ಭದ್ರಾವತಿಯಲ್ಲಿ ಸಾಮೂಹಿಕ ವಿವಾಹ
ಕ.ಪ್ರ. ವಾರ್ತೆ, ಭದ್ರಾವತಿ, ಮೇ 26
ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ- ಎಂದು ನಂಬಿರುವ ದೇಶ ನಮ್ಮದು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ವಿಶ್ವಭಾರತಿ ವಿಶ್ವಸ್ಥ ಮಂಡಳಿ ಪಟ್ಟಣದ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ.ಟಿ.ನರೇಂದ್ರ ಭಟ್ ಹೇಳಿದರು.
ಭಾರತೀಯರಾದ ನಾವು ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಸ್ತ್ರೀ ಕೇವಲ ಭೋಗದ ವಸ್ತುವಲ್ಲ ಮತ್ತು ಮಕ್ಕಳನ್ನು ಹೆರುವ ಯಂತ್ರವಲ್ಲ. ಸ್ತ್ರೀ ಇಲ್ಲದೆ ಪುರುಷ ಅಪೂರ್ಣ ಎಂಬುದು ಪ್ರಕೃತಿ ನಿಯಮ.
ಸಾಮಾಜಿಕ ಬಾಂಧವ್ಯ: ಇದನ್ನು ನಾವು ಅರ್ಥಮಾಡಿಕೊಳ್ಳಬೇಕು. ಆಕೆಯ ಭಾವನೆ ಮತ್ತು ಆಶೋತ್ತರಗಳಿಗೆ ಪುರುಷ ಸ್ಪಂದಿಸುವ ಅಗತ್ಯವಿದೆ. ಸ್ತ್ರೀ ಮತ್ತು ಪುರುಷ ಸಮಾಜವೆಂಬ ಬಂಡಿಯ ಎರಡು ಗಾಲಿಗಳಿದ್ದಂತೆ. ಇದರಲ್ಲಿ ಯಾವುದು ಊನವಾದರೂ ಬಂಡಿ ಸರಾಗವಾಗಿ ಚಲಿಸಲಾರದು. ಸಾಮೂಹಿಕ ವಿವಾಹಗಳು ಸಾಮಾಜಿಕ ಬಾಂಧವ್ಯಗಳನ್ನು ಹೆಚ್ಚಿಸುತ್ತವೆ ಮತ್ತು ವೃಥಾ ಆಗುವ ವೆಚ್ಚವನ್ನು ತಗ್ಗಿಸುತ್ತವೆ. ಇದನ್ನು ಎಲ್ಲರೂ ಉತ್ತೇಜಿಸಬೇಕೆಂದು ಅವರು ಕರೆನೀಡಿದರು.
ಪುರಸ್ಕಾರ: ಶಿವಸುಬ್ರಮಣ್ಯಾಶ್ರಮದ ತವತ್ತಿರು ಸ್ವಾಮಿ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು. ಪ್ರಗತಿಪರ ನೈಸರ್ಗಿಕ ಕೃಷಿಕ ಮಾದೇಗೌಡ ಅವರನ್ನು ಸನ್ಮಾನಿಸಲಾಯಿತು. ತರೀಕೆರೆ ತಾಲೂಕಿನ ಎಣ್ಣೆಹೊಳೆ ಮಠದ ವೃಷಬೇಂದ್ರ ದೇಶಿಕೇಂದ್ರ ಸ್ವಾಮಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಬೆಂಗಳೂರು ಪ್ರಾಂತ ಸಂಪರ್ಕಾಧಿಕಾರಿ ಹಾಗೂ ಗೋಸೇವಾ ಆಯೋಗದ ಸದಸ್ಯ ಬಿ.ಎಸ್. ಮಂಜುನಾಥಸ್ವಾಮಿ, ವಿ.ಹಿಂ.ಪ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಎಚ್.ಬಿ. ರಮೇಶ್ ಬಾಬು, ಭದ್ರಾವತಿ ತಾಲೂಕು ಅಧ್ಯಕ್ಷ ಎ.ಬಿ. ನಂಜಪ್ಪ, ದಿನಸಿ ವಸ್ತುಗಳ ಸೇವಾಕರ್ತ ಶಾರದಾ ಟ್ರಾನ್ಸ್‌ಪೋರ್ಟ್ ಮಾಲಿಕ ಶಿವಮೂರ್ತಿ, ವಿ.ಹಿಂ.ಪ ಪ್ರಾಂತ ಉಪಾಧ್ಯಕ್ಷ ಹಾ. ರಾಮಪ್ಪ, ಕಾರ್ಯಾಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ರಾಮಮೂರ್ತಿ, ಖಜಾಂಚಿ ವೀರಭದ್ರಪ್ಪ ಇದ್ದರು.