ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಲಸೆ ಸಮಸ್ಯೆಗೆ ಪರಿಹಾರ ಅಗತ್ಯ

Lingaraj Badiger
Updated On : 27 May 2013, 10:56 am

ಕ.ಪ್ರ.ವಾರ್ತೆ, ಶಿಕಾರಿಪುರ, ಮೇ 26 ಕೃಷಿ ಚಟುವಟಿಕೆಗಾಗಿ ಅರಣ್ಯ ನಾಶ ವಿಪರೀತವಾಗುತ್ತಿದ್ದು, ಆಹಾರ ಧಾನ್ಯ ಬೆಳೆಯುವಲ್ಲಿ ಆಸಕ್ತಿ ಕುಂಠಿತಗೊಂಡು ವಲಸೆ ಹೋಗಿ ಪರಾವಲಂಬಿಯಾಗಿ ಬದುಕುತ್ತಿರುವ ಕೃಷಿಕರ ಈ ಸ್ಥಿತಿಗೆ ಜಾಣತನದ ಪರಿಹಾರವನ್ನು ಕಂಡುಹಿಡಿಯಬೇಕಾಗಿದೆ ಎಂದು ಶಿಕಾರಿಪುರ ತಾಲೂಕು 4 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಕ್ಷರಾದ ಪ್ರೊ. ಸ. ಉಷಾ ಹೇಳಿದರು.
ಭಾನುವಾರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ನಡೆದ 4 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕು ಸಾಹಿತ್ಯಿಕ, ರಾಜಕೀಯ, ಚಾರಿತ್ರಿಕವಾಗಿ ಮಹತ್ವದ ಜತೆಗೆ ಅತ್ಯಂತ ವೈಶಿಷ್ಠ್ಯಪೂರ್ಣವಾಗಿದೆ ಎಂದರು.
ಮಿಶ್ರಭಾಷೆ: ಮಲೆನಾಡು ಮತ್ತು ಬಯಲು ಸೀಮೆಗಳ ಮಿಶ್ರ ಭಾಷೆ ಸಂಸ್ಕೃತಿ ಹೊಂದಿದ ಐತಿಹಾಸಿಕ ತಾಲೂಕು ಹಲವು ಸಂಪತ್ತು, ವಿಶಿಷ್ಟವಾದ ಐತಿಹಾಸಿಕ ಹಿನ್ನೆಲೆಯಲ್ಲಿ ಹೊಂದಿದೆ ಎಂದ ಅವರು, ರಾಜಕೀಯವಾಗಿಯೂ ಮಹತ್ವದ ಸ್ಥಾನ ಪಡೆದ ತಾಲೂಕು ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ನೀಡಿ ದೇಶದ ಗಮನ ಸೆಳೆಯುವ ಕಾರ್ಯ ಮಾಡಿದೆ ಎಂದರು.
ಹರಿಹರನ 63 ಪುರಾತನ ರಗಳೆಗಳಲ್ಲಿ ಸಿರಿಯಾಳನ ಕಥೆಯು ತಾಲೂಕಿನ ಶಿರಾಳಕೊಪ್ಪದ ಜತೆ ತಳಕು ಹಾಕಿಕೊಂಡಿದ್ದು, ನಾಗರಬಂಡ 70ರ ಶಾಸನದಲ್ಲಿ ಶಿಕಾರಿಪುರವನ್ನು ಜೆಡಗೂರು ಎಂದೂ ಕರೆಯಲಾಗಿದೆ ಎಂದ ಅವರು, ಮೂಲದಲ್ಲಿ ಮಲ್ಲಯ್ಯ (ಮಳಯ)ಎಂಬುವವನಿಂದ ಸ್ಥಾಪನೆಯಾಗಿದ್ದರಿಂದ ಮಳಯನಹಳ್ಳಿ ಎಂದೂ ಕರೆಯಲ್ಪಡುತ್ತಿದ್ದಾಗಿ ತಿಳಿಸಿದರು.
ಮಹದಾನಪುರ: ಕೆಳದಿ ಅರಸರ ಕಾಲದಲ್ಲಿ ಮಹದಾನಪುರ ಎಂದು ಪ್ರಸಿದ್ಧವಾಗಿದ್ದ ತಾಲೂಕು ದಾನಧರ್ಮಗಳ ಭೂಮಿ ಎಂದೂ, ಬತ್ತ ಬೆಳೆಯುವ ನಾಡು ಎಂದೂ ವಿದ್ವಾಂಸರು ಅರ್ಥೈಸಿದ್ದಾರೆ ಎಂದ ಅವರು ಹೈದರಾಲಿ, ಟಿಪ್ಪು ಸುಲ್ತಾನ್ ಮತ್ತು ಮೈಸೂರು ಅರಸರ ಕಾಲದಲ್ಲಿ ಇಲ್ಲಿಯ ಸಮೃದ್ಧ ಅರಣ್ಯವೂ ಪ್ರಾಣಿ ಸಮೃದ್ಧಿಯೂ ಅವರನ್ನು ಆಕರ್ಷಿಸಿ ಶಿಕಾರಿಪುರ ಎಂಬ ಹೆಸರನ್ನು ಪಡೆದಿದ್ದಾಗಿ ಅವರು ತಿಳಿಸಿದರು.  
ಸಾಹಿತ್ಯಕವಾಗಿ ಬಳ್ಳಿಗಾವಿಯ ವೈರಾಗ್ಯದ ಬೆಳಕು ಅಲ್ಲಮಪ್ರಭುವಿನಿಂದ ಬೆಳಗಿದ್ದು, ಪ್ರಭುದೇವನ ತೀಕ್ಷ್ಣ ವೈಚಾರಿಕತೆ ಅನುಭವ ಮಂಟಪಕ್ಕೆ ಮಾರ್ಗದರ್ಶಿ ಎಂದ ಅವರು ಉಡುತಡಿಯ ಮಹಾದೇವಿಯಕ್ಕನ ತೀವ್ರ ವೈರಾಗ್ಯ, ವಚನಗಳ ಕಾವ್ಯ ಸೌಂದರ್ಯ, ಇಂದಿನ ಸ್ತ್ರೀ ವಿಮೋಚನೆಯ, ಸ್ತ್ರೀವಾದಿ ಚಿಂತನೆಯ ಕಾಲದಲ್ಲಿ ಹೊಸ ಪ್ರಸ್ತುತತೆಯನ್ನು ಪಡೆದುಕೊಂಡಿದೆ ಎಂದರು.
ಬೋಳು ಗುಡ್ಡ: ಗ್ರಾಮೀಣ ಬದುಕಿಗೆ ವಿಷವಾಗಿರುವ ಅರಣ್ಯ ನಾಶದಿಂದ ಎಲ್ಲಡೆ ಗುಡ್ಡಗಳು ಬೋಳಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ವೈಜ್ಞಾನಿಕವಾಗಿ ಮಾರುಕಟ್ಟೆಯ ಅಧ್ಯಯನವಿಲ್ಲದೆ ಎಲ್ಲರೂ ಒಂದೇ ರೀತಿಯ ಬೆಳೆ ಬೆಳೆದು ಕೃಷಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂದರು.
ವಾಣಿಜ್ಯ ಬೆಳೆಯತ್ತ ಗಮನಹರಿಸುತ್ತಿರುವ ಯುವಕರು ಆಧುನಿಕ ಸೌಲಭ್ಯಕ್ಕಾಗಿ ವಲಸೆ ಹೋಗುತ್ತಿದ್ದು ಇಲ್ಲವೇ ಆಲಸ್ಯದ ಜೀವನದ ಮೂಲಕ ಅರ್ಧ ಪರಾವಲಂಭಿಯಾಗಿ ಬದುಕುತ್ತಿದ್ದು ಇದಕ್ಕೆ ಜಾಣತನದ ದೀರ್ಘಾವದಿ ಪರಿಹಾರವನ್ನು ಕಂಡುಹಿಡಿಯಬೇಕಾಗಿದೆ ಎಂದರು.
ಸಮ್ಮೇಳನ ಉದ್ಘಾಟಿಸಿದ ಸಂಸದ ರಾಘವೇಂದ್ರ, ನಾಟ್ಯರಾಣಿ ಶಾಂತಲೆ, ಅಕ್ಕಮಹಾದೇವಿ, ಅಲ್ಲಮ ಪ್ರಭು,ಅಜಗಣ್ಣ, ಮುಕ್ತಾಯಕ್ಕ ಮತ್ತಿತರ ಮಹಾನ್ ಶಿವಶರಣರಿಗೆ ಜನ್ಮ ನೀಡಿದ ತಾಲೂಕು ಇದೀಗ ವಿದ್ಯಾಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ ಎಂದರು.
ಕಸಾಪ ಜಿಲ್ಲಾದ್ಯಕ್ಷ ಡಿ. ಮಂಜುನಾಥ, ತಾಲೂಕು ಅಧ್ಯಕ್ಷ ಶಿವರಂಜಿನಿ ಸುದರ್ಶನ್, ತಾಪಂ ಅಧ್ಯಕ್ಷ ಹನುಮಂತಪ್ಪ, ಇಒ ಚಂದ್ರಶೇಖರ್, ಚಂದ್ರಶೇಖರ್ ಸೇರೆಗಾರ್, ಕೃಷ್ಣಪ್ಪ, ಹುಚ್ರಾಯಪ್ಪ, ಬಿಇಒ ಸಿದ್ದಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.
ರಾಷ್ಟ್ರ ಧ್ವಜಾರೋಹಣವನ್ನು ತಹಸೀಲ್ದಾರ್ ಪಿ.ಐ. ಗಣಾಚಾರಿ, ನಾಡ ಧ್ವಜಾರೋಹಣವನ್ನು ಬಿಇಒ ಸಿದ್ದಲಿಂಗಪ್ಪ, ಕಸಾಪ ಧ್ವಜಾರೋಹಣವನ್ನು ಅಧ್ಯಕ್ಷ ಸುದರ್ಶನ್ ನೆರವೇರಿಸಿದರು. ಈಸಂದರ್ಭದಲ್ಲಿ ಹಲವಾರು ಗಣ್ಯರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement