ಅಪಘಾತ: ರೊಚ್ಚಿಗೆದ್ದ ಜನರಿಂದ ಬಸ್ಗೆ ಬೆಂಕಿ
ಶಿವಮೊಗ್ಗ: ಅಪಘಾತದಲ್ಲಿ ಯುವಕ ಮೃತಪಟ್ಟ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ನಾಗರಿಕರು ಕೆಎಸ್ಆರ್ಟಿಸಿ ಬಸ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಊರುಗಡೂರು ಬೈಪಾಸ್ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ. ಘಟನೆಯಿಂದಾಗಿ ಕೆಲಕಾಲ ಊರುಗಡೂರು ವ್ಯಾಪ್ತಿಯಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿತ್ತು. ನೂರಾರು ಸಂಖ್ಯೆಯಲ್ಲಿ ನಾಗರಿಕರು ಜಮಾಯಿಸಿ ರಸ್ತೆತಡೆ ನಡೆಸಿದರಲ್ಲದೇ, ಬಸ್ಗೆ ತಗುಲಿದ್ದ ಬೆಂಕಿ ನಂದಿಸಲು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳಕ್ಕೂ ಅಡ್ಡಪಡಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.
ಏನಾಯ್ತು?: ಭಾನುವಾರ ತಡರಾತ್ರಿ ಬೈಪಾಸ್ ರಸ್ತೆಯ ಊರುಗಡೂರು ಬಳಿ ಭದ್ರಾವತಿ ಕಡೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಬೈಕ್ ಹಿಂಬದಿ ಕುಳಿತಿದ್ದ ಜಿಷಾನ್ ಅಲಿ (21) ತೀವ್ರವಾಗಿ ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಜಮೀರ್ ಅಹ್ಮದ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಸೋಮವಾರ ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ ವಾದಿ-ಎ-ಹುದಾ, ಊರಗಡೂರು ಹಾಗೂ ಸುತ್ತಲಿನ ಬಡಾವಣೆಯ ಒಂದು ಕೋಮಿಗೆ ಸೇರಿದ ನಿವಾಸಿಗಳು ಅಪಘಾತ ನಡೆದ ಸ್ಥಳಕ್ಕೆ ಆಗಮಿಸಿ ಟೈರ್ಗೆ ಬೆಂಕಿ ಹಚ್ಚಿದರು. ಇದೇ ವೇಳೆ ಶಿವಮೊಗ್ಗ ಬಸ್ ನಿಲ್ದಾಣದಿಂದ ಭದ್ರಾವತಿಯೆಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ವೊಂದನ್ನು ನಿಲ್ಲಿಸಿ ಕಲ್ಲು ತೂರಾಟ ನಡೆಸಿದರು. ನಂತರ ಪ್ರಯಾಣಿಕರನ್ನು ಕೆಳಗಿಳಿಸಿ ಬಸ್ಗೆ ಬೆಂಕಿ ಹಚ್ಚಿದ್ದಾರೆ.