ, ರಂಗತರಬೇತಿ ಶಿಬಿರ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಎರಡು ಬಾರಿ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಇವರು ಹಲವಾರು ಉಲ್ಲೇಖನೀಯ ಕೆಲಸ ಮಾಡಿದ್ದಾರೆ.