ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮರುಸಾಲ ನೀಡದಿದ್ದರೆ ರೈತರಿಗೆ ಸಂಕಷ್ಟ

Lingaraj Badiger
Updated On : 27 May 2013, 10:57 am

ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 25
ಬಿಜೆಪಿ ಸರ್ಕಾರವು ರೈತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ 25 ಸಾವಿರ ವರೆಗಿನ ಸಾಲ ಮನ್ನಾ ಮಾಡಿತ್ತು. ಆ ರೈತರಿಗೆ ಈಗ ಮರುಸಾಲ ನೀಡದಿದ್ದರೆ ಅವರು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದರೆ, ಈಗಿನ ಸರ್ಕಾರ ಮರುಸಾಲ ನೀಡುತ್ತಿಲ್ಲ ಎಂದು ಬಿಜೆಪಿ ಮುಖಂಡ ಆರಗ ಜ್ಞಾನೇಂದ್ರ ಟೀಕಿಸಿದ್ದಾರೆ.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ರಾಜ್ಯದಲ್ಲಿ 14 ಲಕ್ಷ ರೈತರ 3,500 ಕೋಟಿ ಸಾಲ ಮನ್ನಾ ಮಾಡಲಾಗಿದೆ. ಜಿಲ್ಲೆಯಲ್ಲಿ 64,046 ಫಲಾನುಭವಿಗಳ 133.31 ಕೋಟಿ ಸಾಲ ಮನ್ನಾ ಆಗಿದೆ. ಆದರೆ, ಇದೂವರೆಗೆ ಒಬ್ಬ ರೈತರಿಗೂ ಡಿಸಿಸಿ ಬ್ಯಾಂಕ್ ಮರುಸಾಲ ನೀಡಿಲ್ಲ ಎಂದರು.
ವಿಧಾನಸಭೆ ಚುನಾವಣೆ ಕಾರಣದಿಂದ ರೈತರಿಗೆ ಹೊಸ ಸಾಲ ನೀಡುವುದನ್ನು ತಡೆಹಿಡಿಯಲಾಗಿತ್ತು. ಈಗ ಚುನಾವಣೆ ಮುಗಿದಿದೆ. ನಿರ್ಬಂಧ ಇಲ್ಲ. ಆದರೂ ರೈತರಿಗೆ ಹೊಸ ಸಾಲ ನೀಡುತ್ತಿಲ್ಲ ಎಂದ ಅವರು, ಚುನಾವಣೆ ವೇಳೆ ತಾವು ಪತ್ರ ಬರೆದಿದ್ದರಿಂದಲೇ ಸಾಲ ನೀಡುತ್ತಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಅದು ಸಂಪೂರ್ಣ ಸುಳ್ಳು. ಚುನಾವಣಾ ಆಯೋಗದ ಸೂಚನೆ ಮೇರೆಗೆ ತಡೆಹಿಡಿಯಲಾಗಿತ್ತು ಎಂದರು.
ಸಾಲ ಮನ್ನಾ ವಿವರ: ತೀರ್ಥಹಳ್ಳಿ ತಾಲೂಕಿನ 10,155 ಫಲಾನುಭವಿಗಳ 20.45 ಕೋಟಿ, ಶಿವಮೊಗ್ಗ ತಾಲೂಕಿನ 11,443 ರೈತರ 21.81 ಕೋಟಿ, ಭದ್ರಾವತಿ ತಾಲೂಕಿನ 6,187 ರೈತರ 12.81 ಕೋಟಿ, ಶಿಕಾರಿಪುರ ತಾಲೂಕಿನ 13,036 ರೈತರ 27.61 ಕೋಟಿ, ಸೊರಬ ತಾಲೂಕಿನ 6,119 ರೈತರ 14.07 ಕೋಟಿ, ಸಾಗರ ತಾಲೂಕಿನ 11,178 ರೈತರ 25.21 ಕೋಟಿ, ಹೊಸನಗರ ತಾಲೂಕಿನ 6,778 ರೈತರ 17.39 ಕೋಟಿ ಸಾಲ ಮನ್ನಾ ಆಗಿದೆ ಎಂದು ಆರಗ ಜ್ಞಾನೇಂದ್ರ ಮಾಹಿತಿ ನೀಡಿದರು.
ಈ ರೈತರು ಹೊಸ ಸಾಲ ಪಡೆಯದೇ ಕೃಷಿ ಚಟುವಟಿಕೆಯನ್ನು ಈ ಬಾರಿ ಕೈಗೊಳ್ಳಲು ಆಗುತ್ತಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಕ್ರಮವೆಸಗಿಲ್ಲ: ಎಂಪಿಎಂ ಕಾರ್ಖಾನೆಗೆ ಸಂಬಂಧಿಸಿದಂತೆ ಲೋಕಾಯುಕ್ತರಿಗೆ ಸಲ್ಲಿಸಿರುವ ದೂರು ರಾಜಕೀಯಪ್ರೇರಿತ ಎಂದು ಆರಗ ಜ್ಞಾನೇಂದ್ರ ಪುನರುಚ್ಚರಿಸಿದರು.
ಎಂಪಿಎಂ ನಷ್ಟಕ್ಕೆ ನಾನು ಹೊಣೆ ಅಲ್ಲ. ನಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗ 38 ಕೋಟಿ ನಷ್ಟವಿತ್ತು. ಬಿಡುವಾಗ 280 ಕೋಟಿ ನಷ್ಟವಾಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ನ್ಯೂಸ್ ಪ್ರಿಂಟ್ ದರ ದಿಢೀರ್ ಕುಸಿದಿದ್ದೇ ಇದಕ್ಕೆ ಪ್ರಮುಖ ಕಾರಣ. ಇದರ ಜತೆಗೆ ಕಾರ್ಮಿಕರಿಗೆ ವೇತನ ಹೆಚ್ಚಿಸಲಾಯಿತು ಎಂದರು.
ಚುನಾವಣೆ 2 ದಿನಗಳಿರುವಂತೆ ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಯಿತು. ಇದರ ಹಿಂದೆ ರಾಜಕಾರಣಿಯೊಬ್ಬರ ಕೈವಾಡ ಇದೆ ಎಂದ ಅವರು, ನನಗೆ ನ್ಯಾಯಾಲಯದ ಮೇಲೆ ವಿಶ್ವಾಸವಿದೆ. ಜಾಮೀನಿಗೆ ಅರ್ಜಿ ಸಲ್ಲಿಸುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ, ಪ್ರಧಾನ ಕಾರ್ಯದರ್ಶಿ ದತ್ತಾತ್ರಿ, ಡಿ.ಎಸ್. ಅರುಣ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement